ಮುಸ್ಲಿಮ್ ಯುವಕರ ನಾಪತ್ತೆ ವರದಿ: ಕೇರಳ ಸರಕಾರದ ತನಿಖೆ
ತಿರುವನಂತಪುರ,ಜು.9: ಮಧ್ಯ ಪ್ರಾಚ್ಯಕ್ಕೆ ತೆರಳಿ ನಾಪತ್ತೆಯಾಗಿರುವ ಕೇರಳದ 15 ಯುವಕರು ಐಸಿಸ್‌ಗೆ ಸೇರಿದ್ದಾರೆಂಬ ವರದಿಗಳ ಕುರಿತು ತನಿಖೆಯನ್ನು ನಡೆಸುವುದಾಗಿ ರಾಜ್ಯ ಸರಕಾರವು ಶನಿವಾರ ಪ್ರಕಟಿಸಿದೆ. ಇದೇ ವೇಳೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು,ಇದೊಂದು ಅತ್ಯಂತ ಗಂಭೀರವಾದ ವಿಷಯವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಪತಿ-ಪತ್ನಿ ಮತ್ತು ಪುಟ್ಟಮಗು ಸೇರಿದಂತೆ ನಾಪತ್ತೆಯಾಗಿರುವ ಇವರೆಲ್ಲ ಕಾಸರಗೋಡು ಮತ್ತು ಪಾಲಕ್ಕಾಡ್ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ. ಕಳೆದೊಂದು ತಿಂಗಳಿನಿಂದ ಇವರಿಂದ ಯಾವುದೇ ಸಮಾಚಾರ ಬಾರದೇ ಚಿಂತೆಗೀಡಾಗಿರುವ ಕುಟುಂಬಗಳು ಧಾರ್ಮಿಕ ಅಧ್ಯಯನಕ್ಕಾಗಿ ತೆರಳಿದ್ದ ಇವರು ಮೂಲಭೂತವಾದಿಗಳ ಪ್ರಭಾವಕ್ಕೆ ಸಿಲುಕಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.
ನಾಪತ್ತೆಯಾಗಿರುವ ಯುವಕರೆಲ್ಲರೂ 30 ವರ್ಷಕ್ಕಿಂತ ಕಡಿಮೆ ಪ್ರಾಯದವರಾಗಿದ್ದು, ಸುಶಿಕ್ಷಿತರಾಗಿದ್ದಾರೆ. ಈ ಪೈಕಿ ಕೆಲವರು ವೈದ್ಯಕೀಯ ವಿದ್ಯಾರ್ಥಿಗಳೂ ಇದ್ದಾರೆ.
ತಮ್ಮ ಮಕ್ಕಳು ಐಸಿಸ್‌ಗೆ ಸೇರಿರುವ ಬಗ್ಗೆ ಶಂಕೆಗೊಂಡ ಕುಟುಂಬಗಳು ಕಾಸರಗೋಡು ಸಂಸದ ಕರುಣಾಕರನ್ ಸೇರಿದಂತೆ ಸ್ಥಳೀಯ ನಾಯಕರನ್ನು ಸಂಪರ್ಕಿಸಿದಾಗ ವಿಷಯ ಬೆಳಕಿಗೆ ಬಂದಿದೆ.
ನಾಪತ್ತೆಯಾಗಿರುವವರಲ್ಲಿ 11ಜನರು ಕಾಸರಗೋಡು ಜಿಲ್ಲೆಯ ಪಡ್ನಾ ಮತ್ತು ತೃಕ್ಕರಿಪುರದವರಾಗಿದ್ದರೆ,ಉಳಿದವರು ಪಾಲಕ್ಕಾಡ್ ಜಿಲ್ಲೆಯವರಾಗಿದ್ದಾರೆ.
ಈ ಬಗ್ಗೆ ವಿವರವಾದ ತನಿಖೆಯನ್ನು ನಡೆಸಲಾಗುವುದು. ಅವರು ಐಸಿಸ್ ಬಲೆಯಲ್ಲಿ ಸಿಲುಕಿದ್ದರೆ ಮತ್ತು ಐಸಿಸ್ ಪ್ರಾಬಲ್ಯದ ಪ್ರದೇಶವನ್ನು ತಲುಪಿದ್ದರೆ ಅದೊಂದು ಕಠಿಣ ಸಮಸ್ಯೆಯಾಗಲಿದೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ನಾಪತ್ತೆಯಾಗಿರುವ ಇಬ್ಬರು ಯುವಕರು ಹೆತ್ತವರಿಗೆ ಈದ್ ಸಂದರ್ಭದಲ್ಲಿ ‘‘ನಾವು ಮರಳುವುದಿಲ್ಲ. ಇಲ್ಲಿ ದೈವಿಕ ಆಡಳಿತವಿದೆ. ನೀವೂ ನಮ್ಮನ್ನು ಸೇರಬೇಕು’’ಎಂಬ ವಾಟ್ಸಾಪ್ ಸಂದೇಶಗಳು ಬಂದಿದ್ದವು ಎಂದು ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ವಿಪಿಪಿ ಮುಸ್ತಫಾ ತಿಳಿಸಿದರು.
ಇನ್ನೊಂದು ಸಂದೇಶವು ’’ಮುಸ್ಲಿಮರ ವಿರುದ್ಧ ದಾಳಿ ನಡೆಸುತ್ತಿರುವ ಅಮೆರಿಕದ ವಿರುದ್ಧ ಹೋರಡಲು ನಾವು ಐಸಿಸ್‌ಗೆ ಸೇರಿದ್ದೇವೆ ’’ಎಂದು ತಿಳಿಸಿದ್ದು,ಈ ಸಂದೇಶಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಿದೆ ಎಂದರು.





