ಯುನೈಟೆಡ್ ಸ್ಪಿರಿಟ್ಸ್ ನಲ್ಲಿ 1225 ಕೋಟಿ ರೂ. ಗೋಲ್ ಮಾಲ್
ತನ್ನದೇ ಕಂಪೆನಿಯನ್ನು ಬಿಡಲಿಲ್ಲ ಮಲ್ಯ

ಹೊಸದಿಲ್ಲಿ, ಜು.10: ಮದ್ಯದ ದೊರೆ ವಿಜಯ ಮಲ್ಯ ಅವರಿಗೆ ಹೊಸ ಕಂಟಕ ಎದುರಾಗಿದೆ. ತಮ್ಮ ಹಿಂದಿನ ಕಂಪೆನಿಯಾದ ಯುನೈಟೆಡ್ ಸ್ಪಿರಿಟ್ಸ್ ಕಂಪನಿಗೆ 1225.3 ಕೋಟಿ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಯುನೈಟೆಡ್ ಸ್ಪಿರಿಟ್ಸ್ ಗೆ ಬರಬೇಕಿದ್ದ ಈ ಭಾರೀ ಮೊತ್ತದ ಹಣವನ್ನು ಬೇರೆಡೆಗೆ ವರ್ಗಾಯಿಸಿದ್ದು ಹಾಗೂ ಕಿಂಗ್ ಫಿಶರ್ ಹಾಗೂ ಫಾರ್ಮ್ಯಲಾ ಒನ್ ಜತೆ ಕಾನೂನುಬಾಹಿರ ವಹಿವಾಟು ನಡೆಸಿರುವುದು ಬಹಿರಂಗವಾಗಿದೆ.
ಇದೀಗ ಜಾಗತಿಕ ಸಂಸ್ಥೆಯಾದ ಡಿಯಾಗೊ ಮಾಲಕತ್ವದಲ್ಲಿರುವ ಯುನೈಟೆಡ್ ಸ್ಪಿರಿಟ್ಸ್ ನಡೆಸಿದ ಹೆಚ್ಚುವರಿ ವಿಚಾರಣೆಯಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ಹಿಂದಿನ ಮಾತುಕತೆ ವೇಳೆ ಪ್ರಸ್ತಾವಿಸದ ವಿಚಾರವನ್ನು ಇದೀಗ ಪ್ರಸ್ತಾಪಿಸಿ ಮಾಜಿ ಅಧ್ಯಕ್ಷರು ಈ ಮೊತ್ತದ ಮೇಲೆ ಹಕ್ಕು ಪ್ರತಿಪಾದನೆಗೆ ಮುಂದಾಗಿದ್ದಾರೆ ಎಂದು ಕಂಪೆನಿ ಪ್ರಕಟಿಸಿದೆ.
ಬಂಧನದಿಂದ ತಪ್ಪಿಸಿಕೊಳ್ಳಲು ಕೆಲ ತಿಂಗಳಿಂದ ಲಂಡನ್ ನಲ್ಲಿರುವ ಮಲ್ಯ, ಈ ವರ್ಷದ ಆರಂಭದಲ್ಲಿ ಯುಎಸ್ಎಲ್ ಜತೆ ಒಪ್ಪಂದ ಮಾಡಿಕೊಂಡು, ಕಂಪೆನಿಯ ಅಧ್ಯಕ್ಷ ಹಾಗೂ ನಿರ್ದೇಶಕ ಹುದ್ದೆ ಸೇರಿದಂತೆ ಸಂಪೂರ್ಣವಾಗಿ ಕಂಪೆನಿ ತೊರೆಯಲು 500 ಕೋಟಿ ರೂಪಾಯಿಯ ವ್ಯವಹಾರ ಕುದುರಿಸಿದ್ದರು.
ಈ ವಿಷಯ ಶನಿವಾರ ನಡೆದ ಯುಎಸ್ಎಲ್ ಆಡಳಿತ ಮಂಡಳಿ ಸಭೆಯಲ್ಲಿ 2015ರ ಏಪ್ರಿಲ್ ನಲ್ಲಿ ಆರಂಭವಾದ ಹೆಚ್ಚುವರಿ ತನಿಖೆಯ ವರದಿ ವಿಚಾರ ಚರ್ಚ್ ಗೆ ಬಂದಿದೆ. ಇದರ ಪ್ರಕಾರ, ಬೇರೆ ಕಂಪೆನಿಗಳಿಗೆ ನೀಡಿದ್ದ 1337 ಕೋಟಿ ರೂಪಾಯಿಗಳ ಸಾಲದ ವಿಚಾರದಲ್ಲಿ ಅವ್ಯವಹಾರ ನಡೆದಿದೆ.





