ಇಂದು ಭಾರತ-ವಿಂಡೀಸ್ ಮೊದಲ ಅಭ್ಯಾಸ ಪಂದ್ಯ
ಶಮಿ ಫಿಟ್‌ನೆಸ್, ಆರಂಭಿಕರ ಫಾರ್ಮ್ ಮೇಲೆ ಕುಂಬ್ಳೆ ಕಣ್ಣು

ಸೈಂಟ್‌ಕಿಟ್ಸ್(ವೆಸ್ಟ್‌ಇಂಡೀಸ್), ಜು.8: ಡಬ್ಲುಐಸಿಬಿ ಅಧ್ಯಕ್ಷರ ಇಲೆವೆನ್ ವಿರುದ್ಧ ದ್ವಿದಿನ ಅಭ್ಯಾಸ ಪಂದ್ಯವನ್ನು ಆಡುವುದರೊಂದಿಗೆ ವಿರಾಟ್ ಕೊಹ್ಲಿ ನಾಯಕತ್ವದ ಭಾರತದ ಟೆಸ್ಟ್ ತಂಡ ವಿಂಡೀಸ್ ಪ್ರವಾಸ ಆರಂಭಿಸಲಿದೆ.
ನೂತನ ಕೋಚ್ ಅನಿಲ್ ಕುಂಬ್ಳೆ ವೇಗದ ಬೌಲರ್ ಮುಹಮ್ಮದ್ ಶಮಿ ಫಿಟ್‌ನೆಸ್ ಹಾಗೂ ಫಾರ್ಮ್‌ನಲ್ಲಿಲ್ಲದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್‌ರತ್ತ ಹೆಚ್ಚಿನ ನಿಗಾ ಇಡಲಿದ್ದಾರೆ. 49 ದಿನಗಳ ವಿಂಡೀಸ್ ಪ್ರವಾಸ ಕೋಚ್ ಕುಂಬ್ಳೆಗೆ ಹೊಸ ಸವಾಲಾಗಿ ಪರಿಣಮಿಸಿದೆ.
ದ್ವಿದಿನ ಅಭ್ಯಾಸ ಪಂದ್ಯ ಅಧಿಕೃತವಾಗಿದ್ದು, ಉಭಯ ತಂಡಗಳು ತಲಾ ಒಂದು ದಿನ ಬ್ಯಾಟಿಂಗ್ ಮಾಡಲಿವೆ. ಎಲ್ಲ ಆಟಗಾರರಿಗೆ ಆಡುವ ಅವಕಾಶವಿರುತ್ತದೆ. ವಿಂಡೀಸ್ ಇಲೆವೆನ್ ತಂಡದಲ್ಲಿ ಆರು ಹಾಲಿಟೆಸ್ಟ್ ಆಟಗಾರರಿದ್ದಾರೆ. ಅವರುಗಳೆಂದರೆ ತಂಡದ ನಾಯಕ ಲಿಯೊನ್ ಜಾನ್ಸನ್, ಜೆರ್ಮೈನ್ ಬ್ಲಾಕ್‌ವುಡ್, ರಾಜೇಂದ್ರ ಚಂದ್ರಿಕ, ಶೇನ್ ಡೌರಿಚ್, ಶೈ ಹೋಪ್ ಹಾಗೂ ಜೊಮೆಲ್ ವಾರ್ರಿಕನ್.
ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಶಮಿ, ದೀರ್ಘ ಸಮಯದ ಬಳಿಕ ತಂಡಕ್ಕೆ ವಾಪಸಾಗಿರುವ ಲಂಬೂ ವೇಗಿ ಇಶಾಂತ್ ಶರ್ಮ ಹಾಗೂ ಉಮೇಶ್ ಯಾದವ್‌ಗೆ ಅಭ್ಯಾಸ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಇದು ಕೊಹ್ಲಿಯ ಗೇಮ್‌ಪ್ಲಾನ್‌ಗೆ ಮುಖ್ಯವಾಗಿದೆ.
ಕೋಚ್ ಕುಂಬ್ಳೆಗೆ ಮೀಸಲು ಆಟಗಾರರಾದ ಭುವನೇಶ್ವರ ಕುಮಾರ್ ಹಾಗೂ ಶಾರ್ದೂಲ್ ಠಾಕೂರ್‌ರನ್ನು ಪರೀಕ್ಷಿಸಲು ಇದು ಉತ್ತಮ ಅವಕಾಶವಾಗಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಧವನ್, ಮುರಳಿ ವಿಜಯ್‌ರೊಂದಿಗೆ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.
ನಾಯಕ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ.ಕೆಎಲ್ ರಾಹುಲ್ ಅಭ್ಯಾಸ ಪಂದ್ಯಗಳಲ್ಲಿ ಮಿಂಚಿದರೆ ಧವನ್‌ಗೆ ಸ್ಪರ್ಧೆಯೊಡ್ಡುವುದು ಗ್ಯಾರಂಟಿ.







