ಹಕ್ಕು ಪತ್ರ ವಿತರಣೆಗೆ ಶೀಘ್ರ ಕ್ರಮ: ಸಚಿವ ಕಾಗೋಡು

ತೀರ್ಥಹಳ್ಳಿ, ಜು.9: ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿದವರು ಹಕ್ಕುಪತ್ರಕ್ಕಾಗಿ ಕಾಯುತ್ತಾ ಕುಳಿತಿದ್ದಾರೆ. ಕೇಂದ್ರ ಸರಕಾರದ ಈ ಕಾನೂನಿಗೆ ಎಂಟು ವರ್ಷಗಳಾದ ಬಳಿಕ ಈಗ ಕಣ್ಣುಬಿಡುತ್ತಿದೆ. ಪ್ರತಿಯೊಬ್ಬ ಅರ್ಜಿದಾರನಿಗೂ ಅರಣ್ಯ ಹಕ್ಕುಪತ್ರ ಕೊಡಿಸಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ಪಟ್ಟಣದ ಗೋಪಾಲಗೌಡ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ತಾಲೂಕಿನ ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಪಾರಂಪರಿಕ ಅರಣ್ಯವಾಸಿ ಅರ್ಜಿದಾರರಿಗೆ ಅರಣ್ಯ ಹಕ್ಕುಪತ್ರ ವಿತರಿಸಿ ಅವರು ಮಾತನಾಡುತ್ತಿದ್ದರು. ಬಗರ್‌ಹುಕುಂ ಅರ್ಜಿಯನ್ನು ಕಾಲಮಿತಿಯಲ್ಲಿ ತೀರ್ಮಾನ ಮಾಡಬೇಕು. ಗ್ರಾಪಂ ಗಳಲ್ಲಿನ ಅರಣ್ಯ ಹಕ್ಕು ಸಮಿತಿಯವರೇ ಇದಕ್ಕೆ ಮುಖ್ಯಸ್ಥರಾಗಿದ್ದಾರೆ. ಕಂದಾಯ ಇಲಾಖೆಯಲ್ಲಿ ಹಲವಾರು ಸಮಸ್ಯೆಗಳಿರುವ ಬಗ್ಗೆ ಗಮನಕ್ಕೆ ಬಂದಿದೆ. ಪಹಣಿ ಬರೆಯುವ ಕೆಲಸ ಗ್ರಾಮ ಲೆಕ್ಕಾಧಿಕಾರಿಗಳಿಂದಲೇ ಆಗಬೇಕಾಗಿದೆ. ಮುಂದಿನ ದಿನಗಳಲ್ಲಿ ಪಹಣಿಗಾಗಿ ಎಸಿ ಹತ್ತಿರ ಹೋಗುವ ಬದಲು ತಹಶೀಲ್ದಾರ್ ಹಾಗೂ ಗ್ರಾಮ ಲೆಕ್ಕಿಗರ ಕಚೇರಿಗಳಲ್ಲಿ ಪಹಣಿಗಳನ್ನು ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.
ರೈತರಿಗೆ ಬದುಕು ಕಟ್ಟಿಕೊಟ್ಟ ಈ ಪುಣ್ಯ ಭೂಮಿಯಲ್ಲಿ ಗೇಣಿ ಶಾಸಕನ ಬರಲು ಕಾರಣಕರ್ತರಾದ ದೇವರಾಜು ಅರಸುರವರು ಹಾಗೂ ಕಡಿದಾಳು ಮಂಜಪ್ಪನವರನ್ನು ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ನೆನಪಿಸಿಕೊಳ್ಳಬೇಕಾಗಿದೆ. ಇಂತಹ ಪವಿತ್ರ ಕ್ಷೇತ್ರದಲ್ಲಿ ಅರಣ್ಯ ಹಕ್ಕು ಪತ್ರ ನೀಡುತ್ತಿರುವುದು ಸಂತಸದ ವಿಚಾರ. ಅರಣ್ಯ ಕಾನೂನು ಅನುಷ್ಠಾನದಲ್ಲಿ ರಾಜ್ಯಕ್ಕೆ ಶಿವಮೊಗ್ಗ ಜಿಲ್ಲೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿಯವರನ್ನು ಶ್ಲಾಸಿದರು.
ಅರಣ್ಯ ಹಕ್ಕು ವಿಚಾರದಲ್ಲಿ ಜನಪ್ರತಿನಿಧಿಗಳು, ಕಾರ್ಯಕರ್ತರು ಗ್ರಾಮಗಳಿಗೆ ತೆರಳಿ ಜನರಿಗೆ ಇನ್ನಷ್ಟು ಮಾಹಿತಿಗಳನ್ನು ನೀಡುವ ಮೂಲಕ ಮತ್ತಷ್ಟು ಮಂದಿ ಅರ್ಜಿ ಸಲ್ಲಿಸಲು ಪ್ರೇರೇಪಿಸಬೇಕಿದೆ. ಜನಶಕ್ತಿ ಎದ್ದು ನಿಂತಾಗ ಮಾತ್ರ ಎಲ್ಲಾ ಯೋಜನೆಗಳು ಸುಸ್ಥಿತಿಯಲ್ಲಿದ್ದುಕೊಂಡು ಕಾರ್ಯರೂಪಕ್ಕೆ ಬರಲು ಸಾಧ್ಯ ಎಂದರು.
ಅರ್ಜಿ ಸಲ್ಲಿಸುವ ಸಾಗುವಳಿದಾರರಿಗೆ ಅರಣ್ಯಾಧಿಕಾರಿಗಳು ಕಿರುಕುಳ, ಬೆದರಿಕೆ ಹಾಕುವಂತಹಾ ಕ್ರಮಕ್ಕೆ ಮುಂದಾದರೆ ಹುಷಾರ್ ಎಂದು ಖಡಕ್ ಎಚ್ಚರಿಕೆ ನೀಡಿದ ಕಾಗೋಡು, ಮಲೆನಾಡು ಭಾಗದಲ್ಲಿ ಇಷ್ಟು ವರ್ಷಗಳ ಕಾಲ ಬದುಕಿದವರಿಗೆ ಅರಣ್ಯ ಹಕ್ಕುಪತ್ರ ನೀಡದಿದ್ದಲ್ಲಿ ರಾಜ್ಯವನ್ನಾಳಲು ನಾವು ನಿಜಕ್ಕೂ ಯೋಗ್ಯರಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಮಾಜಿ ಸಚಿವ, ಶಾಸಕ ಕಿಮ್ಮನೆ ರತ್ನಾಕರ ಮಾತನಾಡಿ, ಅರಣ್ಯ ಹಕ್ಕು ಮತ್ತು ಬಗರ್‌ಹುಕುಂ ವಿಚಾರದಲ್ಲಿ ಕಾಗೋಡು ತಿಮ್ಮಪ್ಪನವರು ಮಂತ್ರಿಯಾದ ಮೇಲೆ ಜಿಲ್ಲೆಯಾದ್ಯಂತ ಹೊಸ ಅಲೆ ಸೃಷ್ಟಿಯಾಗುವಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಮಾರಂಭದ ವೇದಿಕೆಯಲ್ಲಿ ಜಿಲ್ಲಾಧಿಕಾರಿ ಇಕ್ಕೇರಿ, ಜಿಪಂ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯ ಕುಮಾರ್, ವಿಧಾನ ಪರಿಷತ್ ಸದಸ್ಯ ಪ್ರಸನ್ನ ಕುಮಾರ್, ಜಿಪಂ ಸಿಇಒ ರಾಕೇಶ್ ಕುಮಾರ್, ಅರಣ್ಯ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ತಹಶೀಲ್ದಾರ್ ಲೋಕೇಶ್ವರಪ್ಪ, ಉಪ ವಿಭಾಗಾಧಿಕಾರಿ ಕೃಷ್ಣಮೂರ್ತಿ, ಜಿಪಂ ಸದಸ್ಯರಾದ ಕಲ್ಪನಾ ಪದ್ಮನಾಭ್, ಶ್ರೀನಿವಾಸ್, ಭಾರತಿ ಪ್ರಭಾಕರ್, ಶರತ್ ಪೂರ್ಣೇಶ್ ಮತ್ತಿತರರಿದ್ದರು.







