ತಾಂಜಾನಿಯಾಕ್ಕೆ ಭಾರತದಿಂದ 92 ಮಿ.ಡಾ.ಸಾಲ

ದಾರ್-ಎಸ್-ಸಲಾಂ,ಜು.10: ಸಂಪನ್ಮೂಲ ಸಮೃದ್ಧ ತಾಂಜಾನಿಯಾದೊಂದಿಗೆ ತನ್ನ ಸಂಬಂಧವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಬಯಸಿರುವ ಭಾರತವು ರವಿವಾರ ಅದರ ಅಭಿವೃಧ್ಧಿಯ ಅಗತ್ಯಗಳನ್ನು ಪೂರೈಸಲು ತನ್ನ ಸಂಪೂರ್ಣ ಬೆಂಬಲವನ್ನು ಘೋಷಿಸಿತು. ಇದೇ ವೇಳೆ ಜಲ ಸಂಪನ್ಮೂಲ ಕ್ಷೇತ್ರದಲ್ಲಿ ಸಾಲರೂಪದಲ್ಲಿ 92 ಮಿ.ಡಾ.ಆರ್ಥಿಕ ನೆರವು ಒದಗಿಸುವ ಒಪ್ಪಂದ ಸೇರಿದಂತೆ ಐದು ಒಪ್ಪಂದಗಳಿಗೆ ಸಹಿ ಹಾಕಿತು.
ತಾಂಜಾನಿಯಾದ ಅಭಿವೃದ್ಧಿ ಆದ್ಯತೆಗಳನ್ನು ಈಡೇರಿಸುವಲ್ಲಿ ಭಾರತವು ನಂಬಿಗಸ್ಥ ಪಾಲುದಾರನಾಗಿದೆ ಎಂದು ಬಣ್ಣಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ನಮ್ಮ ಒಟ್ಟಾರೆ ರಕ್ಷಣಾ ಮತ್ತು ಭದ್ರತಾ ಪಾಲುದಾರಿಕೆಯನ್ನು,ವಿಶೇಷವಾಗಿ ಕಡಲ ತೀರದ ಸುರಕ್ಷತೆಯನ್ನು ಇನ್ನಷ್ಟು ಬಲಗೊಳಿಸಲು ನಾನು ಮತ್ತು ಅಧ್ಯಕ್ಷ ಜಾನ್ ಪಾಂಬೆ ಮ್ಯಾಗುಫುಲಿ ಒಪ್ಪಿಕೊಂಡಿದ್ದೇವೆ ಎಂದು ತಿಳಿಸಿದರು.
ಮ್ಯಾಗುಫುಲಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಗಳ ಬಳಿಕ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ತಾಂಜಾನಿಯಾದೊಂದಿಗೆ ಭಾರತದ ಸಹಕಾರವು ಸದಾ ನಿಮ್ಮ ಅಗತ್ಯಗಳು ಮತ್ತು ಆದ್ಯತೆಗಳಿಗೆ ಅನುಗುಣವಾಗಿರುತ್ತದೆ ಎಂದರು.
ಉಭಯ ರಾಷ್ಟ್ರಗಳು ಸಹಿ ಹಾಕಿರುವ ಒಪ್ಪಂದದಂತೆ ಜಾಂಜಿಬಾರ್‌ನ ನೀರು ಪೂರೈಕೆ ವ್ಯವಸ್ಥೆಯ ಸುಧಾರಣೆ ಮತ್ತು ಪುನರ್ವಸತಿಗಾಗಿ ಭಾರತವು ಸಾಲರೂಪದಲ್ಲಿ 92 ಮಿ.ಡಾ.ಗಳ ಆರ್ಥಿಕ ನೆರವನ್ನು ಒದಗಿಸಲಿದೆ.
ಇಂದು ಮೂಡಿಬಂದ ಇತರ ಒಪ್ಪಂದಗಳಲ್ಲಿ ಜಲ ಸಂಪನ್ಮೂಲ ನಿರ್ವಹಣೆ ಮತ್ತು ಅಭಿವೃದ್ಧಿ, ಜಾಂಜಿಬಾರ್‌ನಲ್ಲಿ ವೃತ್ತಿಪರ ತರಬೇತಿ ಕೇಂದ್ರದ ಸ್ಥಾಪನೆ, ರಾಜತಾಂತ್ರಿಕ/ಅಧಿಕಾರಿ ಪಾಸ್‌ಪೋರ್ಟ್ ಹೊಂದಿರುವವರಿಗೆ ವೀಸಾ ಮನ್ನಾ ಕುರಿತ ಒಡಂಬಡಿಕೆಗಳು ಹಾಗೂ ಭಾರತೀಯ ಸಣ್ಣ ಕೈಗಾರಿಕೆಗಳ ನಿಗಮ ಮತ್ತು ತಾಂಜಾನಿಯಾ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಸಂಸ್ಥೆ ನಡುವೆ ಒಪ್ಪಂದ ಸೇರಿವೆ.
ತಾಂಜಾನಿಯಾದ 17 ನಗರಗಳಲ್ಲಿ ಹಲವಾರು ಜಲ ಯೋಜನೆಗಳ ಬಗ್ಗೆ ಉಭಯ ರಾಷ್ಟ್ರಗಳು ಮಾತುಕತೆ ನಡೆಸುತ್ತಿವೆ ಎಂದು ತಿಳಿಸಿದ ಮೋದಿ, ಇದಕ್ಕಾಗಿ ಹೆಚ್ಚುವರಿಯಾಗಿ 500 ಮಿ.ಡಾ.ಗಳ ರಿಯಾಯಿತಿ ಸಾಲ ನೀಡಿಕೆಯನ್ನು ಪರಿಶೀಲಿಸಲು ಭಾರತವು ಸಿದ್ಧವಿದೆ ಎಂದರು.
ದ್ವಿಪಕ್ಷೀಯ ಸಂಬಂಧದಲ್ಲಿ ಸಾರ್ವಜನಿಕ ಆರೋಗ್ಯ ರಕ್ಷಣೆಯು ಇನ್ನೊಂದು ಮಹತ್ವದ ಕ್ಷೇತ್ರವಾಗಿದೆ ಎಂದ ಅವರು, ಔಷಧಿಗಳು ಮತ್ತು ಉಪಕರಣಗಳ ಪೂರೈಕೆ ಸೇರಿದಂತೆ ತಾಂಜಾನಿಯಾ ಸರಕಾರದ ಆರೋಗ್ಯ ರಕ್ಷಣೆ ಕ್ಷೇತ್ರದ ಆದ್ಯತೆಗಳಿಗೆ ಸ್ಪಂದಿಸಲು ಭಾರತವು ಸಿದ್ಧವಿದೆ ಎಂದು ತಿಳಿಸಿದರು. ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ ಬುಗಾಂಡೊ ಮೆಡಿಕಲ್ ಸೆಂಟರ್‌ನಲ್ಲಿ ಭಾರತೀಯ ರೇಡಿಯೊ-ಥೆರಪಿ ಯಂತ್ರವನ್ನು ಸ್ಥಾಪಿಸಲಾಗುತ್ತಿರುವ ಬಗ್ಗೆ ತನಗೆ ತಿಳಿಸಲಾಗಿದೆ ಎಂದರು.
ಅಧ್ಯಕ್ಷ ಮ್ಯಾಗುಫುಲಿ ಜೊತೆ ಮಾತುಕತೆ ಸಂದರ್ಭ ದ್ವಿಪಕ್ಷೀಯ ಸಂಬಂಧದ ವಿಸ್ತೃತ ಶ್ರೇಣಿಯ ಕುರಿತು ವಿವರವಾಗಿ ಚರ್ಚಿಸಲಾಗಿದೆ ಎಂದು ಪ್ರಧಾನಿ ತಿಳಿಸಿದರು.
ಕೃಷಿ ಸಹಭಾಗಿತ್ವವನ್ನು ಇನ್ನಷ್ಟು ಹೆಚ್ಚಿಸಲು ಮತ್ತು ನೈಸರ್ಗಿಕ ಅನಿಲದ ಅಭಿವೃದ್ಧಿ ಮತ್ತು ಬಳಕೆಯ ನಿಟ್ಟಿನಲ್ಲಿ ಶ್ರಮಿಸಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ.







