ಶ್ರವಣದೋಷದ ಮಕ್ಕಳಿಗೆ ಕಿವಿಯಚ್ಚು ತೆಗೆಯುವ ಶಿಬಿರ

ಉಡುಪಿ, ಜು.8: ಶ್ರವಣ ದೋಷ ಹೊಂದಿರುವ ಮಕ್ಕಳಿಗೆ ಕಿವಿ ಅಚ್ಚು ತೆಗೆಯುವ ಶಿಬಿರವನ್ನು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಅಜ್ಜರಕಾಡು ರೆಡ್‌ಕ್ರಾಸ್ ಭವನದಲ್ಲಿ ಶುಕ್ರವಾರ ಏರ್ಪಡಿಸಲಾಗಿತ್ತು.
ಶಿಬಿರವನ್ನು ಉದ್ಘಾಟಿಸಿದ ಪ್ರಭಾರ ಜಿಲ್ಲಾಧಿಕಾರಿ ಹಾಗೂ ಉಡುಪಿ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮಾತನಾಡಿ, ಜಿಲ್ಲೆಯ ವಿದ್ಯಾರ್ಥಿ ಗಳ ಐಕ್ಯೂ ಮಟ್ಟ ರಾಜ್ಯದ ಇತರ ಜಿಲ್ಲೆಗಳ ವಿದ್ಯಾರ್ಥಿಗಳಿಗಿಂತ ಹೆಚ್ಚಿದ್ದು, ಇಂತಹ ಸಾಮರ್ಥ್ಯವಿರುವ ಮಕ್ಕಳು ಶ್ರವಣ ಸಮಸ್ಯೆಯಿಂದ ಅವಕಾಶಗಳಿಂದ ವಂಚಿತ ರಾಗಬಾರದೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಒಟ್ಟು 150 ಮಕ್ಕಳಿಗೆ ಉತ್ತಮ ಗುಣಮಟ್ಟದ ಶ್ರವಣ ಸಾಧನವನ್ನು ವಿತರಿಸಲು ಉದ್ದೇಶಿ ಸಲಾಗಿದೆ ಎಂದರು.
ಮೊದಲ ಹಂತದಲ್ಲಿ ವೈಜ್ಞಾನಿಕವಾಗಿ ಕಿವಿಯನ್ನು ಪರಿಶೀಲಿಸಿ, ಮುಂದೆ ಬೆಂಗಳೂರಿನಲ್ಲಿ ಶ್ರವಣ ಸಾಧನಗಳನ್ನು ವಿತರಿಸಲಾಗುವುದು. 40 ಸಾವಿರ ರೂ. ಮೊತ್ತದ ಒಟ್ಟು 150 ಮಂದಿಗೆ ಆರು ಲಕ್ಷ ರೂ. ಮೊತ್ತದ ಶ್ರವಣ ಸಾಧನೆಗಳನ್ನು ನೀಡಲಾಗುವುದು ಎಂದವರು ತಿಳಿಸಿದರು. ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ನಿರಂಜನ್ ಭಟ್, ಬೆಂಗಳೂರು ಸ್ಟಾರ್ ಕೀ ಹಿಯರಿಂಗ್ ಏಡ್‌ನ ಏರಿಯಾ ಮ್ಯಾನೇಜರ್ ಸಾಯಿಪ್ರಸಾದ್, ಭಾರತಿ ಕಣ್ಣನ್, ರೆಡ್‌ಕ್ರಾಸ್ ಉಪಾಧ್ಯಕ್ಷ ಡಾ. ಅಶೋಕ್ ಕುಮಾರ್ ಓಕುಡೆ ಉಪಸ್ಥಿತರಿದ್ದರು. ಉಡುಪಿ ರೆಡ್‌ಕ್ರಾಸ್ ಚೆಯರ್‌ಮೆನ್ ಡಾ.ಉಮೇಶ್ ಪ್ರಭು ಸ್ವಾಗತಿಸಿದರು. ಕಾರ್ಯದರ್ಶಿ ಜಿ.ಸಿ.ಜನಾರ್ದನ್ ವಂದಿಸಿದರು.





