ಡಿವೈಎಸ್ಪಿ ಗಣಪತಿ ನಿಗೂಢ ಆತ್ಮಹತ್ಯೆ ಪ್ರಕರಣ : ಸಿಐಡಿಯಿಂದ ಸರಕಾರಕ್ಕೆ ನಾಳೆ ಪ್ರಾಥಮಿಕ ವರದಿ ಸಲ್ಲಿಕೆ ?

ಬೆಂಗಳೂರು,ಜು. 10: ಮಂಗಳೂರು ಡಿವೈಎಸ್ಪಿ ಎಂ.ಕೆ.ಗಣಪತಿ ನಿಗೂಢ ಆತ್ಮಹತ್ಯೆ ಪ್ರಕರಣ ಸಂಬಂಧ ಪ್ರಾಥಮಿಕ ತನಿಖೆಯನ್ನು ಪೂರ್ಣಗೊಳಿಸಿರುವ ಸಿಐಡಿ ಅಧಿಕಾರಿಗಳು ನಾಳೆ(ಜು.11)ರಾಜ್ಯ ಸರಕಾರಕ್ಕೆ ಪ್ರಾಥಮಿಕ ವರದಿ ಸಲ್ಲಿಸಲು ಸಾಧ್ಯತೆಗಳಿವೆ.
ಡಿವೈಎಸ್ಪಿ ಆತ್ಮಹತ್ಯೆಗೆ ಶರಣಾದ ಮಡಿಕೇರಿ, ಅವರ ಹುಟ್ಟೂರು ರಂಗ್ರ ಸಮುದ್ರದಲ್ಲಿ ಕುಟುಂಬ ಸದಸ್ಯರು, ಸ್ನೇಹಿತರು, ಸಹೋದ್ಯೋಗಿಗಳು, ಆತ್ಮಹತ್ಯೆಗೂ ಮೊದಲು ಸಂದರ್ಶನ ನೀಡಿದ್ದ ಖಾಸಗಿ ಸುದ್ಧಿ ವಾಹಿನಿಯ ಸಿಬ್ಬಂದಿಯ ವಿಚಾರಣೆ ನಡೆಸಿರುವ ಸಿಐಡಿ ಅಧಿಕಾರಿಗಳು, ಪ್ರಾಥಮಿಕ ವರದಿ ಸಿದ್ದಪಡಿಸುವುದರಲ್ಲಿ ನಿರತರಾಗಿದ್ದಾರೆ.
ವಿಧಾನ ಮಂಡಲ ಅಧಿವೇಶನದಲ್ಲಿಯೂ ಈ ಪ್ರಕರಣ ಪ್ರತಿಧ್ವನಿಸುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ವಿಪಕ್ಷಗಳಿಗೆ ಉತ್ತರ ನೀಡಬೇಕಾಗಿದೆ. ಆದುದರಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತ್ವರಿತಗತಿ ತನಿಖೆ ನಡೆಸಿ ಪ್ರಾಥಮಿಕ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು.
ಆ ಹಿನ್ನೆಲೆಯಲ್ಲಿ ಸಿಐಡಿ ಐಜಿ ಹೇಮಂತ್ ನಿಂಬಾಳ್ಕರ್, ಎಸ್ಪಿ ಕುಮಾರಸ್ವಾಮಿ ನೇತೃತ್ವದ ಎಂಟು ಮಂದಿ ಅಧಿಕಾರಿಗಳ ತಂಡ ಡಿವೈಎಸ್ಪಿ ಗಣಪತಿ ನಿಗೂಢ ಆತ್ಮಹತ್ಯೆ ಪ್ರಕರಣ ಸಂಬಂಧ ಪತ್ನಿ ಪಾವನಾ, ಮಕ್ಕಳು ಸೇರಿದಂತೆ ಹಲವು ಮಂದಿಯನ್ನು ವಿಚಾರಣೆ ನಡೆಸಿದ್ದು, ಅಗತ್ಯ ಮಾಹಿತಿ ಸಂಗ್ರಹಿಸಿದೆ.
ಈ ಮಧ್ಯೆಯೇ ಸಿಐಡಿ ಅಧಿಕಾರಿಗಳ ಮತ್ತೊಂದು ತಂಡ ಮಂಗಳೂರಿನಲ್ಲಿ ಗಣಪತಿ ಕರ್ತವ್ಯ ನಿರ್ವಹಿಸುತ್ತಿದ್ದ ಕಚೇರಿ ಹಾಗೂ ಸಹೊದ್ಯೋಗಿಗಳ ವಿಚಾರಣೆ ತನಿಖೆ ನಡೆಸಿ ಮಾಹಿತಿ ಕಲೆಹಾಕಿದ್ದು ಎಲ್ಲ ದೃಷ್ಟಿಕೋನಗಳಿಂದಲೂ ಪ್ರಾಥಮಿಕ ತನಿಖೆ ಮುಗಿಸಿದ್ದು, ನಾಳೆ ರಾಜ್ಯ ಸರಕಾರಕ್ಕೆ ಆತ್ಮಹತ್ಯೆ ಪ್ರಕರಣ ಸಂಬಂಧ ವರದಿ ನೀಡಲಿದೆ ಎಂದು ಗೊತ್ತಾಗಿದೆ.
ಡಿವೈಎಸ್ಪಿ ಗಣಪತಿ ನಿಗೂಢ ಆತ್ಮಹತ್ಯೆಗೆ ಮೊದಲು ಖಾಸಗಿ ಸುದ್ಧಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಇಲಾಖೆ ಉನ್ನತಾಧಿಕಾರಿಗಳಾ ಪ್ರಣಬ್ ಮೊಹಂತಿ ಮತ್ತು ಎ.ಎಂ.ಪ್ರಸಾದ್ ಅವರ ಹೆಸರನ್ನು ಉಲ್ಲೇಖಿಸಿದ್ದರು.
ಈ ಮಧ್ಯೆ ವಿರೋಧ ಪಕ್ಷಗಳು ಸಚಿವ ಜಾರ್ಜ್ ರಾಜೀನಾಮೆ ನೀಡಬೇಕು. ಅಲ್ಲದೆ, ಗಣಪತಿ ಹೆಸರಿಸಿರುವವರ ವಿರುದ್ಧ ಎಫ್‌ಐಆರ್ ದಾಖಲು ಮಾಡಬೇಕು ಎಂದು ಆಗ್ರಹಿಸಿವೆ. ಅಲ್ಲದೆ, ಪ್ರಕರಣವನ್ನು ಸಿಬಿಐ ತನಿಖೆ ಒಪ್ಪಿಸಬೇಕು ಎಂಬ ಒತ್ತಡವೂ ಹೆಚ್ಚಾಗಿದೆ.







