ಫಿಲೋಮಿನಾದಲ್ಲಿ ವನಮಹೋತ್ಸವ ಆಚರಣೆ
ಪರಿಸರ ಸಂರಕ್ಷಣೆಯಿಂದ ಪ್ರಾಕೃತಿಕ ವಿಕೋಪಗಳ ನಿಯಂತ್ರಣ ಸಾಧ್ಯ ಡಾ ಆ್ಯಂಟನಿ ಪ್ರಕಾಶ್ ಮೊಂತೆರೊ

ಪುತ್ತೂರು,ಜು,10: ಇಂದಿನ ದಿನಗಳಲ್ಲಿ ಮಿಂಚು, ಗುಡುಗು, ಸುನಾಮಿಗಳಂತಹ ಪ್ರಾಕ್ರತಿಕ ವಿಕೋಪಗಳಿಂದಾಗಿ ಮಾನವನ ಬದುಕಿನಲ್ಲಿ ಹಲವಾರು ರೀತಿಯಲ್ಲಿ ಕಷ್ಟ ನಷ್ಟಗಳಾಗುತ್ತಿದ್ದು, ಪರಿಸರ ಸಂರಕ್ಷಣೆಯ ಮೂಲಕ ಇವೆಲ್ಲವನ್ನು ನಿಯಂತ್ರಿಸಲು ಸಾಧ್ಯವಿದೆ ಎಂದು ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ರೆ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಹೇಳಿದರು.
ಕಾಲೇಜಿನ ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ಘಟಕಗಳ ಆಶ್ರಯದಲ್ಲಿ ಶನಿವಾರ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾದ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ನಾವು ಪ್ರತಿ ವರ್ಷ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವವನ್ನು ಅತ್ಯಂತ ಶೃದ್ಧೆಯಿಂದ ಆಚರಿಸುತ್ತೇವೆ. ನೆಟ್ಟ ಗಿಡಗಳನ್ನು ಸಮರ್ಪಕವಾಗಿ ನೀರುಣಿಸಿ, ಪೋಷಿಸುವಲ್ಲಿ ಪ್ರತಿಯೊಬ್ಬ ಸ್ವಯಂಸೇವಕನೂ ಬದ್ಧನಾಗಿರಬೇಕು ಎಂದು ಹೇಳಿದರು.
ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಿಯೊ ನೊರೊನ್ಹ ಮಾತನಾಡಿ, ನಾವು ಗಿಡ ಮರಗಳನ್ನು ನಮ್ಮ ಕುಟುಂಬದ ಸದಸ್ಯರಂತೆ ಕಾಣಬೇಕು. ನಮ್ಮ ಸುತ್ತಲಿನ ಪರಿಸರ ಹಸಿರಿನಿಂದ ಕಂಗೊಳಿಸಿದಾಗ ನಮ್ಮ ಜೀವನವೂ ನೆಮ್ಮದಿಯಿಂದ ಕೂಡಿರುತ್ತದೆ ಎಂದು ಹೇಳಿದರು.
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರೆ. ಫಾ. ವಿಜಯ್ ಲೋಬೊ, ಕಾಲೇಜಿನ ವಾರ್ತಾ ಮತ್ತು ಪ್ರಚಾರ ಸಮಿತಿಯ ಸಂಚಾಲಕ ಪ್ರೊ. ದಿನಕರ ರಾವ್ ಭಾಗವಹಿಸಿದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ. ರಾಧಾಕೃಷ್ಣ ಗೌಡ ಸ್ವಾಗತಿಸಿದರು. ಪ್ರೊ. ಗೀತಾ ಪೂರ್ಣಿಮಾ ವಂದಿಸಿದರು. ಎನ್‌ಸಿಸಿ ಅಧಿಕಾರಿ ಲೆ. ಜೋನ್ಸನ್ ಡೇವಿಡ್ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು.







