ಕಾಶ್ಮೀರ: ಭದ್ರತಾ ಪಡೆ-ಪ್ರತಿಭಟನಾಕಾರರ ಘರ್ಷಣೆ 11 ಸಾವು, 200ಕ್ಕೂ ಅಧಿಕ ಮಂದಿಗೆ ಗಾಯ
ಹಿಝ್ಬುಲ್ ಕಮಾಂಡರ್ ವಾನಿ ಹತ್ಯೆಗೆ ಖಂಡನೆ

ಶ್ರೀನಗರ,ಜು.9: ಶುಕ್ರವಾರ ಭದ್ರತಾ ಪಡೆಗಳೊಂದಿಗಿನ ಗುಂಡಿನ ಕಾಳಗದಲ್ಲಿ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿಯ ಸಾವನ್ನು ಪ್ರತಿಭಟಿಸಿ ಕಾಶ್ಮೀರ ಕಣಿವೆಯಾದ್ಯಂತ ಇಂದು ಭಾರೀ ಹಿಂಸಾಚಾರ ಭುಗಿಲೆದ್ದು, ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆಗಳಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ. 96 ಭದ್ರತಾ ಸಿಬ್ಬಂದಿ ಸೇರಿದಂತೆ 200ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಅಧಿಕಾರಿಗಳು ಗಲಭೆಗ್ರಸ್ತ ಪ್ರದೇಶಗಳಲ್ಲಿ ಕರ್ಫ್ಯೂಸದೃಶ ನಿರ್ಬಂಧಗಳನ್ನು ಹೇರಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಮೊಬೈಲ್ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ. ಹದಗೆಡುತ್ತಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಾರ್ಷಿಕ ಅಮರನಾಥ ಯಾತ್ರೆಯನ್ನೂ ಅಮಾನತುಗೊಳಿಸಲಾಗಿದೆ. ಯಾತ್ರಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಂಡ ಬಳಿಕ ಯಾತ್ರೆಯು ಪುನರಾರಂಭಗೊಳ್ಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿಭಟನಾಕಾರರು ಮೂರು ಪೊಲೀಸ್ ಠಾಣೆಗಳಿಗೆ ಬೆಂಕಿ ಹಚ್ಚಿದ್ದಾರೆಂಬ ವರದಿಗಳು ಬಂದಿವೆ.
ತನ್ಮಧ್ಯೆ ಪುಲ್ವಾಮಾದಲ್ಲಿ ಜಿಲ್ಲಾ ಪೊಲೀಸ್ ಲೈನ್ಸ್‌ನ ಮೇಲೆ ಉಗ್ರರು ದಾಳಿ ನಡೆಸಿದ್ದು,ಭದ್ರತಾಪಡೆಗಳು ಅದನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿವೆ.
ಸಂಗಂ,ಲಾರ್ನೋ, ಸೀರ್, ಗೋಪಾಲಪೊರಾ, ಮೈನಾರಿಟಿ ಕ್ಯಾಂಪ್ ಮಟ್ಟಾನ್, ಕೋಕರ್‌ನಾಗ್,ದೂರು ಮತ್ತು ಜಂಗ್ಲತ್ ಮಂಡಿಗಳಲ್ಲಿ ಭದ್ರತಾ ಸಿಬ್ಬಂದಿ ಶಿಬಿರಗಳ ಮೇಲೆ ಪ್ರತಿಭಟನಾಕಾರರು ದಾಳಿಗಳನ್ನು ನಡೆಸಿದ್ದಾರೆ. ಕೋಕರ್‌ನಾಗ್‌ನಲ್ಲಿ ಅಚಾಬಾಲ್ ಪೊಲೀಸ್ ಠಾಣೆಗೆ ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿದ ಪ್ರತಿಭಟನಾಕಾರರು ಶಾಸಕರೋರ್ವರ ನಿವಾಸವನ್ನೂ ಸುಟ್ಟು ಹಾಕಿದ್ದಾರೆ. ಕುಂದ್, ಕಾಜಿಗುಂದ್ ಮತ್ತು ವೆಸ್ಸುನಲ್ಲಿಯ ಮೈನಾರಿಟಿ ಕ್ಯಾಂಪ್‌ಗಳ ಮೇಲೂ ದಾಳಿಗಳು ನಡೆದಿವೆ.
ಅವಂತಿಪೋರ, ಪುಲ್ವಾಮಾ, ಬೋಮಾಯಿ, ಸೋಪೋರ, ಬಾರಾಮುಲ್ಲಾ, ದೆಲಿನಾ. ಗಾಂಟಾಮುಲ್ಲಾ ಸೇರಿದಂತೆ ಹಲವಾರು ಕಡೆಗಳಲ್ಲಿ ಕಲ್ಲು ತೂರಾಟಗಳು ವರದಿಯಾಗಿವೆ. ಶ್ರೀನಗರ ಹಾಗೂ ದಕ್ಷಿಣ ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಕರ್ಫ್ಯೂ ಜಾರಿಯಲ್ಲಿದ್ದರೂ ನಿನ್ನೆ ರಾತ್ರಿಯೂ ದಕ್ಷಿಣ ಕಾಶ್ಮೀರದ ಅನೇಕ ಕಡೆ ಘರ್ಷಣೆ ನಡೆದಿರುವ ಬಗ್ಗೆ ವರದಿಯಾಗಿದೆ.
ನಿಷೇಧಾಜ್ಞೆಯ ಹೊರತಾಗಿಯೂ ಭಾರೀ ಸಂಖ್ಯೆಯ ಜನರು ಇಂದು ಟ್ರಾಲ್‌ನಲ್ಲಿ ನಡೆದ ವಾನಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಗುಪ್ತಚರ ನೇತೃತ್ವದ ಪೊಲೀಸ್ ಕಾರ್ಯಾಚರಣೆಯೊಂದರಲ್ಲಿ ವಾನಿ ಹಾಗೂ ಇತರ ಇಬ್ಬರು ಭಯೋತ್ಪಾದಕರನ್ನು ಶುಕ್ರವಾರ ಅಪರಾಹ್ನ ಕೊಲ್ಲಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಇಂತಹ ಅಂತ್ಯಕ್ರಿಯೆಗಳಿಗೆ ಭಾರೀ ಸಂಖ್ಯೆಯಲ್ಲಿ ಜನರು ಸೇರುತ್ತಿರುವುದು ಕಾಶ್ಮೀರದಲ್ಲಿ ಉಗ್ರವಾದದ ವಿರುದ್ಧ ಹೋರಾಟ ನಡೆಸುತ್ತಿರುವ ಭದ್ರತಾ ಪಡೆಗಳಿಗೆ ದೊಡ್ಡ ಸವಾಲಾಗಿದೆ. ಸಮಾಧಿಯಿಂದಲೇ ಉಗ್ರ ವಾದಕ್ಕೆ ನೇಮಕಾತಿ ಮಾಡಿಕೊಳ್ಳುತ್ತಿರುವ ಬುರ್ಹಾನ್‌ನ ಸಾಮರ್ಥ್ಯವು ಆತ ಸಾಮಾಜಿಕ ಮಾಧ್ಯಮಗಳ ಮೂಲಕ ಸಾಧಿಸಿದ್ದ ಎಲ್ಲ ವಿಷಯಗಳನ್ನು ಹಿಂದೆ ಹಾಕಿದೆ ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಇಂದು ಟ್ವೀಟಿಸಿದ್ದಾರೆ.
ಕಣಿವೆಯಾದ್ಯಂತ ಮೊಬೈಲ್ ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಜಮ್ಮು ಮೂಲ ಶಿಬಿರದಲ್ಲಿ ಅಮರನಾಥ ಯಾತ್ರೆಯನ್ನೂ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಇಂದು ನಡೆಯಬೇಕಿದ್ದ ಶಾಲಾ ಮಂಡಳಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ವಾನಿ ಹತ್ಯೆಯನ್ನು ಪ್ರತಿಭಟಿಸಲು ಇಂದು ಕಣಿವೆಯಾದ್ಯಂತ ಬಂದ್‌ಗೆ ಕರೆ ನೀಡಿದ್ದ ಸೈಯದ್ ಅಲಿ ಗೀಲಾನಿ ಹಾಗೂ ಮಿರ್ವೈಝ್ ಉಮರ್ ಫಾರೂಕ್ ಸಹಿತ ಹಲವು ಪ್ರತ್ಯೇಕತಾವಾದಿ ನಾಯಕರನ್ನು ಗೃಹ ಬಂಧನದಲ್ಲಿರಿಸಲಾಗಿದೆ. ಪ್ರತಿಭಟನಾ ಮೆರವಣಿಗೆಯೊಂದರ ನೇತೃತ್ವ ವಹಿಸುವೆನೆಂದು ಹೇಳಿದ ಬಳಿಕ ಜಮ್ಮು-ಕಾಶ್ಮೀರ ಲಿಬರೇಶನ್ ಫ್ರಂಟ್‌ನ ಅಧ್ಯಕ್ಷ ಮುಹಮ್ಮದ್ ಯಾಸೀನ್ ಮಲಿಕ್‌ರನ್ನು ಬಂಧಿಸಲಾಗಿದೆ.





