ಕರಾವಳಿಗೆ ಹಾನಿಕಾರಕ ಘಟನೆಗಳ ಬಗ್ಗೆ ಜನಜಾಗೃತಿ ಅಗತ್ಯ: ನ್ಯಾ.ಎಂ.ಎಫ್.ಸಲ್ದಾನ
ಮಂಗಳೂರು, ಜು.5: ಕರಾವಳಿಯ ಆರ್ಥಿಕ, ಸಾಮಾಜಿಕ, ನೈಸರ್ಗಿಕ ಪರಿಸರಕ್ಕೆ ಸಂಬಂಧಿಸಿದಂತೆ ಹಾನಿಯುಂಟು ಮಾಡುತ್ತಿರುವ ಇತ್ತೀಚಿನ ಕೆಲವು ಘಟನೆಗಳು ಭವಿಷ್ಯದಲ್ಲಿ ಇನ್ನಷ್ಟು ಅಪಾಯವನ್ನುಂಟು ಮಾಡುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ಸಮಗ್ರ ಜನಜಾಗೃತಿ ಮೂಡಿಸಬೇಕಾಗಿದೆ ಎಂದು ಹೈ ಕೋರ್ಟಿನ ವಿಶ್ರಾಂತ ನ್ಯಾಯಾಧೀಶ ಎಂ.ಎಫ್.ಸಲ್ದಾನ ತಿಳಿಸಿದ್ದಾರೆ.
ಅವರು ಇಂದು ನಗರದ ಎಕ್ಸೆಲ್ ಮಿಸ್‌ಚೀಫ್ ಮಾಲ್‌ನ ಗ್ಯಾಲೆರಿ ಆರ್ಕಿಡ್ ಸಂಸ್ಥೆಯ ಆವರಣದಲ್ಲಿ ಮಾಧ್ಯಮ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಮುಖ್ಯವಾಗಿ ಕರಾವಳಿಯಲ್ಲಿ ಆವರಿಸಿದ್ದ ಹಸಿರು ಹೊದಿಕೆಯ ವಾತಾವರಣ ಕ್ರಮೇಣ ಬದಲಾಗುತ್ತಿದೆ. ವಿವಿಧ ಕಾರಣಗಳಿಗಾಗಿ ಮರಗಳನ್ನು ನಾಶ ಮಾಡಲಾಗುತ್ತಿದೆ. ಅವೈಜ್ಞಾನಿಕವಾಗಿ ಮರಳು ಸಾಗಾಟ, ಮೀನುಗಾರಿಕೆ ನಡೆಸುತ್ತಿರುವುದು, ಜಾನುವಾರು ಸಂತತಿ ನಾಶವಾಗಲು ಕಾರಣವಾಗಿರುವ ಅಕ್ರಮವಾದ ಜಾನುವಾರು ಸಾಗಾಟ, ಅಸಮರ್ಪಕವಾದ ರಸ್ತೆ ನಿರ್ವಹಣೆಯಿಂದ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳು ಸೇರಿದಂತೆ ಕರಾವಳಿಯ ಹಲವು ಸಮಸ್ಯೆಗಳ ಬಗ್ಗೆ ಇಲ್ಲಿನ ಜನರಲ್ಲಿ ಜಾಗೃತಿ ಮೂಡದೆ ಇದ್ದರೆ ಭವಿಷ್ಯದಲ್ಲಿ ಇನ್ನಷ್ಟು ಅಪಾಯಕಾರಿ ಸ್ಥಿತಿ ನಿರ್ಮಾಣವಾಗಬಹುದು ಎಂದು ಸಲ್ದಾನ ತಿಳಿಸಿದರು.
ಕರಾವಳಿಯಲ್ಲಿ ಸಮೃದ್ಧವಾಗಿದ್ದ ತೆಂಗಿನ ತೋಟಗಳು ನಾಶವಾಗುತ್ತಿದೆ. ಜಲ ಮೂಲಗಳ ಸಂರಕ್ಷಣೆಯಾಗದೆ ಬೇಸಿಗೆಯಲ್ಲಿ ನೀರಿನ ಬರದ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಜಿಲ್ಲೆಯ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದಲ್ಲಿ ಹೇರಳವಾಗಿದ್ದ ಜಾನುವಾರುಗಳ ಸಂಖ್ಯೆ ಇಳಿಮುಖವಾಗಿದೆ. ಕಳೆದ 5 ವರ್ಷಗಳಲ್ಲಿ ಕರ್ನಾಟಕದಿಂದ ಕೇರಳ ರಾಜ್ಯಕ್ಕೆ ಲಕ್ಷಾಂತರ ಜಾನುವಾರುಗಳ ಅಕ್ರಮ ಸಾಗಾಟ ನಡೆದಿದೆ. ಜಿಲ್ಲೆಯಲ್ಲಿಯೂ ಈ ರೀತಿಯ ಸಾಗಾಟದಿಂದ ಹಲವು ಸಮಸ್ಯೆಗಳು ಉಂಟಾಗುತ್ತಿವೆ. ಜಾಗತಿಕವಾಗಿ ದನದ ಮಾಂಸ ರಫ್ತು ಮಾಡುವ ದೇಶಗಳಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ. ಭವಿಷ್ಯದಲ್ಲಿ ಜಾನುವಾರುಗಳ ಸಂತತಿ ಉಳಿಯಬೇಕಾದರೆ ಜಾನುವಾರುಗಳ ಮಾಂಸದ ರಫ್ತು ಮಾಡುವುದನ್ನು ಸಂಪೂರ್ಣವಾಗಿ ಸರಕಾರ ನಿಷೇಧಿಸಬೇಕು.ಜನರು ತಮ್ಮ ಆಹಾರ ಪದ್ಧತಿಯಲ್ಲೂ ಮಾರ್ಪಾಡು ಮಾಡಿಕೊಳ್ಳಬೇಕಾಗಿದೆ ಎಂದು ಎಂ.ಎಫ್.ಸಲ್ದಾನ ತಿಳಿಸಿದರು.
ಮಂಗಳೂರಿನಲ್ಲಿ 2008ರಲ್ಲಿ ನಡೆದ ಚರ್ಚ್‌ಗಳ ಮೇಲಿನ ದಾಳಿಯ ಸಂದರ್ಭದಲ್ಲಿ ರಕ್ಷಣೆ ನೀಡಬೇಕಾದ ಪೊಲೀಸ್ ಇಲಾಖೆಯ ಜಿಲ್ಲೆಯ ಉನ್ನತ ಅಧಿಕಾರಿಗಳಾದ ಸತೀಶ್ ಕುಮಾರ್ ಸೇರಿದಂತೆ ಮೂವರು ಅಧಿಕಾರಿಗಳು ನಾಗರಿಕರ ಮೇಲೆ ದೌರ್ಜನ್ಯ ನಡೆಸಿರುವುದು ಅತ್ಯಂತ ಕಳವಳಕಾರಿಯಾದ ಘಟನೆ. ಈ ಘಟನೆಗಳ ವೀಡಿಯೊ ದಾಖಲೆ ಇದ್ದರೂ, ಈ ಘಟನೆಯ ಬಗ್ಗೆ ಜ.ಸೋಮಶೇಖರ ಆಯೋಗದ ರಚನೆಯಾಗಿ ತನಿಖೆ ನಡೆದರೂ, ಅಧಿಕಾರಿಗಳ ಮೇಲೆ ಯಾವ ಕ್ರಮ ಆಗದೆ ಇರುವುದು ವಿಪರ್ಯಾಸ ಎಂದು ಸಲ್ದಾನ ಅಭಿಪ್ರಾಯ ವ್ಯಕ್ತಪಡಿಸಿದರು.
ಡಿವೈಎಸ್ಪಿ ಗಣಪತಿ ಸಾವಿನ ಬಗ್ಗೆ ಸಾರ್ವಜನಿಕ ವಿಚಾರಣೆ ನಡೆಯಲಿ
ಡಿವೈಎಸ್ಪಿ ಮಂಗಳೂರಿನಲ್ಲಿ ಚರ್ಚ್ ದಾಳಿಯಾಗಿರುವ ಸಂದರ್ಭದಲ್ಲಿ ನಗರದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದು ,ಆ ಸಂದರ್ಭದಲ್ಲಿ ಯಾವ ತಪ್ಪಾಗಿದೆ ಅದರ ಬಗ್ಗೆ ವಿಚಾರಣೆ ನಡೆಸಿ ಯಾವ ಕ್ರಮ ಜರುಗಬೇಕೊ ಅದು ನಡೆಯಬೇಕು. ಆದರೆ ಆ ಘಟನೆಯೇ ಆ ವ್ಯಕ್ತಿಯ ಸಾವಿಗೆ ಕಾರಣವಾಗಬಾರದಿತ್ತು. ಆದುದರಿಂದ ಗಣಪತಿ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕ ವಿಚಾರಣೆ ನಡೆಸಬೇಕು. ಪೊಲೀಸ್ ಅಧಿಕಾರಿಯ ಸಾವಿನ ಬಗ್ಗೆ ಇನ್ನೊಂದು ಪೊಲೀಸ್ ಅಧಿಕಾರಿಗಳಿಂದ ವಿಚಾರಣೆ ನಡೆಸುವುದಕ್ಕಿಂತ (ಸಿಐಡಿಗೆ ವಹಿಸುವುದಕ್ಕಿಂತ) ಸಾರ್ವಜನಿಕ ವಲಯದಲ್ಲಿ ಅನುಭವ ಹೊಂದಿರುವ ವ್ಯಕ್ತಿಗಳ ನೇತೃತ್ವದಲ್ಲಿ ಈ ಬಗ್ಗೆ ಸಾರ್ವಜನಿಕ ತನಿಖೆ ನಡೆಸುವುದು ಸೂಕ್ತ ಎಂದು ಸಲ್ದಾನ ತಿಳಿಸಿದರು.
ಡಿವೈಎಸ್ಪಿ ಗಣಪತಿ ಆತ್ಮ ಹತ್ಯೆ ಏಕಾಏಕಿ ನಡೆದಿರುವ ಪ್ರಕ್ರಿಯೆಯಲ್ಲ. ಆ ವ್ಯಕ್ತಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರೆ ಕಾರಣಗಳೇನು ? ಹೀಗಾಗಲು ಯಾವ ವ್ಯಕ್ತಿಗಳ ಪಾತ್ರವಿದೆ ? ಈ ಎಲ್ಲಾ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಭಾರತದ ದಂಡ ಸಂಹಿತೆಯಲ್ಲಿ ಆತ್ಮಹತ್ಯೆಗೆ ಕಾರಣರಾಗುವ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಲು ಅವಕಾಶವಿದೆ ಎಂದು ಡಿವೈಎಸ್ಪಿ ಗಣಪತಿ ಸಾವಿನ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ನ್ಯಾ.ಎಂ.ಎಫ್.ಸಲ್ದಾನ ಉತ್ತರಿಸಿದರು.
ಈ ಸಂದರ್ಭದಲ್ಲಿ ಗ್ಯಾಲೆರಿ ಆರ್ಕಿಡ್‌ನ ನಿದೇಶಕ ವಿಲಿಯಂ ಪಾಯಸ್ ಉಪಸ್ಥಿತರಿದ್ದರು.







