ಪೆರ್ಣಂಕಿಲ: ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಚಿರತೆ

ಉಡುಪಿ, ಜು.10: ಮೂಡುಬೆಳ್ಳೆ ಸಮೀಪದ ಪೆರ್ಣಂಕಿಲ ಪರಿಸರದಲ್ಲಿ ಕಳೆದ ಮೂರು ತಿಂಗಳುಗಳಿಂದ ನಾಯಿ, ದನಕರುಗಳನ್ನು ತಿಂದು ಜನರಲ್ಲಿ ಆಂತಕ ಸೃಷ್ಠಿಸಿದ್ದ ಒಂದು ಚಿರತೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಕೊನೆಗೂ ಯಶಸ್ವಿಯಾಗಿದೆ.
ಪೆರ್ಣಂಕಿಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ 3 ತಿಂಗಳಿನಿಂದ ತಿರುಗಾಡುತ್ತಿದ್ದ ಎರಡು ಚಿರತೆಗಳಿಗೆ ಹಲವು ಮನೆಗಳ ದನಕರು, ನಾಯಿಗಳು ಬಲಿಯಾಗಿದ್ದವು. ಇದರಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದ ಸ್ಥಳೀಯರು ಚಿರತೆಯನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಹಲವು ಬಾರಿ ದೂರು ನೀಡಿದ್ದರು.
ಅದರಂತೆ ಅರಣ್ಯ ಇಲಾಖೆ ಉಡುಪಿ ವಲಯದ ಸಿಬ್ಬಂದಿಗಳು ಒಂದು ವಾರಗಳ ಹಿಂದೆ ಪೆರ್ಣಂಕಿಲ ಮರಾಠಿ ಸಮಾಜ ಮಂದಿರದ ಬಳಿಯ ಶಕುಂತಲ ಎಂಬವರ ಮನೆಯ ಸಮೀಪ ಬೋನಿನೊಳಗೆ ನಾಯಿಯೊಂದನ್ನು ಕೂಡಿ ಹಾಕಿ ಚಿರತೆಯ ಸೆರೆಗೆ ಬಲೆ ಬೀಸಿದ್ದರು. ಅದೇ ರೀತಿ ಇನ್ನೊಂದು ಬೋನನ್ನು ಆತ್ರಾಡಿ ಸಮೀಪದ ಓಂತಿಬೆಟ್ಟು ಎಂಬಲ್ಲಿ ಇಡಲಾಗಿತ್ತು. ಜು.9ರ ಮಧ್ಯರಾತ್ರಿಯ ನಂತರ ಅಂದರೆ 12:30ರ ಸುಮಾರಿಗೆ ನಾಯಿಯ ಬೇಟೆ ಗಾಗಿ ಬೋನಿನೊಳಗೆ ನುಗ್ಗಿದ ಚಿರತೆ ಅದರೊಳಗೆ ಬಂಧಿಯಾಯಿತು.
ಈ ವಿಷಯ ತಿಳಿದ ಗ್ರಾಮಸ್ಥರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಚಿರತೆಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಸುಮಾರು 5 ವರ್ಷ ಪ್ರಾಯದ ಈ ಹೆಣ್ಣು ಚಿರತೆಗೆ ಹಿರಿಯಡ್ಕದಲ್ಲಿ ಚಿಕಿತ್ಸೆ ನೀಡಿ ಬಳಿಕ ಸಂಜೆ ವೇಳೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾಯಿತು.
ಈ ಕಾರ್ಯಾಚರಣೆಯನ್ನು ಉಡುಪಿ ಅರಣ್ಯ ವಲಯ ಅಧಿಕಾರಿ ಎಚ್.ರಮೇಶ್ ಮಾರ್ಗದರ್ಶನದಲ್ಲಿ ಹಿರಿಯಡಕ ಉಪವಲಯ ಅರಣ್ಯಾ ಧಿಕಾರಿ ಜಿ.ನರೇಶ್ ನೇತೃತ್ವದ ತಂಡ ನಡೆಸಿತ್ತು. ಸ್ಥಳಿಯ ಅರಣ್ಯ ರಕ್ಷಕ ಮನೋಹರ್ ಕೆ., ತಾಪಂ ಸದಸ್ಯ ಲಕ್ಷ್ಮೀನಾರಾಯಣ ಪ್ರಭು, ಕೊಡಿಬೆಟ್ಟು ಗ್ರಾಪಂ ಉಪಾಧ್ಯಕ್ಷ ಗಣೇಶ್ ಶೆಟ್ಟಿ ಸಹಕರಿಸಿದ್ದರು.
ಈ ಪರಿಸರದಲ್ಲಿ ಎರಡು ಚಿರತೆಗಳಿದ್ದು, ಇನ್ನೊಂದು ಚಿರತೆಯನ್ನೂ ಕೂಡ ಶೀಘ್ರವೇ ಹಿಡಿಯಬೇಕು ಎಂದು ಸ್ಥಳೀಯರು ಅರಣ್ಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.







