ಬಿಜೆಪಿ ಭ್ಭ್ರಷ್ಟಾಚಾರಗಳಿಗೆ ಕಾಂಗ್ರೆಸ್ ಪೋಷಣೆ: ಕುಮಾರಸ್ವಾಮಿ

ಬೆಂಗಳೂರು, ಜು.9: ರಾಜ್ಯದಲ್ಲಿ ಐದು ವರ್ಷಗಳ ಕಾಲ ಅಧಿಕಾರ ನಡೆಸಿದ ಬಿಜೆಪಿ ಬಿತ್ತನೆ ಮಾಡಿದ ಭ್ರಷ್ಟಾಚಾರದ ಬೀಜಕ್ಕೆ ಕಾಂಗ್ರೆಸ್ ಸರಕಾರ ಗೊಬ್ಬರ ಹಾಗೂ ನೀರು ಹಾಕಿ ಬೃಹದಾಕಾರವಾಗಿ ಪೋಷಿಸುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಮರಳು ದಂಧೆ ಆರಂಭವಾಗಿದ್ದು ಬಿಜೆಪಿ ಸರಕಾರದ ಅವಧಿಯಲ್ಲಿ. ಇದೀಗ ಕಾಂಗ್ರೆಸ್ ಸರಕಾರ ಅದನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ, ಕ್ರಿಕೆಟ್ ಬೆಟ್ಟಿಂಗ್, ಗ್ಯಾಂಬ್ಲಿಂಗ್‌ಗೆ ರಕ್ಷಣೆ ನೀಡುತ್ತಿರುವವರು ಯಾರು ಎಂಬುದನ್ನು ಪತ್ತೆ ಹಚ್ಚಲು ಈ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲವೆ ಎಂದು ಪ್ರಶ್ನಿಸಿದರು. ಐಎಎಸ್ ಅಧಿಕಾರಿ ಡಿ.ಕೆ.ರವಿ ಆತ್ಮಹತ್ಯೆ ಮಾಡಿಕೊಂಡಾಗ ‘ಪ್ರೇಮ ವೈಫಲ್ಯ’, ಚಿಕ್ಕಮಗಳೂರು ಡಿವೈಎಸ್ಪಿ ಕಲ್ಪಪ್ಪ ಆತ್ಮಹತ್ಯೆಗೆ ಅಪಹರಣ ಪ್ರಕರಣದ ಆರೋಪ. ಇದೀಗ, ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆಗೆ ಮಾನಸಿಕ ಖಿನ್ನತೆ ಹಾಗೂ ಕೌಟುಂಬಿಕ ಸಮಸ್ಯೆಯ ಬಣ್ಣವನ್ನು ಹಚ್ಚಲಾಗುತ್ತಿದೆ ಎಂದು ಅವರು ಕಿಡಿಗಾರಿದರು.
ಯಾವ ತನಿಖೆಯನ್ನೂ ಮಾಡದೆ ಗಣಪತಿ ಅವರ ಸಹೋದರನ ಮೇಲೆ ಒತ್ತಡ ಹೇರಿ ಸರಕಾರ ಈಗಾಗಲೇ ಒಂದು ತೀರ್ಮಾನಕ್ಕೆ ಬಂದು ಬಿಟ್ಟಿದೆ. ಈ ಸರಕಾರದ ಕೆಟ್ಟ ನಡವಳಿಕೆಗಳಿಗೆ ಇದಕ್ಕಿಂತ ಉದಾಹರಣೆಗಳು ಬೇಕೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಗಣಪತಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಿಂತ ಮುಂಚಿತವಾಗಿ ಮಾಧ್ಯಮಗಳ ಎದುರು ತಮಗೆ ಏನಾದರೂ ಹೆಚ್ಚು ಕಡಿಮೆಯಾದರೆ ಇವರುಗಳೇ ಹೊಣೆ ಎಂದು ನೇರವಾಗಿ ಹೆಸರುಗಳನ್ನು ಉಲ್ಲೇಖಿಸಿ ಆರೋಪ ಮಾಡಿದ್ದಾರೆ. ಅದಕ್ಕಿಂತ ಸಾಕ್ಷಾಧಾರಗಳು ಸರಕಾರಕ್ಕೆ ಬೇಕೆ, ರೈತರ ಕುಟುಂಬದ ಜೊತೆ ಚೆಲ್ಲಾಟ ಮಾಡಿ ಆಯಿತು. ಈಗ ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಗಳ ಜೊತೆ ಚೆಲ್ಲಾಟ ಮಾಡಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪೊಲೀಸ್ ಇಲಾಖೆಯನ್ನು ದರೋಡೆ ಮಾಡಲು ಇಟ್ಟು ಕೊಂಡಿದ್ದಾರೆ. ರಾಜ್ಯವನ್ನು ಉಳಿಸಲು ತಮ್ಮ ತಮ್ಮ ಮನೆಗಳಿಂದ ಹೊರಗೆ ಬಂದು ಧ್ವನಿ ಎತ್ತಿ ಎಂದು ರಾಜ್ಯದ ಜನತೆಗೆ ಕೈ ಮುಗಿದು ಮನವಿ ಮಾಡುತ್ತೇನೆ. ರಾಜ್ಯವು ಇಂತಹ ಸಂಕಷ್ಟದ ಪರಿಸ್ಥಿತಿಗೆ ಗುರಿಯಾಗಲು ಬಿಜೆಪಿ ನಾಯಕರು ಸೇರಿದಂತೆ ಎಲ್ಲ ರಾಜಕೀಯ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಆತ್ಮಹತ್ಯೆ ಪ್ರಕರಣದ ಬಗ್ಗೆ ಯಾಕೆ ಯಾರೂ ಧ್ವನಿ ಎತ್ತುತ್ತಿಲ್ಲ. ಈ ಪ್ರಕರಣದ ಆರೋಪಿಗಳಾದ ಪ್ರವೀಣ್, ತೇಜಸ್‌ಗೌಡ, ನಟರಾಜ್, ಜೀವ ಇವರೆಲ್ಲ ಯಾರು, ಅಪಹರಣದ ಪ್ರಕರಣದಲ್ಲಿ ಕಲ್ಲಪ್ಪ ಪಾತ್ರವೇನು ಎಂಬುದನ್ನು ಪತ್ತೆ ಹಚ್ಚಲು ಈವರೆಗೆ ಯಾಕೆ ಸಾಧ್ಯವಾಗಿಲ್ಲ’’
-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ





