ನಾಸ್ತಿಕವಾದ ವಿರೋಧಿಸುವಾಗ ದ್ವೈತಾದ್ವೈತದಲ್ಲಿ ಭೇದವಿಲ್ಲ: ಪೇಜಾವರ ಶ್ರೀ

ಉಡುಪಿ, ಜು.10: ಶಂಕರ ಮತ್ತು ಮಧ್ವ ತತ್ವಾನುಯಾಯಿಗಳಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ ದೇಶದಲ್ಲಿರುವ ನಾಸ್ತಿಕವಾದವನ್ನು ವಿರೋಧಿಸುವಲ್ಲಿ ದ್ವೈತ-ಅದ್ವೈತವೆಂಬ ಭೇದ ಇರುವುದಿಲ್ಲ. ಆ ಸಂದರ್ಭ ದಲ್ಲಿ ನಾವೆಲ್ಲ ಒಂದಾಗಿರುತ್ತೇವೆ. ಇದರಿಂದ ಧಾರ್ಮಿಕ ಸಮಾಜ ಬಲಿಷ್ಟ ವಾಗಲು ಸಾಧ್ಯ ಎಂದು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠಕ್ಕೆ ಇಂದು ಭೇಟಿ ನೀಡಿದ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಸ್ವಾಮೀಜಿಯವರನ್ನು ಸ್ವಾಗತಿಸಿ, ಶ್ರೀ ಕೃಷ್ಣ-ಮುಖ್ಯ ಪ್ರಾಣರ ದರ್ಶನ ಮಾಡಿಸಿದ ಬಳಿಕ ಚಂದ್ರಶಾಲೆಯಲ್ಲಿ ಮಾಲಿಕೆ ಮಂಗ ಳಾರತಿ ಸಹಿತ ಗಂಧಾದ್ಯುಪಚಾರಗಳನ್ನು ಸಲ್ಲಿಸಿ ಬಳಿಕ ರಾಜಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀವರ್ಚನ ನೀಡಿದರು.
ಶಂಕರ ಮಠಾಧೀಶರಾದ ಎಡನೀರು ಶ್ರೀಗಳ ಆಗಮನದಿಂದ ದ್ವೈತ- ಅದ್ವೈತ ಸಮಾಗಮವಾಗಿದೆ. ತಾತ್ವಿಕ ವಿಚಾರ ಭಿನ್ನತೆಗಳು ನಮ್ಮ ಬಾಂಧವ್ಯಕ್ಕೆ ಎಂದೂ ಭಂಗ ತಂದಿಲ್ಲ. ಉಭಯ ಮಠಗಳು ಅನ್ಯೋನ್ಯತೆ ಹೀಗೆ ಮುಂದುವರಿಯಲಿದೆ ಎಂದು ಪೇಜಾವರ ಶ್ರೀ ತಿಳಿಸಿದರು. ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಸ್ವಾಮೀಜಿ, ಪೇಜಾ ವರ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿದರು. ಮಠದ ದಿವಾನ ಎಂ.ರಘುರಾಮಾಚಾರ್ಯ, ಚಿತ್ರಾಪುರ ಗೋಪಾಲಕೃಷ್ಣಾಚಾರ್ಯ, ರಾಮಚಂದ್ರ ಭಟ್ ಉಪಸ್ಥಿತರಿದ್ದರು. ವಾಸು ದೇವ ಭಟ್ ಕಾರ್ಯಕ್ರಮ ನಿರೂಪಿಸಿದರು.







