ರವಿ ಶಾಸ್ತ್ರಿ ಬ್ಯಾಟಿಂಗ್ ಕೋಚ್ ಆಫರ್ ತಿರಸ್ಕರಿಸಿದ್ದರು: ಗಂಗುಲಿ

ಹೊಸದಿಲ್ಲಿ, ಜು.9: ‘‘ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿ ಮಾಜಿ ಟೀಮ್ ಡೈರೆಕ್ಟರ್ ರವಿ ಶಾಸ್ತ್ರಿ ಅವರನ್ನು ಬ್ಯಾಟಿಂಗ್ ಕೋಚ್‌ರನ್ನಾಗಿ ನೇಮಿಸಲು ಒಲವು ವ್ಯಕ್ತಪಡಿಸಿತ್ತು. ಆದರೆ, ಅವರು ನಮ್ಮ ಪ್ರಸ್ತಾಪವನ್ನು ತಿರಸ್ಕರಿಸಿದ್ದರು’’ ಎಂದು ಭಾರತದ ಮಾಜಿ ನಾಯಕ ಹಾಗೂ ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿಯ ಸದಸ್ಯರೂ ಆಗಿರುವ ಸೌರವ್ ಗಂಗುಲಿ ಹೇಳಿದ್ದಾರೆ.
ನಾವು ರವಿ ಅವರಿಗೆ ಭಾರತೀಯ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಹುದ್ದೆಯ ಆಫರ್ ನೀಡಿದ್ದೆವು ಎಂಬ ವಿಷಯವನ್ನು ಮಾಧ್ಯಮದೊಂದಿಗಿನ ಸಂವಾದದಲ್ಲಿ ಗಂಗುಲಿ ಬಹಿರಂಗಪಡಿಸಿದರು.
ಗಂಗುಲಿ ಹಾಗೂ ಶಾಸ್ತ್ರಿ ಪ್ರಮುಖ ಕೋಚ್ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿ ಸಾರ್ವಜನಿಕವಾಗಿ ವಾಕ್ಸಮರ ನಡೆಸಿದ್ದರು. ಸಚಿನ್ ತೆಂಡುಲ್ಕರ್ ಹಾಗೂ ವಿವಿಎಸ್ ಲಕ್ಷ್ಮಣ್ ಅವರನ್ನೊಳಗೊಂಡ ಕ್ರಿಕೆಟ್ ಆಯ್ಕೆ ಸಮಿತಿಯು ಟೀಮ್ ಇಂಡಿಯಾದ ಸಹಾಯಕ ಕೋಚ್ ಆಯ್ಕೆಯ ವೇಳೆ ಮಧ್ಯಪ್ರವೇಶಿಸುವುದಿಲ್ಲ ಎಂದು ಗಂಗುಲಿ ಸ್ಪಷ್ಟಪಡಿಸಿದ್ದಾರೆ. ಈ ನಡುವೆ ಝಹೀರ್ ಖಾನ್ ಸಹಾಯಕ ಕೋಚ್ ಆಗಲಿದ್ದಾರೆಂಬ ಊಹಾಪೋಹ ಕೇಳಿ ಬರುತ್ತಿದೆ.
‘‘ತಂಡಕ್ಕೆ ಸಹಾಯಕ ಕೋಚ್‌ರನ್ನು ಆಯ್ಕೆ ಮಾಡುವುದು ಕುಂಬ್ಳೆಗೆ ಬಿಟ್ಟ ವಿಚಾರ. ಅವರು ಸ್ವತಃ ಬೌಲರ್ ಆಗಿರುವ ಕಾರಣ ತಕ್ಷಣವೇ ಬೌಲಿಂಗ್ ಕೋಚ್‌ರನ್ನು ಆಯ್ಕೆ ಮಾಡಿಲ್ಲವೆಂದು ಕಾಣುತ್ತದೆ. ಶೀಘ್ರವೇ ಕುಂಬ್ಳೆ ವೇಗದ ಬೌಲಿಂಗ್ ಕೋಚ್‌ರನ್ನು ಆಯ್ಕೆ ಮಾಡಲಿದ್ದಾರೆಂಬ ಬಗ್ಗೆ ದಿನಪತ್ರಿಕೆಯಲ್ಲಿ ಓದಿದ್ದೇನೆ. ಬೌಲಿಂಗ್ ಕೋಚ್ ಹುದ್ದೆಗೆ ಝಹೀರ್ ಖಾನ್ ಅಭ್ಯರ್ಥಿ ಎಂಬ ಬಗ್ಗೆ ನನಗೆ ಮಾಹಿತಿಯಿಲ್ಲ. ಝಹೀರ್ ವರ್ಷದ ಎಲ್ಲ ದಿನಗಳು ಲಭ್ಯವಿರುತ್ತಾರೆಯೇ ಎಂದು ಬಿಸಿಸಿಐ ಗಮನಿಸಲಿದೆ’’ ಎಂದು ಗಂಗುಲಿ ಹೇಳಿದ್ದಾರೆ.







