ಮಾಜಿ ಶಾಸಕ ಬಾಕಿಲ ಹುಕ್ರಪ್ಪ ಆಪ್‌ಗೆ ಸೇರ್ಪಡೆ

ಮಂಗಳೂರು, ಜು.9: ಮಾಜಿ ಶಾಸಕ ಬಾಕಿಲ ಹುಕ್ರಪ್ಪ ಅವರು ಇಂದು ನಗರದ ವೆಲೆನ್ಸಿಯಾ ಬಳಿಯ ಫಾತಿಮಾ ರಿಟ್ರೀಟ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿಯವರು ಪಕ್ಷದ ಮುಖಂಡರಾದ ಬಾಬು ಮ್ಯಾಥ್ಯು, ರಾಜ್ಯ ಸಹ ಸಂಚಾಲಕಿ ಹಾಗೂ ದಕ್ಷಿಣ ಕನ್ನಡ , ಉಡುಪಿ ಜಿಲ್ಲಾ ಉಸ್ತುವಾರಿ ಶಾಂತಲಾ ದಾಮ್ಲೆ ಹುಕ್ರಪ್ಪರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ, ಅರವಿಂದ್ ಕೇಜ್ರೀವಾಲರ ನೇತೃತ್ವದಲ್ಲಿ ದಿಲ್ಲಿಯ ಆಪ್ ಸರಕಾರವು ಮೊಹಲ್ಲಾ ಕ್ಲಿನಿಕ್, ಓಡ್ -ಈವನ್ ಮುಂತಾದ ಹಲವಾರು ಜನಪರ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತಂದಿದ್ದು ಇತರ ರಾಜ್ಯಗಳಲ್ಲೂ ವಿದೇಶಗಳಲ್ಲೂ ಮಾದರಿ ಕಾರ್ಯಕ್ರಮಗಳಾಗಿ ಮನ್ನಣೆ ಗಳಿಸಿದೆ. ಪಕ್ಷವು ಈಗಾಗಲೇ ರಾಜ್ಯಾದ್ಯಂತ ಪಕ್ಷ ಸಂಘಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಜನತೆಯು ಅಭೂತಪೂರ್ವ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಆಮ್ ಆದ್ಮಿ ಪಕ್ಷ ಸಜ್ಜಾಗಿದ್ದು, ಮುಂದಿನ 2 ವರ್ಷಗಳಲ್ಲಿ ಪಕ್ಷವು ತನ್ನ ಪೂರ್ಣ ಬಲದೊಂದಿಗೆ ಚುನಾವಣೆ ಸ್ಪರ್ಧಿಸಲಿದೆ ಎಂದು ಹೇಳಿದರು.
ಬಾಕಿಲ ಹುಕ್ರಪ್ಪಅವರು ಮಾತನಾಡಿ ದಿಲ್ಲಿಯಲ್ಲಿ ಆಪ್ ಸರಕಾರ ಜನಪರ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದು, ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಆಮ್ ಆದ್ಮಿ ಪಕ್ಷ ಸೇರುತ್ತಿರುವುದಾಗಿ ತಿಳಿಸಿದರು.





