ಉಪ್ಪಿನಂಗಡಿ: ರಸ್ತೆ ಮಧ್ಯದಲ್ಲಿದ್ದ ಹೊಂಡಕ್ಕೆ ತಾತ್ಕಾಲಿಕ ಮುಕ್ತಿ
varthabharati.in ವರದಿ ಫಲಶ್ರುತಿ
.jpg)
ಉಪ್ಪಿನಂಗಡಿ, ಜು.9: ಕೆಮ್ಮಾರದ ನೆಕ್ಕರಾಜೆ ಬಳಿಯ ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ನಿರ್ಮಾಣವಾದ ಹೊಂಡಕ್ಕೆ ಕೊನೆಗೂ ಮುಕ್ತಿ ನೀಡಿದ್ದು, ಶನಿವಾರ ತಾತ್ಕಾಲಿಕವಾಗಿ ಹೆದ್ದಾರಿಯಲ್ಲಿರುವ ಹೊಂಡವನ್ನು ಮುಚ್ಚಿಸಲಾಗಿದೆ.
ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೆಮ್ಮಾರ ಬಳಿಯ ನೆಕ್ಕರಾಜೆ ಎಂಬಲ್ಲಿ ರಸ್ತೆಯಲ್ಲಿಯೇ ಬೃಹತ್ ಹೊಂಡವುಂಟಾಗಿತ್ತು. ಮಳೆಗಾಲದಲ್ಲಿ ಇದರಲ್ಲಿ ನೀರು ತುಂಬಿ ಇದು ಹಲವು ಅಪಘಾತಕ್ಕೆ ಕಾರಣವಾಗಿತ್ತಲ್ಲದೆ, ಈ ಹೊಂಡದಿಂದಾಗಿ ವಾಹನ ಪ್ರಯಾಣಿಕರೂ ಪ್ರಯಾಸ ಪಡಬೇಕಾಗಿತ್ತು. ಕಳೆದೊಂದು ತಿಂಗಳಿನಿಂದ ಈ ರಸ್ತೆಗುಂಡಿ ದೊಡ್ಡದಾಗುತ್ತಲೇ ಇದ್ದರೂ, ರಾಜ್ಯ ಹೆದ್ದಾರಿ ನಿರ್ವಹಣೆಯ ಹೊಣೆ ಹೊತ್ತ ಹೆದ್ದಾರಿ ಇಲಾಖೆಯಾಗಲೀ, ಜನಪ್ರತಿನಿಧಿಗಳಾಗಲೀ ಇದಕ್ಕೆ ಮುಕ್ತಿ ನೀಡಲು ಮುಂದಾಗಿರಲಿಲ್ಲ. ಇದರಿಂದ ಬೇಸತ್ತ ಸ್ಥಳೀಯರ್ಯಾರೋ, ಶುಕ್ರವಾರ ಈ ಗುಂಡಿಯಲ್ಲಿ ಬಾಳೆ ಗಿಡಗಳನ್ನು ನೆಟ್ಟು ತೆರಳಿದ್ದರು.
ಈ ಬಗ್ಗೆ ‘ವಾರ್ತಾಭಾರತಿ’ ವರದಿ ಪ್ರಕಟಿಸಿ, ಇಲಾಖೆಯನ್ನು ಎಚ್ಚರಿಸುವ ಕಾರ್ಯ ನಡೆಸಿತ್ತು. ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದ್ದೇ ತಡ. ಲೋಕೋಪಯೋಗಿ ಇಲಾಖೆಯ ಸೂಚನೆಯಂತೆ ಶನಿವಾರ ಬೆಳಗ್ಗೆಯೇ ನಾಲ್ಕಾರು ಕಾರ್ಮಿಕರು ಬಂದು ಜಲ್ಲಿಕಲ್ಲು, ಜಲ್ಲಿಹುಡಿಗಳನ್ನು ಹಾಕಿ ಇಲ್ಲಿದ್ದ ರಸ್ತೆ ಗುಂಡಿಗೆ ತಾತ್ಕಾಲಿಕ ಮುಕ್ತಿ ನೀಡಿ ಹೋಗಿದ್ದಾರೆ. ಇದು ಇನ್ನೆಷ್ಟು ದಿನ ಬಾಳಿಕೆ ಬರಬಹುದು ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿದೆ.