ಅಮರನಾಥ ಯಾತ್ರೆ ತಾತ್ಕಾಲಿಕ ರದ್ದು, ಇಂಟರ್‌ನೆಟ್, ಮೊಬೈಲ್ ಸೇವೆ ಸ್ಥಗಿತ
ಹಿಜ್ಬುಲ್ ಕಮಾಂಡರ್ ಬುರ್ಹಾನ್ ಹತ ಹಿನ್ನೆಲೆ

ಶ್ರೀನಗರ, ಜು.9: ಜಮ್ಮು-ಕಾಶ್ಮೀರದಲ್ಲಿ ಶುಕ್ರವಾರ ಭದ್ರತಾ ಪಡೆಗಳೊಂದಿಗಿನ ಗುಂಡಿನ ಕಾಳಗದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿ ಶುಕ್ರವಾರ ಹತರಾಗಿದ್ದ ಹಿನ್ನೆಲೆಯಲ್ಲಿ ಕಾಶ್ಮೀರ ಕಣವೆಯಲ್ಲಿ ಕಾನೂನು ಸುವವ್ಯಸ್ಥೆ ಸಮಸ್ಯೆ ತಲೆತೋರುವ ಶಂಕೆಯ ಮೇರೆಗೆ ಶನಿವಾರ ಜಮ್ಮು ಮೂಲ ಶಿಬಿರದಿಂದ ಅಮರನಾಥ ಯಾತ್ರೆಯನ್ನು ಅಮಾನತುಗೊಳಿಸಲಾಗಿದೆ. ಹೊಸ ಯಾತ್ರಿಕರಿಗೆ ತೆರಳಲು ಅವಕಾಶವಿಲ್ಲ. ಮೊಬೈಲ್, ಇಂಟರ್‌ನೆಟ್ ಸೇವೆಯನ್ನು ರಾಜ್ಯ ಸರಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಸಮಾಜ ಘಾತುಕ ಶಕ್ತಿಗಳು ವದಂತಿ ಹಬ್ಬಿಸುವ ಸಾಧ್ಯತೆಯಿರುವ ಕಾರಣ ಪುಲ್ವಾಮಾ ಜಿಲ್ಲೆಯಾದ್ಯಂತ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಎಲ್ಲ ಶಾಲಾ ಮಂಡಳಿಯ ಪರೀಕ್ಷೆಗಳನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಾಶ್ಮೀರ ವಲಯದ ಬಾರಾಮುಲ್ಲಾದಿಂದ ಜಮ್ಮುವಿನ ಬನಿಹಾಲ್ ನಗರವನ್ನು ಸಂಪರ್ಕಿಸುವ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕಳೆದ ಸಂಜೆಯ ತನಕ 1,03,063 ಯಾತ್ರಾರ್ಥಿಗಳು ಅಮರನಾಥದಲ್ಲಿರುವ ಮಂಜಿನ ಲಿಂಗದ ದರ್ಶನ ಪಡೆದಿದ್ದಾರೆ. ಯಾತ್ರೆಯು ಆ.17ಕ್ಕೆ ಕೊನೆಗೊಳ್ಳಲಿದೆ.





