ಮಂಗಳೂರು ರೈಲು ನಿಲ್ದಾಣದಲ್ಲಿ 2 ಎಸ್ಕಾಲೇಟರ್‌ಗೆ ಚಾಲನೆ

ಮಂಗಳೂರು, ಜು.8: ನಗರದ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ದಕ್ಷಿಣ ರೈಲ್ವೆ ವಿಭಾಗದಿಂದ ಪ್ರಯಾಣಿಕರು ಅದರಲ್ಲೂ ಮುಖ್ಯವಾಗಿ ವಯೋ ವೃದ್ಧರು ಆರಾಮವಾಗಿ ಸಾಗಲು ಅನು ಕೂಲವಾಗುವಂತೆ 2 ಕೋ.ರೂ. ವೆಚ್ಚ ದಲ್ಲಿ ನಿರ್ಮಿಸಲಾಗಿರುವ ಎರಡು ಎಸ್ಕಾಲೇಟರ್‌ಗಳಿಗೆ ಸಂಸದ ನಳಿನ್‌ಕುಮಾರ್ ಕಟೀಲು ಇಂದು ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ನಗರದ ಕೇಂದ್ರ ರೈಲ್ವೆ ನಿಲ್ದಾಣದಲ್ಲಿನ ಪ್ರಮುಖ ಹಲವು ಬೇಡಿಕೆಗಳಲ್ಲಿ ಎಸ್ಕಾಲೇಟರ್ ಕೂಡಾ ಒಂದಾಗಿದ್ದು, ಅದನ್ನು ನೆರವೇರಿಸಲಾ ಗಿದೆ ಎಂದರು. ಶಿರಾಡಿ ಘಾಟ್ ಮೂಲಕ ಇನ್ನೆರಡು ರೈಲುಗಳ ಸಂಚಾರಕ್ಕೆ ಅವಕಾಶವಿದೆ. ಮಂಗಳೂರು- ಬೆಂಗಳೂರು ಮಧ್ಯೆ ಇನ್ನಷ್ಟು ರೈಲು ಗಳ ಸಂಚಾರಕ್ಕೆ ಸಾರ್ವಜನಿಕರ ಬೇಡಿಕೆ ಇದೆ. ಕಂಕನಾಡಿ ರೈಲ್ವೆ ಸ್ಟೇಷನ್ ಅಭಿವೃದ್ಧಿ ಆಗಬೇಕಾಗಿದೆ. ಇದೇ ವೇಳೆ ಕೆಲವೊಂದು ರೈಲುಗಳು ಕೇವಲ ಜಂಕ್ಷನ್‌ವರೆಗೆ ಮಾತ್ರ ಬರುತ್ತಿದ್ದು, ಅವುಗಳು ಕೇಂದ್ರ ರೈಲು ನಿಲ್ದಾಣದ ವರೆಗೂ ಬರುವಂತೆ ಮಾಡಬೇಕೆಂಬ ಆಗ್ರಹವಿದೆ. ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗದ ಬೇಡಿಕೆ ಬಹಳಷ್ಟು ವರ್ಷಗಳದ್ದಾಗಿದೆ. ದಕ್ಷಿಣ ರೈಲ್ವೆ, ನೈಋತ್ಯ ರೈಲ್ವೆ ಹಾಗೂ ಕೊಂಕಣ ರೈಲ್ವೆ ನಿಗಮದಲ್ಲಿ ಮಂಗಳೂರು ಹಂಚಿ ಹೋಗಿದ್ದು ತ್ರಿಶಂಕು ಸ್ಥಿತಿಯಲ್ಲಿದೆ. ದಕ್ಷಿಣ ರೈಲ್ವೆ ಅಧೀನದಲ್ಲಿ ಕೇವಲ 13 ಕಿ.ಮೀ. ಮಾರ್ಗಮಾತ್ರ ಬರುತ್ತಿದೆ ಎಂದವರು ಹೇಳಿದರು. ಪ್ರಸ್ತುತ ಮಂಗಳೂರು- ಮಡಂಗಾವ್ ನಡುವೆ ಸಂಚರಿಸುತ್ತಿ ರುವ ಇಂಟರ್ ಸಿಟಿ ರೈಲನ್ನು ಮುಂಬೈವರೆಗೆ ವಿಸ್ತರಿ ಸುವ ಪ್ರಸ್ತಾಪ ರೈಲ್ವೆ ಸಚಿವಾಲ ಯದ ಮುಂದಿದೆ. ಕಾಸರಗೋಡು -ಬೈಂದೂರು ರೈಲು ಹೆಚ್ಚಿನ ಜನರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ವೇಳಾಪಟ್ಟಿ ಮಾರ್ಪಾಡು ಮಾಡಬೇಕು ಹಾಗೂ ಇದನ್ನು ಕುಕ್ಕೆ ಸುಬ್ರಹ್ಮಣ್ಯ ದವರೆಗೆ ವಿಸ್ತರಿಸಬೇಕು ಎಂಬ ಬೇಡಿಕೆ ಇದೆ ಎಂದರು. ಮಂಗಳೂರು ವಿಶ್ವ ದರ್ಜೆ ರೈಲು ನಿಲ್ದಾಣವಾಗಿ ಉನ್ನತೀ ಕರಿಸುವ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿ ಸಿದ ಅವರು , ಇದಕ್ಕೆ ಸುಮಾರು 100 ಎಕರೆ ಭೂಮಿ ಆವಶ್ಯಕತೆಯಿದ್ದು ಇದರ ಕ್ರೋಡೀಕರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ ಎಂದರು.
ಈ ಸಂದರ್ಭ ಜಿಪಂ ಅಧ್ಯಕ್ಷೆ ಮೀನಾಕಿ್ಷ ಶಾಂತಿಗೋಡು, ದಕ್ಷಿಣ ರೈಲ್ವೆ ಡಿಆರ್‌ಎಂ.ನರೇಶ್ ಲಾಲ್‌ವಾನಿ, ಡಿವಿಶನಲ್ ಇಂಜಿನಿಯರ್ ಅರುಣ್, ಪಾಲ್ಘಾಟ್ ವಿಭಾಗದ ಭದ್ರತಾ ಆಯುಕ್ತ ರಘುವೀರ್ ಉಪಸ್ಥಿತರಿದ್ದರು.
ಮಾರ್ಚ್‌ನಿಂದ ಶ್ರವಣಬೆಳಗೊಳ- ಬೆಂಗಳೂರು ರೈಲು ಸಂಚಾರ ಆರಂಭ
ಹಾಸನ -ಬೆಂಗಳೂರು ಹೊಸ ರೈಲು ಮಾರ್ಗ ಮುಂದಿನ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದ್ದು, ಆ ಬಳಿಕ ಮಂಗಳೂರು- ಬೆಂಗಳೂರು ರೈಲು ಶ್ರವಣಬೆಳಗೊಳ ಮೂಲಕ ಸಂಚರಿಸಲಿದೆ. ಇದರಿಂದ ಸಾಕಷ್ಟು ಸಮಯ ಉಳಿತಾಯವಾಗಲಿದೆ. ಹಾಸನ-ಬೆಂಗಳೂರು ರೈಲು ಮಾರ್ಗದ ಕಾಮಗಾರಿಗೆ ಈ ಸಾಲಿನ ಬಜೆಟ್‌ನಲ್ಲಿ ಅನುದಾನ ಒದಗಿಸಿದ್ದು ಕೆಲಸ ವೇಗವನ್ನು ಪಡೆದುಕೊಂಡಿದೆ. ಸೋಲೂರು ಸಮೀಪ ಭೂಸ್ವಾಧೀನ ಸಂಬಂಧ ಇದ್ದ ಸಮಸ್ಯೆಯೂ ನಿವಾರಣೆ ಯಾಗಿದ್ದು ಕಾಮಗಾರಿ ಮಾರ್ಚ್‌ಗೆ ಪೂರ್ಣಗೊಳ್ಳಲಿದೆ.
-ನಳಿನ್‌ಕುಮಾರ್ ಕಟೀಲು, ಸಂಸದ
ಶೋರ್ನೂರು - ಮಂಗಳೂರು ರೈಲುಮಾರ್ಗ ವಿದ್ಯುದ್ದೀಕರಣ ಪ್ರಗತಿಯಲ್ಲಿ
ಶೋರ್ನೂರು- ಮಂಗಳೂರು ರೈಲು ಮಾರ್ಗದ ವಿದ್ಯುದ್ದೀಕರಣ ಕಾರ್ಯ ಪ್ರಗತಿಯಲ್ಲಿದೆ. ಈಗಾ ಗಲೇ ಚೆರ್ವತ್ತೂರುವರೆಗೆ ಕಾಮಗಾರಿ ಮುಕ್ತಾಯಗೊಂಡಿದೆ. ಬಾಕಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಇದು ಪಣಂಬೂರುವರೆಗೆ ಮುಂದು ವರಿಯಲಿದೆ ಎಂದು ಪಾಲ್ಗಾಟ್ ರೈಲ್ವೆ ವಿಭಾಗದ ವಿಭಾ ಗೀಯ ಪ್ರಬಂಧಕ ನರೇಶ್ ಲಾಲ್‌ವಾನಿ ತಿಳಿಸಿದರು.
27,000 ಪ್ರಯಾಣಿಕರಿಂದ ಕೇಂದ್ರ ರೈಲು ನಿಲ್ದಾಣ ಬಳಕೆ
ಫ್ಲಾಟ್‌ಫಾರಂಗಳಲ್ಲಿ ಜನಸಂದಣಿಯನ್ನು ಕಡಿಮೆ ಮಾಡಿ ಪ್ರಯಾಣಿಕರು ಆರಾ ಮದಾಯಕವಾಗಿ ಸಾಗಲು ಅನುಕೂಲವಾಗುವಂತೆ ಎಸ್ಕಾಲೇಟರ್‌ಗಳಿಗೆ ಚಾಲನೆ ನೀಡಲಾಗಿದೆ. ಇದು ಮುಖ್ಯವಾಗಿ ಹಿರಿಯ ನಾಗರಿಕರು, ವಿಕಲ ಚೇತನರು, ಮಕ್ಕಳು ಮೊದಲಾದವರಿಗೆ ಸಹಾಯಕವಾಗಲಿದೆ. ಮಂಗಳೂರು ಕೇಂದ್ರ ರೈಲ್ವೆ ನಿಲ್ದಾಣ ಮಾರ್ಗವಾಗಿ ಪ್ರತಿನಿತ್ಯ 52 ರೈಲುಗಳು ಸಂಚರಿಸುತ್ತಿವೆ. ಸುಮಾರು 27,000 ಪ್ರಯಾಣಿಕರು ಈ ರೈಲ್ವೆ ನಿಲ್ದಾಣದ ಪ್ರಯೋಜನ ಪಡೆ ಯುತ್ತಿದ್ದು, ಎಸ್ಕಾಲೇಟರ್‌ಗಳು ಜನನಿಬಿಡತೆಯನ್ನು ಕಡಿಮೆಗೊಳಿಸುವಲ್ಲಿ ಸಹಕಾರಿಯಾಗಲಿದೆ ಎಂದು ದಕ್ಷಿಣ ರೈಲ್ವೆ ವಿಭಾಗದ ಪ್ರಕಟನೆ ತಿಳಿಸಿದೆ.







