ಹತ ವಾನಿ ‘ಅಸಂತುಷ್ಟ’ರ ಪಾಲಿನ ಹೊಸ ‘ಆದರ್ಶ ಮೂರ್ತಿ’: ಉಮರ್
ಶ್ರೀನಗರ,ಜು.9: ಕಾಶ್ಮೀರದ ‘ಅಸಂತುಷ್ಟರು’ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿಯಲ್ಲಿ ಹೊಸ ‘ಆದರ್ಶ ಮೂರ್ತಿ ’ಯನ್ನು ಕಂಡುಕೊಂಡಿದ್ದಾರೆ ಎಂದು ಶನಿವಾರ ಹೇಳಿರುವ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು, ಆತನ ಸಾವು ಸಾಮಾಜಿಕ ಮಾಧ್ಯಮಗಳಲ್ಲಿ ಆತನಿಂದ ಪ್ರಭಾವಿತರಾಗಿದ್ದವರಿಗಿಂತ ಹೆಚ್ಚಿನ ಯುವಕರನ್ನು ಉಗ್ರವಾದದ ಮಡಿಲಿಗೆ ತಳ್ಳಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ನನ್ನ ಮಾತನ್ನು ಗುರುತಿಸಿಟ್ಟುಕೊಳ್ಳಿ. ಉಗ್ರವಾದಿ ಗುಂಪಿಗೆ ಯುವಜನರನ್ನು ಸೇರಿಸುವ ವಾನಿಯ ಸಾಮರ್ಥ್ಯ ಆತ ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಿದ್ದಿರಬಹುದಾದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆತನ ಗೋರಿಯಿಂದಲೇ ವಿಜೃಂಭಿಸಲಿದೆ ಎಂದು ಉಮರ್ ಟ್ವೀಟ್ ಮಾಡಿದ್ದಾರೆ.
ಬಹಳಷ್ಟು ವರ್ಷಗಳ ಬಳಿಕ ನಾನು ವಾಸವಾಗಿರುವ ಪ್ರದೇಶದಲ್ಲಿಯ ಮಸೀದಿಯಿಂದ ‘ಸ್ವಾತಂತ್ರ’ದ ಘೋಷಣೆಗಳು ಅನುರಣಿಸುತ್ತಿರುವುದನ್ನು ನಾನು ಕೇಳುತ್ತಿದ್ದೇನೆ. ಕಾಶ್ಮೀರದ ಅಸಂತುಷ್ಟರು ನಿನ್ನೆ ತಮ್ಮ ಹೊಸ ಆದರ್ಶ ಮೂರ್ತಿಯನ್ನು ಕಂಡುಕೊಂಡಿದ್ದಾರೆ ಎಂದೂ ಅವರು ಟ್ವೀಟಿಸಿದ್ದಾರೆ.
ಕಾಶ್ಮೀರ ಸಮಸ್ಯೆಯು ರಾಜಕೀಯ ಸಮಸ್ಯೆಯಾಗಿರುವುದರಿಂದ ಮತ್ತು ರಾಜಕೀಯ ಪರಿಹಾರ ಅಗತ್ಯವಿರುವುದರಿಂದ ಶಸ್ತ್ರವನ್ನು ಕೈಗೆತ್ತಿಕೊಂಡವರಲ್ಲಿ ಬುರ್ಹಾನ್ ಮೊದಲಿನವನೂ ಅಲ್ಲ, ಕೊನೆಯವನೂ ಆಗುವುದಿಲ್ಲ ಎಂದು ಉಮರ್ ನಿನ್ನೆ ಹೇಳಿದ್ದರು.
ಉಗ್ರವಾದದ ‘ಪೋಸ್ಟರ್ ಬಾಯ್’ ಆಗಿ ಮಿಂಚುತ್ತಿದ್ದ ವಾನಿ ನಿನ್ನೆ ಅನಂತನಾಗ್ ಜಿಲ್ಲೆಯ ಕೋಕರ್‌ನಾಗ್‌ನಲ್ಲಿ ಭದ್ರತಾ ಪಡೆಗಳೊಂದಿಗಿನ ಗುಂಡಿನ ಕಾಳಗದಲ್ಲಿ ತನ್ನಿಬ್ಬರು ಸಹಚರರೊಂದಿಗೆ ಕೊಲ್ಲಲ್ಪಟ್ಟಿದ್ದ.





