ಮಡಿಕೇರಿ: ಉನ್ನತ ಹುದ್ದೆಗೇರಲು ವಿದ್ಯಾರ್ಥಿಗಳಿಗೆ ಗಣ್ಯರ ಕರೆ
ದಲಿತ ಸಂಘರ್ಷ ಸಮಿತಿಯಿಂದ ಶಾಲಾ ಶಿಕ್ಷಕರಿಗೆ ಸನ್ಮಾನ

ಮಡಿಕೇರಿ, ಜು.10: ಎಸೆಸೆಲ್ಸಿ ಪರೀಕ್ಷೆಯಲ್ಲಿ ಮಕ್ಕಂದೂರು ಸರಕಾರಿ ಪ್ರೌಢ ಶಾಲೆ ಶೇ.94 ರಷ್ಟು ಫಲಿತಾಂಶ ಪಡೆಯಲು ಶ್ರಮಿಸಿದ ಶಾಲಾ ಶಿಕ್ಷಕರನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಡೆದ ಸನ್ಮಾನ ಸಮಾರಂಭವನ್ನು ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಎನ್.ಎಸ್.ನವೀನ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸರಕಾರಿ ಶಾಲೆಯಲ್ಲಿ ಕೂಡ ಶೇ.90ಕ್ಕಿಂತ ಹೆಚ್ಚು ಸಾಧನೆ ಮಾಡಿರುವುದು ಹೆಮ್ಮೆಯ ವಿಚಾರವೆಂದರು. ತಾನು ಕೂಡ ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು, ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಆದ್ದರಿಂದ ಪೋಷಕರಲ್ಲಿ ಸರಕಾರಿ ಶಾಲೆಯ ಬಗ್ಗೆ ಯಾವುದೇ ಕೀಳರಿಮೆ ಇರಬಾರದು ಎಂದರು. ವಿದ್ಯಾರ್ಥಿಗಳು ದುಶ್ಚಟ ಮುಕ್ತರಾಗಿ ವಿದ್ಯಾರ್ಥಿ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕೆಂದು ಡಾ. ನವೀನ್ ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಶಾಲಾ ಆಡಳಿತ ಮಂಡಳಿಯ ಸಲಹೆಗಾರ ನಾಪಂಡ ಕಾಳಪ್ಪ, ಕೆಲವರು ಕೇವಲ ಪ್ರಚಾರಕ್ಕಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಆದರೆ ದಲಿತ ಸಂಘರ್ಷ ಸಮಿತಿ ಕಳೆದ ಐದು ವರ್ಷಗಳಿಂದ ವಿದ್ಯಾರ್ಥಿಗಳ ಬದುಕನ್ನು ಹಸನು ಮಾಡುತ್ತಿರುವ ಶಿಕ್ಷಕರನ್ನು ಸನ್ಮಾನಿಸುತ್ತಾ ಬರುತ್ತಿರುವುದು ಶ್ಲಾಘನೀಯ. ಸರಕಾರಿ ಶಾಲೆಗಳ ಶಿಕ್ಷಕರ ಸೇವೆ ಅವಿಸ್ಮರಣೀಯವೆಂದರು. ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ್ ಮಾತನಾಡಿ, ಕಳೆದ ಐದು ವರ್ಷಗಳಿಂದ ದಲಿತ ಸಂಘರ್ಷ ಸಮಿತಿ ವತಿಯಿಂದ ಉತ್ತಮ ಸಾಧನೆ ಮಾಡಿದ ಸರಕಾರಿ ಶಾಲೆಗಳ ಶಿಕ್ಷಕರನ್ನು ಗೌರವಿಸುತ್ತಾ ಬರಲಾಗುತ್ತಿದ್ದು, ಮಕ್ಕಳ ಭವಿಷ್ಯವನ್ನು ರೂಪಿಸುವ ಗುರುಗಳನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ದಿವಾಕರ್ ಅಭಿಪ್ರಾಯಪಟ್ಟರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಮಾದಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಂದೂರು ಗ್ರಾಪಂ ಸದಸ್ಯ ಬಿ.ಎಂ.ರಮೇಶ್, ಶಾಲಾ ಸಮಿತಿಯ ಸದಸ್ಯ ಟಿ.ಎಂ.ಮೋಹನ್ ಕುಮಾರ್ ಪಾಲ್ಗೊಂಡಿದ್ದರು. ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಬಸವರಾಜು, ಪ್ರಭಾರ ಮುಖ್ಯ ಶಿಕ್ಷಕಿ ಸಿ.ಕೆ.ಉಷಾ, ಶಿಕ್ಷಕರಾದ ಚಂದ್ರಕಲಾ ಎಂ.ಎಸ್, ಹರಿಣಾಕ್ಷಿ ಪಿ, ಲೀಲಾವತಿ, ರಾಘವೇಂದ್ರ ಶೆಟ್ಟಿ, ಮಾಲಿನಿ ಕೆ.ಆರ್, ಗೀತಾ ಆರ್, ಪ್ರವೀಣ್‌ಕುಮಾರ್ ಬಿ. ಹಾಗೂ ಭಗವತ್ ನಿಧಿ ವಿಲಾಸ್‌ರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.







