ಮಕ್ಕಳ ಹಕ್ಕಿನ ರಕ್ಷಣೆಗೆ ಯಾವುದೇ ಹೋರಾಟಕ್ಕೆ ಸಿದ್ಧ: ಕೃಪಾ ಆಳ್ವ

ಬಂಟ್ವಾಳ, ಜು. 9: ಮಕ್ಕಳ ಹಕ್ಕಿನ ರಕ್ಷಣೆಯ ಹಿತದೃಷ್ಟಿಯಿಂದ ಯಾವುದೇ ಹೋರಾಟಕ್ಕೆ ನಾನು ಸದಾ ಸಿದ್ಧ. ರಾಜ್ಯದ ಯಾವುದೇ ಒಂದು ಮಗುವಿನ ಹಕ್ಕಿನ ಉಲ್ಲಂಘನೆಯಾದಾಗ ರಕ್ಷಣೆ ಮಾಡಲು ಆಯೋಗದ ಮೂಲಕ ಹೋರಾಟ ನಡೆಸುತ್ತೇನೆ. ಹೀಗೆಂದು ಹೇಳಿದವರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಅಯೋಗದ ಅಧ್ಯಕ್ಷೆ ಕೃಪಾ ಆಳ್ವ.
ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಪ್ರಯುಕ್ತ ಬಿ.ಸಿ.ರೋಡ್ ಪ್ರೆಸ್‌ಕ್ಲಬ್‌ನಲ್ಲಿ ಮೂರು ದಿವಸಗಳ ಕಾಲ ನಡೆಯಲಿರುವ ಮಂಚಿ ಸರಕಾರಿ ಪ್ರೌಢ ಶಾಲೆಯ ಮಕ್ಕಳ ಕೊಲಾಜ್ ಕಲಾಕೃತಿಗಳ ಪ್ರದರ್ಶನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಜೀವನದಲ್ಲಿ ಹಲವಾರು ಸವಾಲುಗಳಿವೆ. ಅದನ್ನು ಎದುರಿಸಿ ಮುಂದು ಸಾಗುವುದು ತುಂಬಾ ಪ್ರಾಮುಖ್ಯವಾದುದು. ಶಿಕ್ಷಣದೊಂದಿಗೆ ಸುಜನಾತ್ಮಕ ಕಲೆಗಳಿಗೆ ಆದ್ಯತೆ ನೀಡಿದಾಗ ವಿದ್ಯಾರ್ಥಿಯ ಸಮಗ್ರ ವಿಕಸನ ಸಾಧ್ಯ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳು ಅದೃಷ್ಠವಂತರು. ಬೇರೆ ಜಿಲ್ಲೆಗಳಲ್ಲಿ ಇನ್ನೂ ಕೂಡಾ ಅಅದೆಷ್ಟೋ ಮಕ್ಕಳು ಶಿಕ್ಷಣ ವಂಚಿತರಾಗಿ ಶಾಲೆಯಿಂದ ಹೊರ ಉಳಿದಿದ್ದಾರೆ. ನನ್ನ ಪ್ರವಾಸದ ವೇಳೆ ಹೊರ ಜಿಲ್ಲೆಗಳಲ್ಲಿ ಹಲವು ಸರಕಾರಿ ಶಾಲೆಗಳಿಗೆ ಬೇಟಿ ನೀಡಿದ್ದೇನೆ. ಅಲ್ಲಿನ ಪರಿಸ್ಥಿತಿ ಚಿಂತಾಜನಕವಾಗಿದ್ದು ತರಗತಿಯೊಳಗೆ ಸೌಕರ್ಯಗಳೇ ಇಲ್ಲವಾಗಿದೆ. ಪುಸ್ತಕ ಬಿಟ್ಟು ಬೇರೆ ವ್ಯವಸ್ಥೆಗಳೇ ಆ ಮಕ್ಕಳಿಗೆ ಇಲ್ಲ. ಆದರೆ, ನಮ್ಮ ಜಿಲ್ಲೆಂುಲ್ಲಿ ಅದರಲ್ಲೂ ಸರಕಾರಿ ಶಾಲೆಯಲ್ಲಿ ಇಂತಹ ಸುಜನಾತ್ಮಕ ಕಲೆಗಳನ್ನು ಕಲಿಯಲು ವಿದ್ಯಾರ್ಥಿಗಳಿಗೆ ಅವಕಾಶ ಲಭಿಸಿರುವುದು ಅವರ ಪುಣ್ಯ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಮಾತನಾಡಿ, ಸರಕಾರಿ ಶಾಲೆಯ ವಿದ್ಯಾರ್ಥಿಗಳಲ್ಲೂ ವಿಶೇಷ ಪ್ರತಿಬೆ ಇದೆ ಎನ್ನುವುದಕ್ಕೆ ಮಂಚಿ ಪ್ರೌಢ ಶಾಲೆಯ ಮಕ್ಕಳ ಕೊಲಾಜ್ ಚಿತ್ರಕಲೆ ಸಾಕ್ಷಿ. ಇದು ಇತರ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗು ಪ್ರೇರಣೆಯಾಗಲಿ ಎಂದು ಹಾರೈಸಿದರು.
ಪತ್ರಕರ್ತೆ ರೇಷ್ಮಾ ಜಿ. ಉಳ್ಳಾಲ್ ಮಾತನಾಡಿ, ಮಕ್ಕಳ ಮುಗ್ದತೆಯನ್ನು ಅಪರಾಧ ಚಟುವಟಿಕೆಗಳಿಗೆ ದುರುಪಯೋಗ ಮಾಡಿಕೊಳ್ಳುವ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ. ನಮ್ಮ ಜಿಲ್ಲೆಯಲ್ಲಿ ಡ್ರಗ್ಸ್ ಮಾಫಿಯಾ ದಂಧೆಯಲ್ಲಿ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದ್ದು ಪ್ರಜ್ಞಾವಂತ ನಾಗರಿಕರು ಈ ಬಗ್ಗೆ ಜಾಗೃತಿ ವಹಿಸುವಂತೆ ಅವರು ತಿಳಿಸಿದರು.
ವೇದಿಕೆಯಲ್ಲಿ ಮಂಚಿ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ವಿ.ರಾಮಮೂರ್ತಿ, ಪತ್ರಕರ್ತ ಸಂಘದ ರಜತ ವರ್ಷಾಚರಣೆ ಸಮಿತಿಯ ಸಂಚಾಲಕ ವೆಂಕಟೇಶ್ ಬಂಟ್ವಾಳ ಉಪಸ್ಥಿತರಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೌನೇಶ್ ವಿಶ್ವಕರ್ಮ ಸ್ವಾಗತಿಸಿದರು. ಮಾರ್ಗದರ್ಶಿ ಕಲಾ ಶಿಕ್ಷಕ ತಾರಾನಾಥ ಕೈರಂಗಳ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಕೃತಿಕ ಬಿ., ಗುರುಕುಮಾರ್ ಕೆ. ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ರಜತ ವರ್ಷಾಚರಣೆ ಸಮಿತಿಯ ಉಪಾಧ್ಯಕ್ಷ ರತ್ನದೇವ್ ಪುಂಜಾಲಕಟ್ಟೆ ವಂದಿಸಿದರು. ಪ್ರೆಸ್‌ಕ್ಲಬ್ ಕಾರ್ಯದರ್ಶಿ ಗೋಪಾಲ್ ಅಂಚನ್ ನಿರೂಪಿಸಿದರು.
ಪದಾಧಿಕಾರಿಗಳಾದ ಸಂದೀಪ್ ಸಾಲ್ಯಾನ್, ಯಾದವ ಅಗ್ರಬೈಲ್, ಕಿಶೋರ್ ಪೇರಾಜೆ, ಚಂದ್ರಶೇಖರ್ ಕಲ್ಮಲೆ ಸಹಕರಿಸಿದರು.







