ಕೇರಳ ಕೆಎಸ್‌ಇಬಿ ಬಾಸ್ಕೆಟ್‌ಬಾಲ್ ಆಟಗಾರ್ತಿಯರಿಗೆ ತರಬೇತಿ
ಮಣಿಪಾಲ ವಿವಿ ಕ್ರೀಡಾ ವಿಜ್ಞಾನ ಪ್ರಯೋಗಾಲಯದಲ್ಲಿ

ಮಣಿಪಾಲ, ಜು.8: ಕೇರಳ ರಾಜ್ಯ ವಿದ್ಯುಚ್ಛಕ್ತಿ ಮಂಡಳಿ ಮಹಿಳಾ ಬಾಸ್ಕೆಟ್‌ಬಾಲ್ ತಂಡದ 7 ಮಂದಿ ಆಟಗಾರ್ತಿಯರು ಮಣಿಪಾಲ ವಿವಿಯ ಒಳಾಂಗಣ ಕ್ರೀಡಾ ಸಂಕೀರ್ಣ ‘ಮರೀನಾ’ದಲ್ಲಿ ನೂತನವಾಗಿ ಕಾರ್ಯಾಚರಿಸುತ್ತಿರುವ ಅತ್ಯಾಧುನಿಕ ಕ್ರೀಡಾವಿಜ್ಞಾನ ವೈದ್ಯಕೀಯ ಪ್ರಯೋಗಾಲಯ (ಸ್ಪೋರ್ಟ್ಸ್ ಸೈನ್ಸ್ ಮೆಡಿಸಿನ್ ಲ್ಯಾಬ್)ದಲ್ಲಿ ಆಟದ ವೇಳೆ ಗಾಯಗೊಳ್ಳದಂತೆ ತಡೆಯುವ ವೈಜ್ಞಾನಿಕ ವಿಧಾನ ಹಾಗೂ ಪ್ರದರ್ಶನದ ಮಟ್ಟವನ್ನು ಮೇಲ್ಮಟ್ಟಕ್ಕೇರಿಸುವ ಕುರಿತು ವಿಶೇಷ ತರಬೇತಿಯನ್ನು ಪಡೆಯುತ್ತಿದ್ದಾರೆ.‘ಇದು ನಮ್ಮ ವಿಭಾಗಕ್ಕೆ ದೊರಕಿದ ಮೊದಲ ಅವಕಾಶವಾಗಿದೆ. ಈ ಸೌಲಭ್ಯಗಳನ್ನು ರಾಜ್ಯಮಟ್ಟದ ಹಾಗೂ ರಾಷ್ಟ್ರೀಯಮಟ್ಟದ ಆಟಗಾರರು ಬಳಸಿಕೊಳ್ಳಲು ಅವಕಾಶಗಳಿವೆ. ಕ್ರೀಡಾಪಟುವೊಬ್ಬ ತನ್ನ ಕ್ರೀಡಾಕ್ಷಮತೆಯ ವೇಗ, ಬಲ, ದೀರ್ಘಕಾಲ ಕ್ರೀಡಾ ಸಾಮರ್ಥ್ಯವನ್ನು ಉಳಿಸಿಕೊಳ್ಳುವ ವಿಧಾನದ ಕುರಿತು ಇಲ್ಲಿ ತರಬೇತಿ ಪಡೆಯಬಹುದು’ ಎಂದು ಮಣಿಪಾಲದ ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸ್‌ನ ಎಕ್ಸಸೈಸ್ ಆ್ಯಂಡ್ ಸ್ಪೋರ್ಟ್ಸ್‌ಸೈನ್ಸ್ ವಿಭಾಗದ ಮುಖ್ಯಸ್ಥ ಹಾಗೂ ಸಹಾಯಕ ಪ್ರೊಫೆಸರ್ ಡಾ.ಫಿಡ್ಡಿ ಡೇವಿಸ್ ತಿಳಿಸಿದರು.
ನಾವು ಈ ಕ್ರೀಡಾ ಪ್ರಯೋಗಾಲಯವನ್ನು ಇನ್ನಷ್ಟು ವಿಸ್ತರಿಸುವ ಯೋಜನೆಯನ್ನು ಹೊಂದಿದ್ದು, ಇದನ್ನು ದೇಶದ ಅತ್ಯುತ್ತಮ ಕ್ರೀಡಾ ವಿಜ್ಞಾನ ಕೇಂದ್ರವಾಗಿ ರೂಪಿಸುವ ಗುರಿಯನ್ನು ಹಾಕಿಕೊಂಡಿದ್ದೇವೆ ಎಂದು ಡಾ.ಫಿಡ್ಡಿ ತಿಳಿಸಿದರು.
ಮಣಿಪಾಲ ವಿವಿಯ ಈ ಕ್ರೀಡಾ ಪ್ರಯೋಗಾಲಯದಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಪ್ರಶಂಸಿಸಿದ ಕೆಎಸ್‌ಇಬಿ ಕೋಚ್ ಅಜು ಜಾಕೋಬ್, ಇಂಥ ಸೌಲಭ್ಯವನ್ನು ದೇಶದ ಯಾವುದೇ ಭಾಗದಲ್ಲಿ ನಾನು ನೋಡಿಲ್ಲ. ಟೂರ್ನಿಯೊಂದರಲ್ಲಿ ಭಾಗವಹಿಸಿದ್ದಾಗ ಈ ಕೇಂದ್ರದ ಕುರಿತು ನನಗೆ ಮಾಹಿತಿ ದೊರಕಿತು. ಹೀಗಾಗಿ ಇಲ್ಲಿಗೆ ನನ್ನ ತಂಡದ ಆಟಗಾರ್ತಿಯರನ್ನು ಕರೆತರಲು ನಿರ್ಧರಿಸಿದೆ ಎಂದರು.
ಕೇರಳ ರಾಜ್ಯ ವಿದ್ಯುಚ್ಛಕ್ತಿ ಮಂಡಳಿ (ಕೆಎಸ್‌ಇಬಿ)ಯ ಆಟಗಾರ್ತಿಯರಾದ ಸ್ಟೇಫಿ ನಿಕ್ಸನ್, ಜೀನಾ ಪಿ.ಎಸ್., ಅಂಜನಾ ಪಿ.ಜಿ. ದೇಶವನ್ನು ಪ್ರತಿನಿಧಿಸುತ್ತಿದ್ದು, ಉಳಿದಂತೆ ರಾಜಮೋಳ್, ಶಿಲ್ಜಿ ಜೋರ್ಜ್, ಪ್ರಾಮಿ ಪಿ.ಲಾಲ್, ಅಮೃತಾ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಶ್ರೀದೇವಿ ಪಿ.ಆರ್.(ಮ್ಯಾನೇಜರ್) ಮತ್ತು ಅಜಿ ಜಾಕೋಬ್ (ಕೋಚ್) ಕೂಡಾ ತರಬೇತಿಯಲ್ಲಿ ಭಾಗವಹಿಸಿದ್ದಾರೆ.







