ಐರ್ಲಂಡ್: ಗರ್ಭಪಾತಕ್ಕೆ ಅವಕಾಶ ನೀಡುವ ಮಸೂದೆಗೆ ಸೋಲು
ಡಬ್ಲಿನ್ (ಐರ್ಲಂಡ್), ಜು. 8: ಭ್ರೂಣ ಬದುಕುಳಿಯದಂಥ ಅಸಹಜತೆಗಳಿರುವ ಪ್ರಕರಣಗಳಲ್ಲಿ ಗರ್ಭಪಾತಕ್ಕೆ ಅನುಮತಿ ನೀಡುವ ಪ್ರಸ್ತಾಪಿತ ಮಸೂದೆಯೊಂದನ್ನು ಐರ್ಲಂಡ್‌ನ ಸಂಸತ್ತು ಗುರುವಾರ ತಿರಸ್ಕರಿಸಿದೆ.
ಈ ಮಸೂದೆಯು ಐರಿಸ್ ಸಂವಿಧಾನದ ಎಂಟನೆ ತಿದ್ದುಪಡಿಗೆ ವಿರುದ್ಧವಾಗುತ್ತದೆ ಎಂಬುದಾಗಿ ಸರಕಾರದ ಉನ್ನತ ಕಾನೂನು ಸಲಹಾಗಾರ ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ, ಮಸೂದೆಯ ವಿರುದ್ಧವಾಗಿ ಮತಹಾಕುವಂತೆ ಪ್ರಧಾನಿ ಎಂಡ ಕೆನ್ನಿ ತನ್ನ ‘ಫೈನ್ ಗೇಲ್’ ಪಕ್ಷದ ಸದಸ್ಯರಿಗೆ ಸೂಚನೆ ನೀಡಿದ್ದರು.
ಹೊಟ್ಟೆಯಲ್ಲಿರುವ ಮಗು ಮತ್ತು ತಾಯಿಯ ಪ್ರಾಣಗಳು ಬದುಕುವ ಸಮಾನ ಹಕ್ಕನ್ನು ಸಂವಿಧಾನದ ಎಂಟನೆ ತಿದ್ದುಪಡಿ ನೀಡುತ್ತದೆ.
‘‘ಈ ಮಸೂದೆಯು ಮಹಿಳೆಯರಿಗೆ ಕೆಟ್ಟದಾಗಿದೆ ಹಾಗೂ ವೈದ್ಯಕೀಯವಾಗಿ ಪರಿಪೂರ್ಣವಲ್ಲ’’ ಎಂದು ಈ ವಾರದ ಆರಂಭದಲ್ಲಿ ಪ್ರಧಾನಿ ಹೇಳಿದ್ದರು.
ಫೈನ್ ಗೇಲ್ ಮತ್ತು ಫಿಯಾನ ಫೇಲ್ ಪಕ್ಷಗಳ ಸಂಸದರು ಮಸೂದೆಯ ವಿರುದ್ಧವಾಗಿ ಮತ ಚಲಾಯಿಸಿದರು. ಮಸೂದೆಯು 95-45 ಮತಗಳ ಅಂತರದಿಂದ ಸೋತಿತು.
ತಾಯಿಯ ಪ್ರಾಣಕ್ಕೆ ನೈಜ ಅಪಾಯವಿರದಿದ್ದರೆ ಐರ್ಲಂಡ್‌ನಲ್ಲಿ ಗರ್ಭಪಾತ ನಡೆಸುವ ಹಾಗಿಲ್ಲ. ಕಾನೂನು ಉಲ್ಲಂಘಿಸಿದರೆ ಮಹಿಳೆಯರು 14 ವರ್ಷಗಳ ಜೈಲುವಾಸಕ್ಕೆ ಗುರಿಯಾಗಬೇಕಾಗುತ್ತದೆ.
ಆದಾಗ್ಯೂ, ಮಹಿಳೆಯರು ವಿದೇಶಗಳಿಗೆ ಹೋಗಿ ಗರ್ಭಪಾತ ಮಾಡಿಸಿಕೊಂಡು ಬರಬಹುದಾಗಿದೆ. ಪ್ರತೀ ವರ್ಷ ಸಾವಿರಾರು ಮಹಿಳೆಯರು ವಿದೇಶಗಳಿಗೆ, ಮುಖ್ಯವಾಗಿ ಇಂಗ್ಲೆಂಡ್‌ಗೆ ಹೋಗಿ ಗರ್ಭಪಾತ ಮಾಡಿಸಿಕೊಳ್ಳುತ್ತಾರೆ.







