ಸೆರೆನಾಗೆ ಐತಿಹಾಸಿಕ ಗೆಲುವಿನ ಗುರಿ
ಇಂದು ಮಹಿಳೆಯರ ಸಿಂಗಲ್ಸ್ ಫೈನಲ್

ಲಂಡನ್, ಜು.8: ಐತಿಹಾಸಿಕ ಗೆಲುವಿನ ಗುರಿಯೊಂದಿಗೆ ವಿಶ್ವದ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ಶನಿವಾರ ಇಲ್ಲಿ ನಡೆಯಲಿರುವ ವಿಂಬಲ್ಡನ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್‌ರನ್ನು ಎದುರಿಸಲಿದ್ದಾರೆ.
ಸೆರೆನಾ ಶನಿವಾರ ಪ್ರಶಸ್ತಿ ಜಯಿಸಲು ಯಶಸ್ವಿಯಾದರೆ ಓಪನ್ ಯುಗ ಆರಂಭವಾದ ಬಳಿಕ 22 ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ ಎರಡನೆ ಆಟಗಾರ್ತಿ ಎನಿಸಿಕೊಳ್ಳಲಿದ್ದಾರೆ. ಸ್ಟೆಫಿ ಗ್ರಾಫ್ ಸಾಧನೆಯನ್ನು ಸರಿಗಟ್ಟಲಿದ್ದಾರೆ.
ಕೆರ್ಬರ್ 20 ವರ್ಷಗಳ ಬಳಿಕ ವಿಂಬಲ್ಡನ್ ಕಿರೀಟ ಧರಿಸಿದ ಮೊದಲ ಜರ್ಮನಿ ಆಟಗಾರ್ತಿ ಎನಿಸಿಕೊಳ್ಳುವ ಕನಸು ಕಾಣುತ್ತಿದ್ದಾರೆ. ಸೆಮಿಫೈನಲ್‌ನಲ್ಲಿ ಸೆರೆನಾರ ಸಹೋದರಿ ವೀನಸ್ ವಿಲಿಯಮ್ಸ್‌ರನ್ನು ಮಣಿಸಿರುವ ಕೆರ್ಬರ್ ಫೈನಲ್‌ನಲ್ಲಿ ಸೆರೆನಾರನ್ನು ಮಣಿಸುವ ವಿಶ್ವಾಸದಲ್ಲಿದ್ದಾರೆ.
ಜನವರಿಯಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಸೆರೆನಾರನ್ನು ಮಣಿಸಿದ್ದ ಕೆರ್ಬರ್ ಇದೀಗ ಈ ಋತುವಿನಲ್ಲಿ ಎರಡನೆ ಬಾರಿ ಸೆರೆನಾರನ್ನು ಫೈನಲ್‌ನಲ್ಲಿ ಎದುರಿಸುತ್ತಿದ್ದಾರೆ.
ಸೆಪ್ಟಂಬರ್‌ನಲ್ಲಿ 35ರ ಹರೆಯಕ್ಕೆ ಕಾಲಿಡಲಿರುವ ಸೆರೆನಾ ಈವರೆಗೆ ಆರು ಬಾರಿ ವಿಂಬಲ್ಡನ್ ಚಾಂಪಿಯನ್ ಆಗಿದ್ದು, ಈ ಬಾರಿಯೂ ಪ್ರಶಸ್ತಿಗೆಲ್ಲುವ ಫೇವರಿಟ್ ಆಟಗಾರ್ತಿಯಾಗಿದ್ದಾರೆ.
ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಇಬ್ಬರು ಆಟಗಾರ್ತಿಯರು ಈತನಕ ಹುಲ್ಲು-ಹಾಸಿನ ಅಂಗಳದಲ್ಲಿ ಆಡಿಲ್ಲ.ಹಾಲಿ ಚಾಂಪಿಯನ್ ಸೆರೆನಾ ಫೈನಲ್‌ಗೆ ತಲುಪುವ ಮೊದಲು ಕೇವಲ ಒಂದು ಸೆಟ್‌ಕಳೆದುಕೊಂಡಿದ್ದಾರೆ.
ಮತ್ತೊಂದೆಡೆ, ಕೆರ್ಬರ್ ಒಂದೂ ಸೆಟನ್ನು ಸೋತಿಲ್ಲ. 9 ವರ್ಷಗಳ ಹಿಂದೆ ಕೆರ್ಬರ್‌ರನ್ನು ಮೊದಲ ಬಾರಿ ಮುಖಾಮುಖಿಯಾಗಿರುವ ಸೆರೆನಾ 5-2 ಗೆಲುವಿನ ದಾಖಲೆ ಹೊಂದಿದ್ದಾರೆ.
ಸೆರೆನಾ ಕಳೆದ ವರ್ಷ ವಿಂಬಲ್ಡನ್ ಸಹಿತ ನಾಲ್ಕು ಪ್ರಮುಖ ಟೂರ್ನಿಗಳ ಪೈಕಿ ಮೂರರಲ್ಲಿ ಚಾಂಪಿಯನ್ ಆಗಿದ್ದರು.ಈ ವರ್ಷ ಆಸ್ಟ್ರೇಲಿಯನ್ ಓಪನ್ ಹಾಗೂ ಫ್ರೆಂಚ್ ಓಪನ್ ಫೈನಲ್‌ನಲ್ಲಿ ಕ್ರಮವಾಗಿ ಕೆರ್ಬರ್ ಹಾಗೂ ಮುಗುರುಝಗೆ ಶರಣಾಗಿದ್ದರು







