ಅಜಯ್ ಜಯರಾಮ್ ಸೆಮಿ ಫೈನಲ್‌ಗೆ
ಯುಎಸ್ ಜಿಪಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿ

ಕ್ಯಾಲಿಫೋರ್ನಿಯ, ಜು.9: ನಾಲ್ಕನೆ ಶ್ರೇಯಾಂಕದ ಅಜಯ್ ಜಯರಾಮ್ ಇಲ್ಲಿ ನಡೆಯುತ್ತಿರುವ ಯುಎಸ್ ಜಿಪಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ. ಜಯರಾಮ್ ಟೂರ್ನಿಯಲ್ಲಿ ಸ್ಪರ್ಧೆಯಲ್ಲಿರುವ ಭಾರತದ ಏಕೈಕ ಸ್ಪರ್ಧಿ. ಭಾರತದ ಉಳಿದ ಸ್ಪರ್ಧಿಗಳು ಕೂಟದಿಂದ ಹೊರ ನಡೆದಿದ್ದಾರೆ.
ಇಲ್ಲಿ ನಡೆದ 120,000 ಡಾಲರ್ ಬಹುಮಾನ ಮೊತ್ತದ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಜಯರಾಮ್ ತಮ್ಮದೇ ದೇಶದ ಆನಂದ್ ಪವಾರ್ ವಿರುದ್ಧ 21-11, 21-11 ಗೇಮ್‌ಗಳ ಅಂತರದಿಂದ ಸುಲಭ ಜಯ ಸಾಧಿಸಿದರು.
ಪಂದ್ಯದಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದ ಜಯರಾಮ್ 30ರ ಹರೆಯದ ಪವಾರ್‌ಗೆ ಪ್ರತಿರೋಧ ಒಡ್ಡಲು ಅವಕಾಶ ನೀಡದೇ ಕೇವಲ 30 ನಿಮಿಷದಲ್ಲಿ ಪಂದ್ಯವನ್ನು ಗೆದ್ದುಕೊಂಡರು. ಮುಂಬೈ ಆಟಗಾರ ಶನಿವಾರ ತಡರಾತ್ರಿ ನಡೆಯಲಿರುವ ಸೆಮಿಫೈನಲ್‌ನಲ್ಲಿ ಜಪಾನ್‌ನ ಕಾಂಟಾ ಸುನೆಯಾಮಾ ವಿರುದ್ಧ ಸೆಣಸಾಡಲಿದ್ದಾರೆ.
ಇದೇ ವೇಳೆ, ಭಾರತದ ಪುರುಷರ ಹಾಗೂ ಮಹಿಳೆಯರ ಡಬಲ್ಸ್ ಜೋಡಿ ಟೂರ್ನಿಯಿಂದ ಹೊರ ನಡೆದಿದೆ. ರಿಯೋ ಒಲಿಂಪಿಕ್ಸ್‌ಗೆ ತೆರಳಲಿರುವ ಪುರುಷರ ಡಬಲ್ಸ್ ಜೋಡಿ ಮನು ಅತ್ರಿ ಹಾಗೂ ಸುಮೀತ್ ರೆಡ್ಡಿ ಜಪಾನ್‌ನ ಟಕುಟೊ ಇನೊ ಹಾಗೂ ಯೂಕಿ ಕಾನೆಕೊ ವಿರುದ್ಧ ಕಠಿಣ ಹೋರಾಟ ನೀಡಿದರೂ 21-8, 7-21, 16-21 ಗೇಮ್‌ಗಳ ಅಂತರದಿಂದ ಶರಣಾದರು.
ಮಹಿಳೆಯರ ಡಬಲ್ಸ್‌ನಲ್ಲಿ ಮೇಘನಾ ಹಾಗೂ ಪೂರ್ವಿಶಾ ಅಮೆರಿಕದ ಎವಾ ಲೀ ಹಾಗೂ ಪೌಲಾ ಲಿನ್ ಒಬನನಾ ವಿರುದ್ಧ 15-21, 12-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.







