ಕಾನೂನು ವ್ಯವಸ್ಥೆಯಲ್ಲಿ ತಾರತಮ್ಯ ಸಲ್ಲದು: ಸಚಿವ ಕಾಗೋಡು

ಶಿವಮೊಗ್ಗ, ಜು. 10: ಸರಕಾರಿ ಅಧಿಕಾರಿ, ರಾಜಕಾರಣಿ, ಶ್ರೀಮಂತ, ಬಡವ ಎಲ್ಲರಿಗೂ ದೇಶದ ಕಾನೂನು ಒಂದೇಯಾಗಿದ್ದು, ತಪ್ಪುಮಾಡುವವರನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಪೊಲೀಸ್ ಇಲಾ ಖೆಗೆ ಮಾರ್ಗದರ್ಶನ ನೀಡಿದ್ದಾರೆ.
ನಗರದ ಡಿ.ಎ.ಆರ್. ಮೈದಾನ ಸಭಾಂಗಣದಲ್ಲಿ ರವಿವಾರ ಜಿಲ್ಲಾ ಪೊಲೀಸ್ ಇಲಾಖೆ ಹೊರತಂದಿರುವ ‘ಭಾರತ ಸಂವಿಧಾನ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಆಡಳಿತ ವ್ಯವಸ್ಥೆ ಹಾಗೂ ಜನಸಾಮಾನ್ಯರಿಗಾಗಿ ಇರುವ ಕಾನೂನು ಮತ್ತು ಯೋಜನೆಗಳ ಮಾಹಿತಿ ಪುಸ್ತಕ ಬಿಡುಗಡೆ ಗೊಳಿಸಿ ಬಳಿಕ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಪೊಲೀಸ್ ಇಲಾಖೆ ಎಲ್ಲಾ ಇಲಾಖೆಗ ಳಿಗಿಂತ ಅತ್ಯಂತ ಮಹತ್ತರವಾದ ಇಲಾಖೆ. ಸಮಾಜದ ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಪೊಲೀಸರು ಉತ್ತಮ ರೀತಿಯಲ್ಲಿ ಕೆಲಸ ಮಾಡಬೇಕು. ಜನಸಾಮಾನ್ಯರ ದುಃಖ-ದುಮ್ಮಾನಗಳಿಗೆ ಸ್ಪಂದಿಸಬೇಕು ಎಂದು ಸಲಹೆ ನೀಡಿದರು. ಶಿಸ್ತು ಮೂಡಿಸಬೇಕು: ಮುಂದುವರಿದ ದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಶಿಸ್ತಿನ ಕೊರತೆ ಎದ್ದು ಕಾಣುತ್ತಿದೆ. ನಮ್ಮಲ್ಲಿ ಇನ್ನೂ ಜಾಗೃತಿ, ಅರಿವಿನ ಕೊರತೆಯಿಂದಾಗಿ ನಾಗರಿಕ ಸಂಸ್ಕೃತಿ ಬೆಳೆದಿಲ್ಲ. ಶ್ರಮದ ಪ್ರಾಮುಖ್ಯತೆ ಅರ್ಥವಾಗುತ್ತಿಲ್ಲ. ಇದರಿಂದ ಸಾರ್ವಜನಿಕ ಸ್ವಾಮ್ಯದ ಕಾರ್ಖಾನೆಗಳು ನಷ್ಟದ ಹಾದಿ ಹಿಡಿಯು ವಂತಾಗಿದೆ. ಇದಕ್ಕೆ ಭದ್ರಾವತಿ ಎಂಪಿಎಂ ಕಾರ್ಖಾನೆ ಉತ್ತಮ ನಿದರ್ಶನ ಎಂದು ವಿಷಾದ ವ್ಯಕ್ತಪಡಿಸಿದರು. ಕಾನೂನು ವ್ಯವಸ್ಥೆಯ ಬಗ್ಗೆ ಪ್ರತಿ ಗ್ರಾಮಗಳಲ್ಲಿಯೂ ಅರಿವು ಮೂಡಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಪುಸ್ತಕ ಮುದ್ರಿಸಿ ಮಾಹಿತಿ ನೀಡಲು ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣವರ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಆಡಳಿತ ವ್ಯವಸ್ಥೆಯ ಮಾಹಿತಿ ನೀಡುವುದರ ಜೊತೆಗೆ ಸಾರ್ವಜನಿಕರಿಗೆ ಕಾನೂನು ಮಾಹಿತಿಯನ್ನು ಈ ಪುಸ್ತಕದಲ್ಲಿ ನೀಡಲಾಗಿದೆ ಎಂದರು.
ಪ್ರಮುಖ ವೆಬ್‌ಸೈಟ್‌ಗಳ ವಿಳಾಸ, ಸರಕಾರಿ ಕಚೇರಿಗಳ ದೂರವಾಣಿ ಸಂಖ್ಯೆಗಳನ್ನು ಈ ಪುಸ್ತಕದಲ್ಲಿ ಪ್ರಕಟಿಸಲಾಗಿದೆ. ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲಿಯೂ ಈ ಪುಸ್ತಕ ವಿತರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಸಮಾರಂಭದಲ್ಲಿ ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ, ಉಪ ವಿಭಾಗಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನ್ಸೆಂಟ್ ಶಾಂತಕುಮಾರ್ ಉಪಸ್ಥಿತರಿದ್ದರು.







