ಹೊಸ ಪಡಿತರ ಚೀಟಿ ಕೋರಿ 15 ಲಕ್ಷ ಅರ್ಜಿ ಸಲ್ಲಿಕೆ: ಸಚಿವ ಯು.ಟಿ ಖಾದರ್
ಶಿವಮೊಗ್ಗ, ಜು. 10: ರಾಜ್ಯದಲ್ಲಿ ಹೊಸದಾಗಿ ಸುಮಾರು 15 ಲಕ್ಷದಷ್ಟು ಜನರು ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಬಡತನ ರೇಖೆಗಿಂತ ಮೇಲಿನ (ಎಪಿಎಲ್) ಅರ್ಜಿಗಳಿಗಿಂತ ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಪಡಿತರ ಚೀಟಿ ಕೋರಿರುವ ಅರ್ಜಿಗಳ ಸಂಖ್ಯೆಯೇ ಹೆಚ್ಚಿದೆ ಎಂದು ರಾಜ್ಯ ಆಹಾರ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ರವಿವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಹೊಸದಾಗಿ ಸಲ್ಲಿಕೆಯಾಗಿರುವ ಪಡಿತರ ಚೀಟಿಗಳನ್ನು ಮುಂದಿನ 5 ತಿಂಗಳೊಳಗೆ ವಿಲೇವಾರಿಗೊಳಿಸಲಾಗುವುದು. ಈ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು. ಕಠಿಣ ಕ್ರಮ: ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಪಡಿತರ ಚೀಟಿ ಪಡೆಯುವವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರಗಿಸಲಾಗುವುದು. ಈ ಕುರಿತಂತೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಅನರ್ಹರು ಪಡೆದಿರುವ ಬಿಪಿಎಲ್ ಪಡಿತರ ಚೀಟಿ ಪತ್ತೆ ಹಚ್ಚುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿದರು. ಬಿಪಿಎಲ್ ಪಡಿತರ ಚೀಟಿ ಪಡೆದುಕೊಳ್ಳಲು ರೂಪಿಸಲಾಗಿರುವ ನಿಯಮಾವಳಿಗಳಲ್ಲಿ ಕೆಲವು ಅವೈಜ್ಞಾನಿಕವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ದ್ವಿಚಕ್ರ ವಾಹನ ಎಲ್ಲರಲ್ಲೂ ಇದೆ. ಅದು ಜೀವನದಲ್ಲಿ ಅಗತ್ಯದ ವಸ್ತವಾಗಿದೆ ಎಂದ ಅವರು, ಇಂತಹ ಕೆಲ ನಿಯಮಗಳು ಅವೈಜ್ಞಾನಿಕ ಎಂದು ಸಾರ್ವಜನಿಕ ವಲಯದಿಂದ ದೂರುಗಳು ಬಂದಿವೆ. ಇಂತಹ ನಿಯಮಾವಳಿಗಳ ಪರಿಷ್ಕರಣೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಇದೇ ಸಂದರ್ಭ ತಿಳಿಸಿದರು.
ಹೊಸ ವ್ಯವಸ್ಥೆ: ಕೆಲವರು ಎಪಿಎಲ್ ಪಡಿತರ ಚೀಟಿಯನ್ನು ಕೇವಲ ಗುರುತಿನ ಚೀಟಿಗಾಗಿ ಪಡೆದುಕೊಳ್ಳುತ್ತಿದ್ದಾರೆ. ಇಂತಹವರಿಗಾಗಿಯೇ ಅಂತರ್ಜಾಲದಲ್ಲಿಯೇ ಅರ್ಜಿ ಸಲ್ಲಿಸಿ ಪಡಿತರ ಚೀಟಿ ಪಡೆಯುವ ವಿನೂತನ ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ನೂತನ ತಂತ್ರಾಂಶ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ಇಷ್ಟರಲ್ಲಿಯೇ ಕಾರ್ಯಗತಗೊಳಿಸಲಾಗುವುದು ಎಂದರು. ಪಡಿತರ ವಿತರಣೆಯಲ್ಲಾಗುವ ತೊಂದರೆ ತಪ್ಪಿಸಲು, ನ್ಯಾಯಬೆಲೆ ಅಂಗಡಿ ಮಾಲಕರ ಸಮಸ್ಯೆ ಆಲಿಸಲು ಜಿಲ್ಲಾ ಮಟ್ಟದಲ್ಲಿ ಆಹಾರ ಅದಾಲತ್ ನಡೆಸಲಾಗುವುದು. ಪಡಿತರದಾರರಿಗೆ ಅನನುಕೂಲವಾಗದಂತೆ ಎಚ್ಚರವಹಿಸಲು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟಾರೆ 35, 309 ಅರ್ಜಿಗಳು ಪಡಿತರ ಚೀಟಿಗಾಗಿ ಬಂದಿವೆ. ಅವುಗಳನ್ನು 3 ತಿಂಗಳೊಳಗಾಗಿ ಇತ್ಯರ್ಥ ಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪಡಿತರ ದಾಸ್ತಾನು ಕೊಠಡಿಯನ್ನು ಸಮರ್ಪಕವಾಗಿರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಗೆ 5 ಲಕ್ಷ ರೂ. ಅನುದಾನ ನೀಡಲಾಗುತ್ತಿದೆ ಎಂದು ಸಚಿವ ಖಾದರ್ ಮಾಹಿತಿ ನೀಡಿದರು.
ತನಿಖೆ ನಡೆಯುತ್ತಿದೆ
: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿ ಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಆತ್ಮಹ ತ್ಯೆಗೆ ಸಂಬಂಧಿಸಿ ಸಿಐಡಿ ತಂಡದಿಂದ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬಂದ ಬಳಿಕವಷ್ಟೇ ಸತ್ಯಾಂಶ ತಿಳಿದು ಬರಲಿದೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ ಎಂದರು.







