ಫ್ರಾನ್ಸ್ -ಪೋರ್ಚುಗಲ್ ಯುರೋ ಫೈನಲ್ ಹಣಾಹಣಿ;ರೊನಾಲ್ಡೊಗೆ ಟ್ರೋಫಿ ಎತ್ತಲು ಕೊನೆಯ ಅವಕಾಶ

ಸ್ಟೇಟ್ ಡೆ ಫ್ರಾನ್ಸ್, ಜು.9: ಇಲ್ಲಿ ರವಿವಾರ ನಡೆಯಲಿರುವ ಯುರೋ ಕಪ್ ಫುಟ್ಬಾಲ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಪೋರ್ಚುಗಲ್ ತಂಡ ಫ್ರಾನ್ಸ್‌ನ್ನು ಎದುರಿಸಲಿದೆ.
ಪೋರ್ಚುಗಲ್‌ನ ಸ್ಟಾರ್ ಆಟಗಾರ ಹಾಗೂ ನಾಯಕ ಕ್ರಿಶ್ಚಿಯಾನೊ ರೊನಾಲ್ಡೊಗೆ ಟ್ರೋಫಿ ಎತ್ತಲು ಇದೊಂದು ಕೊನೆಯ ಅವಕಾಶವಾಗಿದೆ. ಆದರೆ ಫ್ರಾನ್ಸ್ ತವರಿನಲ್ಲಿ ಪೋರ್ಚುಗಲ್‌ನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ರೊನಾಲ್ಡೊ ತಂಡ ಕಠಿಣ ಸವಾಲನ್ನು ಎದುರಿಸುವಂತಾಗಿದೆ.
ಫ್ರಾನ್ಸ್ ತಂಡ 1975ರಿಂದ ಈ ತನಕ ಪೋರ್ಚುಗಲ್‌ಗೆ ಮಣಿದಿಲ್ಲ. 1975ರಿಂದ ಈ ತನಕ ನಡೆದ ಮೂರು ಪ್ರಮುಖ ಟೂರ್ನಮೆಂಟ್‌ಗಳಲ್ಲಿ ಫ್ರಾನ್ಸ್ ತಂಡ ಗೆಲುವು ಸಾಧಿಸಿತ್ತು.
1975ರಲ್ಲಿ ಅಭ್ಯಾಸ ಪಂದ್ಯದಲ್ಲಿ ಪೋರ್ಚುಗಲ್ ವಿರುದ್ಧ ಫ್ರಾನ್ಸ್ ತಂಡ 2-0 ಗೆಲುವು ಸಾಧಿಸಿತ್ತು. ಬಳಿಕ ಅದು ಹಿಂದಿರುಗಿ ನೋಡಿಲ್ಲ. ಮರ್ಸೆಲ್ಲಿನಲ್ಲಿ 1984ರಲ್ಲಿ ನಡೆದ ಯುರೋ ಕಪ್ ಚಾಂಪಿಯನ್‌ಶಿಪ್‌ನ ಸೆಮಿಫೈನಲ್‌ನಲ್ಲಿ ಫ್ರಾನ್ಸ್ ತಂಡ ಪೋರ್ಚುಗಲ್ ವಿರುದ್ಧ 3-2 ಅಂತರದಲ್ಲಿ ಗೆಲುವು ಸಾಧಿಸಿತ್ತು.
ಮೈಕೆಲ್ ಪ್ಲಾಟಿನಿ ಹೆಚ್ಚುವರಿ 119ನೆ ನಿಮಿಷದಲ್ಲಿ ಬಾರಿಸಿದ ಗೋಲು ಫ್ರಾನ್ಸ್‌ನ್ನು ಫೈನಲ್‌ಗೆ ತಲುಪಿಸಿತ್ತು. ಫ್ರಾನ್ಸ್ ತಂಡ ಫೈನಲ್‌ನಲ್ಲಿ ಸ್ಪೇನ್‌ನ್ನು ಮಣಿಸಿ ಪ್ರಶಸ್ತಿ ಬಾಚಿಕೊಂಡಿತ್ತು.
2016ರ ಯುರೋ ಕಪ್ ಆರಂಭವಾಗುವ ಮೊದಲು ಫ್ರಾನ್ಸ್‌ನಲ್ಲಿ ಉಗ್ರರ ಭೀತಿ ಎದುರಾಗಿತ್ತು. ಕಳೆದ ನವೆಂಬರ್‌ನಲ್ಲಿ ಫ್ರಾನ್ಸ್ ಹಾಗೂ ಜರ್ಮನಿ ತಂಡಗಳ ನಡುವಿನ ಅಭ್ಯಾಸ ಪಂದ್ಯದ ವೇಳೆ ಪ್ಯಾರಿಸ್ ಮೇಲೆ ದಾಳಿ ನಡೆದು 130ಕ್ಕೂ ಅಧಿಕ ಮಂದಿ ಸಾವಿಗೀಡಾಗಿ ಫ್ರಾನ್ಸ್‌ನಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. ಅಲ್ಲಿನ ಸರಕಾರ ಈ ಟೂರ್ನಮೆಂಟ್‌ಗೆ ಗರಿಷ್ಠ ಭದ್ರತೆ ಒದಗಿಸಿತ್ತು. ಫೈನಲ್ ತಲುಪಿರುವ ಫ್ರಾನ್ಸ್ ತಂಡ ಸೆಮಿಫೈನಲ್‌ನಲ್ಲಿ ಜರ್ಮನಿಯನ್ನು 2-0ಅಂತರದಲ್ಲಿ ಬಗ್ಗು ಬಡಿದಿತ್ತು. 1984ರ ಯುರೋ ಮತ್ತು 1998ರ ವಿಶ್ವಕಪ್ ಬಳಿಕ ಫ್ರಾನ್ಸ್ ತಂಡ ಮೂರನೆ ಬಾರಿ ಪ್ರಮುಖ ಟೂರ್ನಮೆಂಟ್‌ನಲ್ಲಿ ಫೈನಲ್ ತಲುಪಿದೆ.
.







