ಅಧಿಕಾರಿಗಳು, ಸಚಿವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜೆಡಿಎಸ್ ಧರಣಿ
ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ

ಚಿಕ್ಕಮಗಳೂರು, ಜು.9: ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆಗೆ ಕಾರಣರಾದ ಅಧಿಕಾರಿಗಳು ಮತ್ತು ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜೆಡಿಎಸ್ ಕಾರ್ಯಕರ್ತರು ತಾಲೂಕಿನ ಆಲ್ದೂರಿನಲ್ಲಿ ಶನಿವಾರ ಧರಣಿ ನಡೆಸಿದರು.
ಪಕ್ಷದ ಹೋಬಳಿ ಅಧ್ಯಕ್ಷ ಡಿ.ಎಂ.ಪ್ರವೀಣ್ ಅವರ ನೇತೃತ್ವದಲ್ಲಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿದ ಕಾರ್ಯಕರ್ತರು ಬಸ್‌ಸ್ಟ್ಯಾಂಡ್ ವೃತ್ತದ ಬಳಿ ಸಭೆೆ ನಡೆಸಿ ರಾಜ್ಯ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದಭರ್ದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಚ್.ದೇವರಾಜ್, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಆಡಳಿತಕ್ಕೆ ಬಂದ ಬಳಿಕ 25ಕ್ಕೂ ಹೆಚ್ಚು ಅಧಿಕಾರಿಗಳು ಸಾವನ್ನಪ್ಪಿದ್ದಾರೆ, ರಾಜಕಾರಣಿಗಳ ದಬ್ಬಾಳಿಕೆ ಮತ್ತು ದೌರ್ಜನ್ಯದಿಂದ ಅಧಿಕಾರಿಗಳು ನಲುಗುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಾಮಾಣಿಕ ಅಧಿಕಾರಿ ಡಿ.ಕೆ.ಗಣಪತಿ ಅವರ ಆತ್ಮಹತ್ಯೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಗೂಂಡಾಗಿರಿ ನಡೆಸುತ್ತಿರುವ ಸಚಿವ ಕೆ.ಜೆ.ಜಾರ್ಜ್ ಅವರನ್ನು ಮಂತ್ರಿ ಮಂಡಲದಿಂದ ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿದರು.
ಹೋಬಳಿ ಅಧ್ಯಕ್ಷ ಡಿ.ಎಂ.ಪ್ರವೀಣ್ ಮಾತನಾಡಿ, ಆತ್ಮಹತ್ಯೆಗೆ ಶರಣಾದ ಎಂ.ಕೆ.ಗಣಪತಿ ಮತ್ತು ಕಲ್ಲಪ್ಪ ಹಂಡಿಬಾಗ್ ಅವರ ಕುಟುಂಬದ ನೆರವಿಗೆ ರಾಜ್ಯ ಸರಕಾರ ತಕ್ಷಣ ಧಾವಿಸಬೇಕು, ಸಚಿವ ಕೆ.ಜೆ.ಜಾರ್ಜ್‌ಅವರನ್ನು ಪದಚ್ಯುತಿಗೊಳಿಸಬೇಕು, ಇಲ್ಲದಿದ್ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಆತ್ಮಹತ್ಯೆಗೆ ಶರಣಾದ ಎಂ.ಕೆ.ಗಣಪತಿ ಮತ್ತು ಕಲ್ಲಪ್ಪಹಂಡಿಬಾಗ್ ಅವರ ಆತ್ಮಕ್ಕೆ ಶಾಂತಿ ಕೋರಿ ಸಭೆೆಯಲ್ಲಿ ಎರಡು ನಿಮಿಷ ವೌನಾಚರಣೆ ಮಾಡಲಾಯಿತು.
ಜಿಲ್ಲಾ ಪಂಚಾಯತ್ ಸದಸ್ಯ ನಿಖಿಲ್ ಚಕ್ರವರ್ತಿ, ಜೆಡಿಎಸ್ ಬ್ಲಾಕ್ ಅಧ್ಯಕ್ಷ ರಘು, ಪ.ಜಾತಿ/ಪ.ವರ್ಗ ವಿಭಾಗದ ಅಧ್ಯಕ್ಷ ರಾಮಪ್ಪ, ಜಿಲ್ಲಾ ವಕ್ತಾರ ಹೊಲದ ಗದ್ದೆ ಗಿರೀಶ್, ಪ್ರಧಾನ ಕಾರ್ಯದರ್ಶಿ ಎಂ.ಡಿ.ರಮೇಶ್, ಗ್ರಾಪಂ ಸದಸ್ಯರಾದ ಕೌಶಿಕ್, ಹೇಮಾವತಿ, ವಸಂತ, ನಗೀನ ಮತ್ತಿತರರು ಧರಣಿಯಲ್ಲಿ ಉಪಸ್ಥಿತರಿದ್ದರು.







