ಯುವ ಪ್ರತಿಭೆ ಗುರುತಿಸಿ: ಶಾಸಕ ಅಪ್ಪಚ್ಚು ರಂಜನ್
ಕ್ರೀಡಾ ನಿಲಯ ಉದ್ಘಾಟನೆ

ಮಡಿಕೇರಿ, ಜು.9 : ಕ್ರೀಡಾ ಮತ್ತು ಸೇನಾ ಕ್ಷೇತ್ರದಲ್ಲಿ ಪ್ರತಿ ಭೆಗೆ ಹೆಚ್ಚು ಒತ್ತು ನೀಡಿ ಯುವ ಪ್ರತಿಭೆಗಳನ್ನು ಗುರುತಿಸು ವಂತಾಗಬೇಕು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಕರೆ ನೀಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಗರದ ಜನರಲ್ ಕೆ.ಎಸ್. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕಿರಿಯರ ವಿಭಾಗದ ಕ್ರೀಡಾ ನಿಲಯವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸೇನೆ ಹಾಗೂ ಕ್ರೀಡಾ ಕ್ಷೇತ್ರ ಬೆಳೆಯಬೇಕಾದರೆ, ಯಾವುದೇ ರೀತಿಯ ಪ್ರಭಾವಕ್ಕೆ ಒಳಗಾಗದೆ, ಯುವ ಜನರಲ್ಲಿರುವ ಪ್ರತಿಭೆಗಳ ಅನ್ವೇಷಣೆಯ ಕೆಲಸವಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು. ಜಿಲ್ಲೆಯ ಕೂಡಿಗೆ ಹಾಗೂ ಪೊನ್ನಂಪೇಟೆಯಲ್ಲಿ ಕ್ರೀಡಾ ನಿಲಯಗಳು ಇವೆ. ಹಾಗೆಯೇ ಮಡಿಕೇರಿಯಲ್ಲಿಯೂ ಕ್ರೀಡಾ ನಿಲಯ ಆರಂಭಿಸಬೇಕು ಎಂಬುದು ಹಲವು ದಿನಗಳ ಕನಸಾಗಿತ್ತು. ಅದರಂತೆ ಈ ಪ್ರಸಕ್ತ ವರ್ಷದಲ್ಲಿ ನೆರವೇರಿದೆ. ಜಿಲ್ಲೆಯ ವಿದ್ಯಾರ್ಥಿಗಳು ಕ್ರೀಡಾ ನಿಲಯದ ಸೌಲಭ್ಯಗಳನ್ನು ಬಳಸಿಕೊಂಡು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಕ್ಷೇತ್ರಗಳಲ್ಲಿ ಹೆಸರು ಮಾಡುವಂತಾಗಬೇಕು ಎಂದು ಶಾಸಕರು ಕಿವಿಮಾತು ಹೇಳಿದರು.
ಮಡಿಕೇರಿ ನಗರದಲ್ಲಿ ಸುಸಜ್ಜಿತ ಕ್ರೀಡಾ ನಿಲಯ ಕಟ್ಟಡ ನಿರ್ಮಾಣಕ್ಕೆ ನಿವೇಶನ ಗುರುತಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು.
ಕ್ರೀಡಾ ಸಚಿವರಾಗಿದ್ದ ಅಲ್ಪಅವಧಿಯಲ್ಲಿ ಜಿಲ್ಲೆಗೆ ಸುಮಾರು 15 ಕೋಟಿಗೂ ರೂ. ಹೆಚ್ಚು ಅನುದಾನ ತರಲು ಪ್ರಯತ್ನಿಸಿರುವುದಾಗಿ ತಿಳಿಸಿದ ಅವರು, ಆ ಅವಧಿಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಈಜುಕೊಳ ನಿರ್ಮಾಣ, ಒಳಾಂಗಣ ಕ್ರೀಡಾಂಗಣ, ಪೊನ್ನಂಪೇಟೆ ಹಾಗೂ ಸೋಮವಾರಪೇಟೆಯಲ್ಲಿ ಹಾಕಿ ಟರ್ಫ್ ನಿರ್ಮಾಣಕ್ಕೆ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು. ಹಾಗೆಯೇ ಕ್ರೀಡಾ ಪ್ರಶಸ್ತಿ ವಿತರಣೆಗೆ ಮಾನದಂಡ ತರಲು ಪ್ರಯತ್ನಿಸಲಾಯಿತು. ಇದರಿಂದ ಯಾವುದೇ ರೀತಿಯ ಲಾಬಿಗೆ ಅವಕಾಶ ನೀಡದೆ ಅರ್ಹ ಕ್ರೀಡಾಪಟುಗಳಿಗೆ ಪ್ರಶಸ್ತಿ ದೊರೆಯುವಂತಾಗಲು ಪ್ರಯತ್ನಿಸಲಾಗಿದೆ. ಕ್ರೀಡಾ ಯುವ ನೀತಿ ಜಾರಿಗೊಳಿಸಲು ಪ್ರಯತ್ನಿಸಲಾಗಿದೆ ಎಂದರು.
ಅಂತಾರಾಷ್ಟ್ರೀಯ ಹಾಕಿ ಪಟು ಅರ್ಜುನ್ ಹಾಲಪ್ಪಮಾತನಾಡಿ, ಜಿಲ್ಲೆಯಲ್ಲಿ ಕ್ರೀಡೆಗೆ ಹೆಚ್ಚಿನ ಅವಕಾಶಗಳಿದ್ದು, ಇವುಗಳನ್ನು ಬಳಸಿಕೊಂಡು ಕ್ರೀಡಾರಂಗದಲ್ಲಿ ಮುಖ್ಯವಾಹಿನಿಗೆ ಬರಲು ಯುವಕರು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು. ವಿಶ್ವಕಪ್ ಹಾಕಿ ವಿಜೇತ ತಂಡದ ಪ್ರತಿನಿಧಿ ಪಿ.ಇ. ಕಾಳಯ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಯಲಕ್ಷ್ಮೀ ಬಾಯಿ, ಜಿಲ್ಲೆಯ ನಾನಾ ಕ್ರೀಡಾ ನಿಲಯಗಳ ಮುಖ್ಯಸ್ಥರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಶಾಸಕರು ಜನರಲ್ ಕೆ.ಎಸ್. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದ ಗ್ಯಾಲರಿ ಹಾಗೂ ಕ್ರೀಡಾ ನಿಲಯದ ಅಡುಗೆ ಕೋಣೆ ಪರಿಶೀಲಿಸಿದರು.







