ಸಜಿಪಮೂಡ ಹಿಂದೂ ರುದ್ರಭೂಮಿ ನಿರ್ಮಾಣ ವಿವಾದ: ಗ್ರಾ.ಪಂ. ಅಧ್ಯಕ್ಷರ ಸ್ಪಷ್ಟನೆ
ವಿಟ್ಲ, ಜು.10: ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ವೆ ನಂಬ್ರ 246/1ಎ ಕ್ಕೊಪ್ಪಿದ 0.45 ಎಕ್ರೆ ಜಮೀನಿನಲ್ಲಿ ಸಾರ್ವಜನಿಕ ಹಿಂದೂ ಸ್ಮಶಾನ ಭೂಮಿ ಅಭಿವೃದ್ಧಿಪಡಿಸಲು ಸ್ಥಳಾವಕಾಶ ಕೊರತೆ ಮತ್ತು ಮೂಲ ಕಡತದಲ್ಲಿ ಮೂಲ ನಕ್ಷೆ ಕಣ್ಮರೆಯಾಗಿರುವುದೇ ಪ್ರಮುಖ ತೊಡಕಾಗಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಗಣಪತಿ ಭಟ್ ಸ್ಪಷ್ಟನೆ ನೀಡಿದರು.
ಇಲ್ಲಿನ ಹಿಂದೂ ರುದ್ರಭೂಮಿ ನಿರ್ಮಾಣಕ್ಕೆ ಪಂಚಾಯತ್ ಆಡಳಿತ ಅಡ್ಡಿ ಪಡಿಸುತ್ತಿದೆ ಎಂಬ ಹಿಂದೂ ಸಂಘಟನೆಗಳ ನಿರಂತರ ಆರೋಪಕ್ಕೆ ಸ್ಪಷ್ಟನೆ ನೀಡಿ ಬಿಸಿ ರೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 14 ವರ್ಷಗಳಿಂದ ಗ್ರಾಮಸಭೆಯಲ್ಲಿ ಇದೇ ವಿಚಾರ ಪ್ರತಿಧ್ವನಿಸುತ್ತಿದ್ದರೂ ಸ್ಮಶಾನ ಭೂಮಿ ಗುರುತಿಸುವಲ್ಲಿ ಕಂದಾಯ ಇಲಾಖೆ ಮತ್ತು ಭೂಮಾಪಕರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಈ ನಡುವೆ ಇಲ್ಲಿನ ಒಟ್ಟು 9.32 ಎಕ್ರೆ ಜಮೀನಿಗೆ ಸಂಬಂಧಿಸಿದಂತೆ 0.69 ಎಕ್ರೆ ಜಮೀನಿಗೆ ಸ್ಥಳೀಯ ನಿವಾಸಿ ಮುಂಡಪ್ಪ ಶೆಟ್ಟಿ ಎಂಬವರ ಪುತ್ರ ಶಿವಪ್ರಸಾದ್ ಶೆಟ್ಟಿ ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿ ಆಕ್ಷೇಪ ಸಲ್ಲಿಸಿದ್ದರು. ಇದೀಗ ಅನಧಿಕೃತವಾಗಿ ಅತಿಕ್ರಮಣ ಮಾಡಿಕೊಂಡಿದ್ದ ಈ ಜಮೀನಿಗೆ ಸಂಬಂಧಿಸಿದಂತೆ ಅವರ ಅರ್ಜಿ ಅಕ್ರಮ-ಸಕ್ರಮ ಸಮಿತಿಯಿಂದ ತಿರಸ್ಕರಿಸಲ್ಪಟ್ಟಿದೆ ಎಂದರು.
ಈಗಾಗಲೇ ಗ್ರಾಮ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಆರೋಗ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಪುನರ್ ಪರಿಶೀಲನೆ ನಡೆಸಿ ಸ್ಥಳೀಯ ನಾಗರಿಕರಿಗೆ ಒಪ್ಪಿಗೆಯಾಗುವಂತೆ ಸ್ಥಳ ಗುರುತಿಸಿ ನಕ್ಷೆ ಸಹಿತ ನೀಡುವ ವರದಿ ಬಳಿಕ ಸುಸಜ್ಜಿತ ಹಿಂದೂ ಸ್ಮಶಾನ ನಿಮರ್ಿಸಲು ಕಂದಾಯ ಇಲಾಖೆ ಸ್ಥಳ ಗುರುತಿಸಿ ನೀಡಿದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದರು.
ಈಗಾಗಲೇ ತಹಶೀಲ್ದಾರ್ ಮತ್ತು ಮಂಗಳೂರು ಉಪಆಯಕ್ತರು ಸ್ಥಳ ಪರಿಶೀಲನೆ ನಡೆಸಿ ನೀಡಿದ ವರದಿ ಹಿನ್ನೆಲೆಯಲ್ಲಿ ಮೂರು ತಿಂಗಳೊಳಗೆ ಹಿಂದೂ ಸ್ಮಶಾನ ಭೂಮಿ ಅಭಿವೃದ್ಧಿಪಡಿಸುವಂತೆ ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ ಅವರು ನೀಡಿದ ಆದೇಶಕ್ಕೆ ಬೆಲೆ ಇಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಲು ಗ್ರಾ ಪಂ ಅಧ್ಯಕ್ಷ ಗಣಪತಿ ಭಟ್ ಹಾಗೂ ತಾ ಪಂ ಸದಸ್ಯ ಸಂಜೀವ ಪೂಜಾರಿ ತಡಕಾಡಿದರು.
ಇದೇ ವೇಳೆ ಮಾತನಾಡಿದ ತಾ ಪಂ ಸದಸ್ಯ ಸಂಜೀವ ಪೂಜಾರಿ ಬೊಳ್ಳಾಯಿ ಕಳೆದ 14 ವರ್ಷಗಳಿಂದ ಸುಸಜ್ಜಿತ ಸ್ಮಶಾನ ನಿರ್ಮಿಸಲು ಅನುಕೂಲವಾಗುವಂತೆ ಜಮೀನು ಒದಗಿಸಲು ನಾವು ಹೋರಾಟ ನಡೆಸುತ್ತಿದ್ದು, ಇದಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಕೂಡಾ ಏರಿದ್ದೇವೆ. ಸುಸಜ್ಜಿತ ಸ್ಮಶಾನ ನಿರ್ಮಿಸಲು ನಮಗೆ ಯಾವುದೇ ಅನುದಾನ ಕೊರತೆ ಇಲ್ಲ. ಬದಲಾಗಿ ಜನವಸತಿ ಪ್ರದೇಶಕ್ಕೆ ಬದಲಾಗಿ ನಿರ್ಜನ ಪ್ರದೇಶದಲ್ಲಿ ಸ್ಮಶಾನ ನಿರ್ಮಿಸುವುದಕ್ಕೆ ನಾವು ಆದ್ಯತೆ ನೀಡುತ್ತಿದ್ದೇವೆ. ಈ ನಡುವೆ ಕೆಲವೊಂದು ಮಂದಿ ಇತ್ತೀಚೆಗೆ ಪ್ರತಿಭಟನೆ ನಡೆಸುವ ಮೂಲಕ ಜನತೆಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭ ಪದ್ಮನಾಭ ನರಿಂಗಾನ, ರಮೇಶ ಸುವರ್ಣ, ವಿಶ್ವನಾಥ ಬೆಳ್ಚಡ, ಅಬ್ದುಲ್ ಅಜೀಝ್ ಉಪಸ್ಥಿತರಿದ್ದರು.







