ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ : ಸಚಿವ ವೆಂಕಯ್ಯನಾಯ್ಡು

ಬೆಂಗಳೂರು.ಜು.10: ಅನ್ಯ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಗೊಂಡಿದ್ದರೂ ಕರ್ನಾಟಕದ ಅಭಿವೃದ್ಧಿಗೆ ತಾನು ಸದಾ ಆದ್ಯತೆ ನೀಡುವುದಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ವೆಂಕಯ್ಯನಾಯ್ಡು ಹೇಳಿದ್ದಾರೆ.
ನಗರದಲ್ಲಿಂದು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಂಗಳೂರು ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ನೆರವು ಒದಗಿಸಲು ಸಿದ್ಧವಿರುವುದಾಗಿ ತಿಳಿಸಿದರು.
ಉತ್ತರ ಕರ್ನಾಟಕದ ಶಿಲ್ಪಕಲಾ ತಾಣವಾದ ಬಾದಾಮಿ ಅಭಿವೃದ್ಧಿಗೆ ಶ್ರಮಿಸಲಾಗಿದೆ. ವಿದ್ಯುತ್ ಪೂರೈಕೆ ಕ್ಷೇತ್ರದಲ್ಲಿ ಕೇಂದ್ರ ಸರಕಾರದಿಂದ ಅಗತ್ಯ ಆರ್ಥಿಕ ನೆರವು ಒದಗಿಸಿರುವುದಾಗಿ ಅವರು ತಿಳಿಸಿದರು. ಕೇಂದ್ರ ಸರಕಾರ ರಸಗೊಬ್ಬರದ ಬೆಲೆಯನ್ನು ಕಡಿತಗೊಳಿಸುವಲ್ಲಿ ಅಗತ್ಯ ಕ್ರಮಕೈಗೊಂಡಿದ್ದು, ಇದರ ಪೂರೈಕೆಯಲ್ಲಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಂಡಿದೆ ಎಂದು ಹೇಳಿದರು.
ಅಭಿವೃದ್ಧಿ ಕಾರ್ಯಕ್ರಮಗಳ ವಿಚಾರದಲ್ಲಿ ಮಾಧ್ಯಮಗಳ ಸಹಕಾರ ಮತ್ತು ಬೆಂಬಲ ಅತ್ಯಗತ್ಯ ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ, 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸಂಪೂರ್ಣ ಬೆಂಬಲದೊಂದಿಗೆ ಅಧಿಕಾರಕ್ಕೆ ಬರಲು ವೆಂಕಯ್ಯನಾಯ್ಡು ಬೆಂಬಲ ಮತ್ತು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ರಾಜ್ಯ ಬಿಜೆಪಿಯ ಕೋರ್ ಕಮಿಟಿ ಪುನಾರಚನೆಗೆ ಸಂಬಂಧಿಸಿದಂತೆ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ವರಿಷ್ಠರ ನಿರ್ಧಾರಕ್ಕೆ ಎಲ್ಲರೂ ಬದ್ಧ ಎಂದು ಹೇಳಿದರು.
ದೆಹಲಿಗೆ ತೆರಳಿ ಪಕ್ಷದ ವರಿಷ್ಠರ ಜೊತೆ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ಕೋರ್ ಕಮಿಟಿ ಪುನಾರಚನೆ ವಿಚಾರಣೆಯನ್ನು ದೊಡ್ಡದು ಮಾಡುವ ಅಗತ್ಯವಿಲ್ಲ. ರಾಜ್ಯದಲ್ಲಿ ಈ ಸರಕಾರ ಸತ್ತಿದೆ, ರೈತರ ಆತ್ಮಹತ್ಯೆಯ ನಂತರ ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ದೂರು ನೀಡಿದ್ದೇವೆ. ರಾಜ್ಯದಿಂದ ವರದಿ ತರಿಸಿಕೊಳ್ಳುವ ಭರವಸೆಯನ್ನು ಅವರು ನೀಡಿದ್ದಾರೆ ಎಂದರು.
ಡಿವೈಎಸ್ಪಿ ಎಂ.ಕೆ. ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ. ಜಾರ್ಜ್ ವಿರುದ್ಧ ಎಫ್‌ಐಆರ್ ದಾಖಲಾಗಿಲ್ಲ. ಈ ಸರಕಾರ ಸತ್ತು ಹೋಗಿದೆ ಎಂದು ವಾಗ್ದಾಳಿ ನಡೆಸಿದರು.
ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ನಾಳೆ ಬಿಜೆಪಿ ಸದನದಲ್ಲಿ ಹೋರಾಟ ನಡೆಸಲಿದೆ. ಸದನದ ಹೊರಗೂ ಹೋರಾಟ ನಡೆಸಲು ಪಕ್ಷ ತೀರ್ಮಾನಿಸಿದ್ದು, ಹೋರಾಟದ ಸ್ವರೂಪದ ಬಗ್ಗೆ ಮುಖಂಡರೊಂದಿಗೆ ಚರ್ಚಿಸಿ ತೀರ್ಮಾನ ಮಾಡುವುದಾಗಿ ಯಡಿಯೂರಪ್ಪ ಅವರು ಹೇಳಿದರು.
ಸಂಸದ ಪಿ.ಸಿ. ಮೋಹನ್, ವೆಂಕಯ್ಯನಾಯ್ಡು ನಾಲ್ಕನೆ ಬಾರಿಗೆ ರಾಜಸ್ಥಾನದಿಂದ ಆಯ್ಕೆಯಾಗಿದ್ದು, ಬೇಸರ ತಂದಿದೆ ಅವರು ಕರ್ನಾಟಕದಿಂದಲೇ ಆಯ್ಕೆಯಾಗಬೇಕಿತ್ತು. ಕರ್ನಾಟಕಕ್ಕೆ ಅವರ ಕೊಡುಗೆ ಅಪಾರ ಎಂದರು.
ಕೇಂದ್ರ ಸಚಿವ ವೆಂಕಯ್ಯನಾಯ್ಡು ಅವರನ್ನು ರಾಜ್ಯ ಸಭೆಗೆ ಕಳುಹಿಸಲು ಹಲವು ರಾಜ್ಯಗಳು ಮುಂದೆ ಬಂದಿದ್ದವು ಎನ್ನುವುದನ್ನು ಅವರು ನೆನಪು ಮಾಡಿದ ಅವರು, ಸತತ ನಾಲ್ಕು ಬಾರಿ ರಾಜ್ಯ ಸಭೆಗೆ ಆಯ್ಕೆಯಾಗಿರುವ ವೆಂಕಯ್ಯ ನಾಯ್ಡು ಅವರನ್ನು ಅಭಿನಂದಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.







