"ಝಾಕಿರ್ ನಾಯ್ಕ್ ಭಯೋತ್ಪಾದನೆಗೆ ಪ್ರೇರೇಪಿಸಿದ್ದಾರೆ ಎಂದು ವರದಿ ಮಾಡಿಲ್ಲ"
ವಿಷಾದ ವ್ಯಕ್ತಪಡಿಸಿದ ಬಾಂಗ್ಲಾ ಪತ್ರಿಕೆ ಡೈಲಿ ಸ್ಟಾರ್

ಢಾಕಾ,ಜು.9: ಢಾಕಾದ ರೆಸ್ಟೋರಂಟ್ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕನೋರ್ವ ಭಾರತದ ಖ್ಯಾತ ಇಸ್ಲಾಮಿಕ್ ಧಾರ್ಮಿಕ ವಿದ್ವಾಂಸ ಝಾಕಿರ್ ನಾಯ್ಕಾ ಅವರ ಬೋಧನೆಯಿಂದ ಸ್ಫೂರ್ತಿ ಪಡೆದಿದ್ದ ಎಂದು ತಾನು ವರದಿ ಮಾಡಿಲ್ಲ ಎಂದು ಬಾಂಗ್ಲಾದ ಡೈಲಿ ಸ್ಟಾರ್ ಪತ್ರಿಕೆ ಸ್ಪಷ್ಟ ಪಡಿಸಿದೆ.
ತಮ್ಮ ಪೀಸ್ ಟಿವಿಯಲ್ಲಿ ಝಾಕಿರ್ ನಾಯ್ಕ ‘ಎಲ್ಲ ಮುಸ್ಲಿಮರನ್ನು ಭಯೋತ್ಪಾದಕರಾಗುವಂತೆ ಆಗ್ರಹಿಸಿದ್ದಾರೆ’ ಎಂದು ಉಲ್ಲೇಖಿಸಿ ಭಯೋತ್ಪಾದಕರಲ್ಲೋರ್ವ ಕಳೆದ ವರ್ಷ ಫೇಸ್‌ಬುಕ್‌ನಲ್ಲಿ ಪ್ರಚಾರ ಅಭಿಯಾನವನ್ನು ನಡೆಸಿದ್ದ ಎಂದು ವರದಿಯು ಹೇಳಿತ್ತು. ಆದರೆ ಇದೀಗ ತನ್ನ ವರದಿಯಿಂದ ಪತ್ರಿಕೆ ಹಿಂದೆ ಸರಿದಿದ್ದು, ಈ ಕುರಿತಂತೆ ಸ್ಪಷ್ಟೀಕರಣವೊಂದನ್ನು ನೀಡಿದೆ. ಶುಕ್ರವಾರ ಯು ಟ್ಯೂಬಿನಲ್ಲಿ ಪ್ರಸಾರಗೊಂಡ ವೀಡಿಯೊದಲ್ಲಿ ಝಾಕಿರ್ ನಾಯ್ಕಿ ಅವರು, ತನ್ನ ವಿರುದ್ಧ ಪತ್ರಿಕೆ ಮಾಡಿರುವ ಆರೋಪವನ್ನು ಉಲ್ಲೇಖಿಸಿದ ಬಳಿಕ ಈ ಸ್ಪಷ್ಟೀಕರಣ ಹೊರ ಬಿದ್ದಿದೆ.
ಝಾಕಿರ್ ನಾಯ್ಕರ ಅಭಿಪ್ರಾಯಗಳು ಯಾವುದೇ ದುರುದ್ದೇಶವನ್ನು ಹೊಂದಿಲ್ಲದಿದ್ದರೂ, ಯುವ ಮನಸ್ಸುಗಳು ಅದನ್ನು ತಮಗೆ ಬೇಕಾದಂತೆ ವ್ಯಾಖ್ಯಾನಿಸುತ್ತದೆ ಎಂದು ಹೇಳುವುದಷ್ಟೇ ನಮ್ಮ ಉದ್ದೇಶವಾಗಿತ್ತು ಎಂದು ಪತ್ರಿಕೆ ಸ್ಪಷ್ಟೀಕರಣ ನೀಡಿದೆ. ಇದೇ ಸಂದರ್ಭದಲ್ಲಿ ಮಲೇಶಿಯಾದಲ್ಲಿ ಝಾಕಿರ್ ನಾಯ್ಕಿಗೆ ನಿಷೇಧ ಹೇರಲಾಗಿದೆ ಎಂಬ ತನ್ನ ವರದಿಗಾಗಿ ಪತ್ರಿಕೆ ವಿಷಾದ ಸೂಚಿಸಿದೆ.
ಮಲೇಷಿಯಾದಲ್ಲಿ ತನ್ನ ವಿರುದ್ಧ ನಿಷೇಧ ಹೇರಲಾಗಿದೆ ಎಂಬ ವರದಿಯನ್ನು ಅಲ್ಲಗಳೆದಿದ್ದ ಝಾಕಿರ್,ಮೂರು ವರ್ಷಗಳ ಹಿಂದೆ ಮಲೇಷಿಯಾದ ಪ್ರತಿಷ್ಠಿತ ಪ್ರಶಸ್ತಿಯೊಂದನ್ನು ತಾನು ಪಡೆದಿದ್ದೇನೆ. ಮೂರು ತಿಂಗಳ ಹಿಂದಷ್ಟೇ ತಾನು ಅಲ್ಲಿಗೆ ಭೇಟಿ ನೀಡಿದ್ದು,ಅಲ್ಲಿಯ ಹಲವಾರು ಸಚಿವರನ್ನು ಭೇಟಿಯಾಗಿದ್ದೇನೆ ಎಂದು ಹೇಳಿದ್ದರು.
ತನ್ನ ವರದಿಯು ಕೇವಲ ವಾಸ್ತವಾಂಶಗಳನ್ನು ಮುಂದಿಡುವ ಪ್ರಯತ್ನವಾಗಿತ್ತು ಎಂದಿರುವ ಡೇಲಿ ಸ್ಟಾರ್,ಈ ಪತ್ರಿಕೆ ಮತ್ತು ಝಾಕಿರ್ ನಡುವಿನ ತಪ್ಪು ತಿಳುವಳಿಕೆಗಳಿಗೆ ತಾನು ವಿಷಾದಿಸುತ್ತೇನೆ ಎಂದು ಪತ್ರಿಕೆ ಹೇಳಿದೆ.





