ಸೆರೆನಾಗೆ ವಿಂಬಲ್ಡನ್ ಕಿರೀಟ
ಏಳನೆ ಬಾರಿ ಪ್ರಶಸ್ತಿ ಎತ್ತಿದ ಅಮೆರಿಕದ ಟೆನಿಸ್ ತಾರೆ

ಲಂಡನ್, ಜು.9: ವಿಶ್ವದ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ಏಳನೆ ಬಾರಿ ವಿಂಬಲ್ಡನ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಟ್ರೋಫಿಯನ್ನು ಗೆಲ್ಲುವುದರೊಂದಿಗೆ 22ನೆ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿ ಸ್ಟೆಫಿಗ್ರಾಫ್ ದಾಖಲೆಯನ್ನು ಸರಿಗಟ್ಟಿದ್ದಾರೆ.
ಶನಿವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಸೆರೆನಾ ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್‌ರನ್ನು 7-5, 6-3 ನೇರ ಸೆಟ್‌ಗಳಿಂದ ಮಣಿಸುವ ಮೂಲಕ ಜನವರಿಯಲ್ಲಿ ನಡೆದಿದ್ದ ಆಸ್ಟ್ರೇಲಿಯನ್ ಓಪನ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡರು. ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡರು.
ಲಂಡನ್‌ನ ಸೆಂಟರ್‌ಕೋರ್ಟ್‌ನಲ್ಲಿ ಕೇವಲ 81 ನಿಮಿಷಗಳಲ್ಲಿ ಗೆಲುವಿನ ನಗೆ ಬೀರಿದ ಅಮೆರಿಕದ ಆಟಗಾರ್ತಿ ಸೆರೆನಾ ಟೆನಿಸ್‌ನಲ್ಲಿ ಓಪನ್ ಯುಗ ಆರಂಭವಾದ ಬಳಿಕ 22ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದ ಸ್ಟೆಫಿಗ್ರಾಫ್ ದಾಖಲೆಯನ್ನು ಸರಿಗಟ್ಟಲು ಯಶಸ್ವಿಯಾದರು. ಸೆರೆನಾ ಕಳೆದ ವರ್ಷ ವಿಂಬಲ್ಡನ್‌ನಲ್ಲಿ ಕೊನೆಯ ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದರು. ಈ ವರ್ಷ ಆಸ್ಟ್ರೇಲಿಯನ್ ಓಪನ್ ಹಾಗೂ ಫ್ರೆಂಚ್ ಓಪನ್‌ನಲ್ಲಿ ಮಹಿಳೆೆಯರ ಸಿಂಗಲ್ಸ್‌ನಲ್ಲಿ ಫೈನಲ್ ತಲುಪಿದ್ದರೂ ಪ್ರಶಸ್ತಿ ಜಯಿಸಲು ಸಾಧ್ಯವಾಗಿರಲಿಲ್ಲ.
‘‘ಲಂಡನ್‌ನ ಸೆಂಟರ್‌ಕೋರ್ಟ್ ನನ್ನ ಪಾಲಿಗೆ ತವರು ಮೈದಾನವಿದ್ದಂತೆ. 22ನೆ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ಆ್ಯಂಜೆಲಿಕ್ ನನ್ನಿಂದ ಶ್ರೇಷ್ಠ ಟೆನಿಸ್‌ನ್ನು ಹೊರಹಾಕಿದರು’’ ಎಂದು ಸೆರೆನಾ ಪ್ರತಿಕ್ರಿಯಿಸಿದ್ದಾರೆ







