ಗುಡ್ಡದ ತಪ್ಪಲಿನ ಮನೆಗಳು ಅನೈತಿಕ ಚಟುವಟಿಕೆಯ ತಾಣ: ಕ್ರಮಕೆ ಆಗ್ರಹ

ಕಾರವಾರ, ಜು.10: ನಗರದ ಹೈ ಚರ್ಚ್ ವಾಡಾದ ಬಳಿಯಿರುವ ಗುಡ್ಡದ ತಪ್ಪಲು ಪ್ರದೇಶ ಪುಂಡರ ಪಾಲಿಗೆ ಮೋಜಿನ ತಾಣವಾಗಿದೆ. ಅಕ್ಕಪಕ್ಕದ ಮನೆಯ ಬಳಿಯೇ ರಾತ್ರಿ ವೇಳೆ ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದ್ದು ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ನಗರದ ಮೂಲೆಯಲ್ಲಿರುವ ಹೈ ಚರ್ಚ್ ರಸ್ತೆ ಒಂದು ರೀತಿಯ ನಿರ್ಜನ ಪ್ರದೇಶ. ಈ ರಸ್ತೆಯ ಕೊನೆಗೆ ಗುಡ್ಡಳ್ಳಿಯ ಗುಡ್ಡದ ತಪ್ಪಲಿದೆ. ಸಂಜೆಯಾದ ಕೂಡಲೇ ಗುಡ್ಡದ ತಪ್ಪಲಿನ ಬಳಿ ಲಗ್ಗೆಯಿಡುವ ಕುಡುಕರ ತಂಡ ಅನೈತಿಕ ಚಟುವಟಿಕೆಗಳನ್ನು ನಡೆಸಲು ಈ ತಾಣವನ್ನು ಬಳಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಈ ಭಾಗದ ನಿವಾಸಿಗಳಿಗೆ ರಾತ್ರಿಯಾಯಿತೆಂದರೆ ಭಯದ ವಾತಾವರಣ ಮೂಡುತ್ತಿದೆ. ನಗರದಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿರುವ ಆತಂಕಕಾರಿ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದ್ದು, ಇಂತಹ ವ್ಯಸನಿಗಳು ಹೈ ಚರ್ಚ್ ವಾಡಾದಂತಹ ಜನವಸತಿ ಪ್ರದೇಶಕ್ಕೆ ಅನತಿ ದೂರದಲ್ಲಿರುವ ನಿರ್ಜನ ಗುಡ್ಡದ ತಪ್ಪಲನ್ನು ಅವಲಂಬಿಸಿದ್ದಾರೆಂದು ಹೇಳಲಾಗುತ್ತಿದೆ. ರಾತ್ರಿ ವೇಳೆ ಇಲ್ಲಿ ಜನ ಸಂಚಾರವಿಲ್ಲದಿರುವುದರಿಂದ ಪುಂಡರಿಗೆ ಈ ಪ್ರದೇಶ ಅನುಕೂಲವಾಗುತ್ತಿದೆ. ಮದ್ಯದ ಜೊತೆಗೆ, ಡ್ರಗ್ಸ್ ಸೇವನೆ ಹಾಗೂ ಇನ್ನಿತರ ಅನೈತಿಕ ಚಟುವಟಿಕೆಗಳನ್ನೂ ನಡೆಸುತ್ತಿರುವ ಗುಮಾನಿಯಿದ್ದು ಇದರಿಂದಾಗಿ ಸುತ್ತಮುತ್ತಲಿನ ನಿವಾಸಿಗಳು ಆತಂಕದಿಂದ ದಿನದೂಡುವಂತಾಗಿದೆ. ಅದರಲ್ಲೂ ಹೆಣ್ಣುಮಕ್ಕಳು, ಮಹಿಳೆಯರು ಮುಜುಗರದಿಂದಲೇ ಈ ಪ್ರದೇಶದಲ್ಲಿ ಬದುಕು ಸಾಗಿಸುವಂತಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡು ಜನವಸತಿ ಸ್ಥಳಗಳ ಬಳಿಯೇ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಿದೆ ಎಂಬುದು ಇಲ್ಲಿನ ನಿವಾಸಿಗಳ ಆಗ್ರಹವಾಗಿದೆ.
ಹೈಟೆನ್ಶನ್ ಟ್ರಾನ್ಸ್‌ಫಾರ್ಮರ್‌ನಿಂದ ಜನರಲ್ಲಿ ಆತಂಕ: ಹೈ ಚರ್ಚ್ ರಸ್ತೆಯ ತುದಿಗೆ ಹತ್ತಾರು ಮನೆಗಳಿವೆ. ಆದರೆ ಇಲ್ಲಿನ ಜನವಸತಿ ಪ್ರದೇಶದ ಬಳಿಯೇ ವಿದ್ಯುತ್ ಟ್ರಾನ್ಸ್ ಫಾರ್ಮರ್ ಇದ್ದು ಗುಡ್ಡದ ಬುಡದಿಂದ ಹಾದು ಹೋದ 33 ಕೆ.ವಿ. ಹೈಟೆನ್ಷನ್ ವಿದ್ಯುತ್ ತಂತಿ ಮನೆಗಳ ಮೇಲ್ಛಾವಣಿಗೆ ಸಮೀಪವೇ ತಾಗಿಕೊಂಡಂತೆ ಸಾಗಿದೆ. ಇದರಿಂದ ವಿದ್ಯುತ್ ಪ್ರವಹಿಸುವಿಕೆ ವೇಳೆ ಉಂಟಾಗುವ ನಿರಂತರ ಶಬ್ದ ಹಾಗೂ ಪದೇ ಪದೇ ತಂತಿಗಳ ಘರ್ಷಣೆಯಿಂದ ಉತ್ಪತ್ತಿಯಾಗುವ ಬೆಂಕಿ ಜನರ ನಿದ್ದೆಗೆಡಿಸಿದೆ. ಅಲ್ಲದೆ ಇಲ್ಲಿನ ನಿವಾಸಿಗಳ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟುಮಾಡಬಹುದಾದ ಸಾಧ್ಯತೆ ಇದೆ ಎನ್ನುತ್ತಾರೆ ಕೆಲ ಸ್ಥಳೀಯರು. ಈ ಕುರಿತು ಸಂಬಂಧಪಟ್ಟವರಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರಾದ ಫಿಲೋಮಿನಾ ಗುಡ್ಹಿನೋ, ಲೂಯಿಸ್ ಗುಡ್ಹಿನೋ, ಜಯಶ್ರೀ ಮಾಂಜ್ರೇಕರ್ ಅವರು. ಸ್ಮಶಾನದ ನಿರ್ವಹಣೆಗೆ ಸಿಬ್ಬಂದಿಯಿಲ್ಲ:
ಹೈಚರ್ಚ್ ರಸ್ತೆಯ ಬಳಿಯಿರುವ ಸ್ಮಶಾನ ಕೂಡ ಚರ್ಚೆಯ ಕೇಂದ್ರ ಬಿಂದುವಾಗಿ ಪರಿಣಮಿಸಿದೆ. ಇದೇ ಸ್ಮಶಾನದಲ್ಲಿ ಇತ್ತೀಚೆಗೆ ಶವವೊಂದನ್ನು ಅರೆಬರೆಯಾಗಿ ಸುಡಲಾಗಿದ್ದು ಈ ಬಗ್ಗೆ ಸಾರ್ವಜನಿಕರ ತೀವ್ರ ಆಕ್ಷೇಪ ಎದುರಾಗಿತ್ತು. ಸ್ಮಶಾನದ ನಿರ್ವಹಣೆಗೆ ಯಾವುದೇ ಸಿಬ್ಬಂದಿ ಇಲ್ಲದಿರುವುದು ಇಂತಹ ಘಟನೆಗಳಿಗೆ ಆಸ್ಪದ ನೀಡಿದಂತಾಗುತ್ತಿದೆ ಎಂಬುದು ಸ್ಥಳೀಯರ ಆರೋಪವಾಗಿದೆ. ಅಲ್ಲದೆ ಸ್ಮಶಾನದ ಹೊರಭಾಗದಲ್ಲಿರುವ ಕಟ್ಟಡವೂ ಕೂಡ ಕುಡುಕರ ಪಾಲಿಗೆ ಮೋಜಿನ ತಾಣವಾಗಿದ್ದು ಮದ್ಯದ ಬಾಟಲಿಗಳನ್ನು ಕೆಲವರು ಸ್ಮಶಾನಕ್ಕೆ ಸಾಗುವ ರಸ್ತೆಯಲ್ಲಿಯೇ ಒಡೆದು ಎಸೆಯುತ್ತಿದ್ದಾರೆ. ಇದರಿಂದ ಶವ ಸಂಸ್ಕಾರ ನಡೆಸಲು ಸಾಗುವವರಿಗೆ ಸಾಕಷ್ಟು ತೊಂದರೆಯಾಗಿದೆ.







