ಮುಂಡಾಜೆ: ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕನ ರಕ್ಷಣೆ
ಬೆಳ್ತಂಗಡಿ, ಜು.10: ಮುಂಡಾಜೆ ಸಮೀಪ ಆಕಸ್ಮಿಕವಾಗಿ ತೋಡಿನಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋದ ಬಾಲಕನನ್ನು ಸ್ಥಳೀಯ ಯುವಕರು ರಕ್ಷಿಸಿದ್ದಾರೆ.
ರವಿವಾರ ಉಜಿರೆ ಅತ್ತಾಜೆ ನಿವಾಸಿ ಆದಂ ಎಂಬವರು ಕುಟುಂಬದವರೊಂದಿಗೆ ಚಿಕ್ಕಮಗಳೂರಿಗೆ ಹೊರಟಿದ್ದರು. ಮುಂಡಾಜೆ ಸಮೀಪ ಕಿರು ಸೇತುವೆಯ ಬಳಿ ವಾಹನ ನಿಲ್ಲಿಸಿ ಮೂತ್ರಶಂಕೆಗೆ ತೆರಳಿದ್ದ ವೇಳೆ 9 ವರ್ಷ ಪ್ರಾಯದ ರವೂಫ್ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾನೆ. ಬಳಿಕ ಬಂಡೆಕಲ್ಲಿನಲ್ಲಿ ಸಿಕ್ಕಿಕೊಂಡಿದ್ದಾನೆ. ನೀರಿನ ಸೆಳೆತ ಅತಿಯಾಗಿದ್ದ ಕಾರಣ ಬಾಲಕನನ್ನು ರಕ್ಷಿಸಲು ತಕ್ಷಣ ಸಾಧ್ಯವಾಗಲಿಲ್ಲ. ಈ ಸಂದರ್ಭ ಅಲ್ಲಿಗೆ ಬಂದ ಪ್ರವೀಣ, ಆನಂದ್, ವಿಕ್ರಂ ನೀರಿಗೆ ಧುಮುಕಿ ಬಾಲಕನನ್ನು ರಕ್ಷಿಸಿದ್ದಾರೆ. ಅಬ್ದುಲ್ ಅಝೀಝ್ ಎಂಬವರೂ ರಕ್ಷಣಾ ಕಾರ್ಯಕ್ಕೆ ಸಹಕರಿಸಿದ್ದರು.
Next Story





