ಒಲಿಂಪಿಕ್ ಮಹಿಳಾ ಹಾಕಿ ತಂಡದಿಂದ ನಾಯಕಿ ರಿತೂ ರಾಣಿಗೆ ಕೊಕ್

ಹೊಸದಿಲ್ಲಿ, ಜು.9: ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿ ರಿತೂ ರಾಣಿ ಕಳಪೆ ಪ್ರದರ್ಶನ ಹಾಗೂ ಅನುಚಿತ ವರ್ತನೆಯ ಹಿನ್ನೆಲೆಯಲ್ಲಿ ಮುಂಬರುವ ರಿಯೋ ಗೇಮ್ಸ್ ತಂಡದಿಂದ ಕೈಬಿಡಲಾಗಿದೆ.
ಅಂತಿಮ 16 ಸದಸ್ಯರನ್ನು ಒಳಗೊಂಡ ತಂಡವನ್ನು ಪ್ರಕಟಿಸಲು ಇನ್ನೂ ಮೂರು ದಿನಗಳ ಸಮಯಾವಕಾಶವಿದೆ. ಬೆಂಗಳೂರಿನಲ್ಲಿ ಈಗ ನಡೆಯುತ್ತಿರುವ ರಾಷ್ಟ್ರೀಯ ಶಿಬಿರದಿಂದ ರಿತೂ ಹೊರಗುಳಿದಿದ್ದಾರೆ ಎಂದು ಟೀಮ್ ಮ್ಯಾನೇಜ್‌ಮೆಂಟ್‌ನ ಹಿರಿಯ ಸದಸ್ಯರು ದೃಢಪಡಿಸಿದ್ದಾರೆ.
ಒಲಿಂಪಿಕ್ಸ್ ತಂಡದಲ್ಲಿ ರಿತೂ ಸ್ಥಾನ ನೀಡಲಾಗುತ್ತಿಲ್ಲ ಎಂದು ಸತ್ಯ. ಇದಕ್ಕೆ ಎರಡು ಕಾರಣವಿದೆ. ಒಂದು ಕಳಪೆ ಪ್ರದರ್ಶನ, ಎರಡನೆಯದು ಅವರು ವರ್ತನೆ. ಪ್ರದರ್ಶನವನ್ನು ಉತ್ತಮಪಡಿಸುವಂತೆ ಹೇಳಿದ್ದರೂ ಆನಿಟ್ಟಿಯಲ್ಲಿ ಅವರ ಪ್ರಯತ್ನಿಸಿಲ್ಲ. ಬೆಂಗಳೂರಿನಲ್ಲಿ ಹಾಕಿ ಶಿಬಿರ ನಡೆಯುತ್ತಿದೆ. ರಿತೂ ಮೊನ್ನೆಯೇ ಶಿಬಿರವನ್ನು ತೊರೆದಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಿತೂ ನಾಯಕತ್ವದಲ್ಲಿ ಭಾರತದ ಮಹಿಳಾ ಹಾಕಿ ತಂಡ 36 ವರ್ಷಗಳ ಬಳಿಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು. ಭಾರತ 1980ರ ಬಳಿಕ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ. ಕಳೆದ ಒಂದು ದಶಕಗಳಿಂದ ರಿತೂ ತಂಡದ ಪ್ರಮುಖ ಆಟಗಾರ್ತಿಯಾಗಿದ್ದರು. ರಿತೂ ಅನುಪಸ್ಥಿತಿಯಲ್ಲಿ ಇನ್ನೋರ್ವ ಹಿರಿಯ ಆಟಗಾರ್ತಿ ರಾಣಿ ರಾಂಪಾಲ್ ವಹಿಸಿಕೊಳ್ಳುವ ಸಾಧ್ಯತೆಯಿದೆ.
ರಿತೂಗೆ ಸಂಬಂಧಿಸಿ ಏನೇ ಹೇಳಿಕೆ ನೀಡುವುದು ಅವಸರವಾಗುತ್ತದೆ. ತಂಡವನ್ನು ಇನ್ನೂ ಪ್ರಕಟಿಸಿಲ್ಲ. ಜು.12 ರಂದು ತಂಡವನ್ನು ಅಧಿಕೃತವಾಗಿ ಘೋಷಿಸುತ್ತೇವೆ. ಉಭಯ ತಂಡಗಳ ನಾಯಕ ಹಾಗೂ ಉಪನಾಯಕರ ಬಗ್ಗೆ ಟೀಮ್ ಮ್ಯಾನೇಜ್‌ಮೆಂಟ್ ಶಿಫಾರಸು ಪತ್ರವನ್ನು ನೀಡಲಿದೆ. ಜು.11ಕ್ಕೆ ನಡೆಯುವ ಹಾಕಿ ಇಂಡಿಯಾ ಕಾರ್ಯಕಾರಿಣಿ ಮಂಡಳಿ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹಾಕಿ ಇಂಡಿಯಾದ ಅಧ್ಯಕ್ಷ ನರೇಂದ್ರ ಬಾತ್ರಾ ಹೇಳಿದ್ದಾರೆ







