ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ : ನ್ಯಾಯಾಂಗ ತನಿಖೆಗೆ ಒಪ್ಪಿಸಲು ಚಿಂತನೆ
ಬೆಂಗಳೂರು, ಜು. 9: ಮಂಗಳೂರು ಡಿವೈಎಸ್ಪಿ ಎಂ.ಕೆ.ಗಣಪತಿ ನಿಗೂಢ ಆತ್ಮಹತ್ಯೆ ಪ್ರಕರಣ ಸೋಮವಾರ (ಜು.11) ನಡೆಯಲಿರುವ ವಿಧಾನ ಮಂಡಲದ ಉಭಯ ಸದನಗಳಲ್ಲಿ ಆಡಳಿತ ಮತ್ತು ವಿಪಕ್ಷಗಳ ಮಧ್ಯೆ ಪರಸ್ಪರ ಆರೋಪ-ಪ್ರತ್ಯಾರೋಪಕ್ಕೆ ‘ಆಹಾರ’ ಆಗುವುದು ನಿಶ್ಚಿತವಾಗಿದೆ.
ಆತ್ಮಹತ್ಯೆಗೂ ಮೊದಲು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಡಿವೈಎಸ್ಪಿ ಗಣಪತಿ, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರ ಹೆಸರು ಉಲ್ಲೇಖಿಸಿದ್ದು, ಆ ಹಿನ್ನೆಲೆಯಲ್ಲಿ ವಿಪಕ್ಷಗಳು ಸಚಿವ ಜಾರ್ಜ್ ರಾಜೀನಾಮೆ ಪಟ್ಟು ಹಿಡಿಯುವ ಸಾಧ್ಯತೆಗಳಿವೆ. ಹೀಗಾಗಿ ಕಲಾಪಕ್ಕೆ ಭಂಗ ಉಂಟಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು.
ಡಿವೈಎಸ್ಪಿಗಳಾದ ಗಣಪತಿ, ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರಕಾರವನ್ನು ಅಡ್ಡ ಕತ್ತರಿಯಲ್ಲಿ ಸಿಲುಕಿಸಲು ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಸಜ್ಜಾಗಿವೆ. ಅಲ್ಲದೆ, ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಪಟ್ಟು ಹಿಡಿಯುವ ಸಾಧ್ಯತೆಗಳಿವೆ.
ಆ ಹಿನ್ನೆಲೆಯಲ್ಲಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಲು ರಾಜ್ಯ ಸರಕಾರ ಗಂಭೀರ ಚಿಂತನೆ ನಡೆಸಿದ್ದು, ಅಧಿವೇಶನದಲ್ಲಿ ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಅಧಿಕೃತವಾಗಿ ಹೇಳಿಕೆ ನೀಡಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.
ಈಗಾಗಲೇ ಸಚಿವ ಜಾರ್ಜ್ ರಾಜೀನಾಮೆಗೆ ಒತ್ತಾಯಿಸಿ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ರಾಜ್ಯದ ವಿವಿಧೆಡೆಗಳಲ್ಲಿ ಧರಣಿ, ಪ್ರತಿಭಟನೆ ಹಾಗೂ ರಸ್ತೆತಡೆ ಹೋರಾಟ ನಡೆಸುತ್ತಿವೆ. ಆ ಹಿನ್ನೆಲೆಯಲ್ಲಿ ಮುಜುಗರದಿಂದ ತಪ್ಪಿಸಿಕೊಳ್ಳಲು ರಾಜ್ಯ ಸರಕಾರ ರಣತಂತ್ರ ರೂಪಿಸುತ್ತಿದೆ.
ವಿಪಕ್ಷ ಸದಸ್ಯರುಗಳ ಟೀಕೆ-ಟಿಪ್ಪಣಿ, ಆರೋಪಗಳಿಗೆ ಸೂಕ್ತ ಪ್ರತ್ಯುತ್ತರ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಪ್ರತಿತಂತ್ರ ರೂಪಿಸುವುದರಲ್ಲಿ ಮಗ್ನರಾಗಿದ್ದಾರೆ. ಈ ಮಧ್ಯೆಯೇ ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಜಾರ್ಜ್ ರಕ್ಷಣೆಗೆ ಎಲ್ಲ ಸಚಿವರು ನಿಲ್ಲಬೇಕೆಂದು ಕಟ್ಟಪ್ಪಣೆ ಮಾಡಿದ್ದಾರೆ.
ಈ ಮಧ್ಯೆ ರಾಜ್ಯದ ವಿವಿಧೆಡೆಗಳಲ್ಲಿ ಧರಣಿ, ರಸ್ತೆತಡೆ, ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.