ಮರ್ರೆಗೆ ಎರಡನೆ ವಿಂಬಲ್ಡನ್ ಕಿರೀಟ
ರಾವೊನಿಕ್‌ಗೆ ಆಘಾತ ನೀಡಿದ ಬ್ರಿಟನ್‌ನ ಟೆನಿಸ್ ಕಿಂಗ್

ಲಂಡನ್, ಜು.10: ವಿಂಬಲ್ಡನ್ ಪುರುಷರ ಟೆನಿಸ್‌ನ ಸಿಂಗಲ್ಸ್‌ನ ಫೈನಲ್‌ನಲ್ಲಿ ಇಂದು ಬ್ರಿಟನ್‌ನ ಆ್ಯಂಡಿ ಮರ್ರೆ ಜಯ ಗಳಿಸುವ ಮೂಲಕ ಎರಡನೆ ಬಾರಿ ವಿಂಬಲ್ಡನ್ ಕಿರೀಟ ಧರಿಸಿದ್ದಾರೆ.
ಕೆನೆಡಾದ ಮಿಲೋಸ್ ರಾವೊನಿಕ್ ವಿರುದ್ಧ 6-4, 7-6(3),7-6(2) ಅಂತರದಲ್ಲಿ ಜಯ ಗಳಿಸಿದ ಮರ್ರೆ ಅವರು ಮೂರನೆ ಗ್ರಾನ್ ಸ್ಲಾಮ್ ಪ್ರಶಸ್ತಿಯನ್ನು ಬಾಚಿಕೊಂಡರು.
29ರ ಹರೆಯದ ವಿಶ್ವದ ನಂ.2 ಆಟಗಾರ ಮರ್ರೆ ಅವರು ಈ ಮೊದಲು 2013ರಲ್ಲಿ ಮೊದಲ ಬಾರಿ ವಿಂಬಲ್ಡನ್ ಕಿರೀಟ ಧರಿಸಿದ್ದರು.
ವಿಂಬಲ್ಡನ್‌ನಲ್ಲಿ ಮೂರು ಬಾರಿ ಫೈನಲ್ ಪ್ರವೇಶಿಸಿದ್ದರು. 2012ರಲ್ಲಿ ರೋಜರ್ ಫೆಡರರ್ ವಿರುದ್ಧ ಸೋತು ವಿಂಬಲ್ಡನ್ ಪ್ರಶಸ್ತಿ ಗೆಲ್ಲುವ ಅವಕಾಶ ಕಳೆದುಕೊಂಡಿದ್ದರು.
2013ರಲ್ಲಿ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಅವರನ್ನು ಮಣಿಸಿ ತವರಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದ ಮರ್ರೆ ಇದೀಗ ರಾವೊನಿಕ್ ವಿರುದ್ಧ ಜಯ ಗಳಿಸಿ ಮೂರನೆ ಎರಡನೆ ಬಾರಿ ವಿಂಬಲ್ಡನ್ ಜಯಿಸಿದ್ದಾರೆ. ಮೊದಲ ಬಾರಿ ವಿಂಬಲ್ಡನ್ ಜಯಿಸುವ ನಿರೀಕ್ಷೆಯಲ್ಲಿದ್ದ ರಾವೊನಿಕ್‌ಗೆ ಆಘಾತ ನೀಡಿದ್ದಾರೆ.





