ಪರಿಸರ ಸಂರಕ್ಷಣೆ ಫ್ಯಾಶನ್ ಆಗಬಾರದು: ಉಮೇಶ್
ವನಮಹೋತ್ಸವ ಕಾರ್ಯಕ್ರಮ

ಸಾಗರ,ಜು.10: ಪರಿಸರ ಸಂರಕ್ಷಣೆ ಫ್ಯಾಶನ್ ಆಗಬಾರದು. ವನಮಹೋತ್ಸವ ಹೆಸರಿನಲ್ಲಿ ಗಿಡನೆಟ್ಟು, ಪತ್ರಿಕೆಗಳಲ್ಲಿ ಫೋಟೊ ಬಂದ ತಕ್ಷಣ ನಮ್ಮ ಜವಾಬ್ದಾರಿ ಮುಗಿಯಿತು ಎನ್ನುವ ಮನಸ್ಥಿತಿ ಹೆಚ್ಚುತ್ತಿರುವುದು ದುರದೃಷ್ಟಕರ ಎಂದು ಪ್ರೊ. ಉಮೇಶ್ ಪಿ. ಹೇಳಿದ್ದಾರೆ. ಇಲ್ಲಿನ ಇಂದಿರಾಗಾಂಧಿ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರ ಎನ್ನೆಸ್ಸೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವನಮಹೋತ್ಸವ ಕಾರ್ಯಕ್ರಮವನ್ನು ಅವರು ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡುತ್ತಿದ್ದರು. ಮನುಷ್ಯನ ಬದುಕಿಗೆ ಅಗತ್ಯವಾದ ಎಲ್ಲ ವಸ್ತುಗಳನ್ನು ನೀಡುವ, ಆರೋಗ್ಯಪೂರ್ಣ ವಾತಾವರಣ ಕಲ್ಪಿಸುವ ಪರಿಸರದ ಬಗ್ಗೆ ನಿಷ್ಕಾಳಜಿ ಸರಿಯಲ್ಲ. ವನಮಹೋತ್ಸವ ಸಂದರ್ಭದಲ್ಲಿ ನೆಟ್ಟ ಗಿಡಗಳನ್ನು ಪೋಷಿಸುವ ಹೊಣೆಗಾರಿಕೆ ಎಲ್ಲರ ಮೇಲೂ ಇದೆ. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ನೆಟ್ಟ ಗಿಡಗಳು ಉತ್ತಮವಾಗಿ ಬೆಳೆಯುವಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು.
ಅಳಿದುಳಿದ ಪರಿಸರವನ್ನು ರಕ್ಷಿಸಿಕೊಳ್ಳುವ ಜೊತೆಗೆ ಕಾಡು ಬೆಳೆಸುವ ಬಗ್ಗೆ ಸಾಮೂಹಿಕ ಜಾಗೃತಿ ಅಗತ್ಯ. ಪರಿಸರ ನಾಶದಿಂದ ನಾವು ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದೇವೆ ಎಂದು ತಿಳಿಸಿದರು.
ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ. ಎಸ್.ಉಮಾಪತಿ, ಪ್ರೊ.ಮಹಾಬಲೇಶ್ವರ ಕೆ.ಎನ್., ಪ್ರಾಧ್ಯಾಪಕರಾದ ಡಾ. ಕೆ.ಪ್ರಭಾಕರ ರಾವ್, ಪ್ರೊ. ಎ.ಗಣೇಶಭಟ್, ಪ್ರೊ. ಸಿ. ಎನ್.ಹರ್ಷವರ್ಧನ್, ನಾಗರಾಜ್ ಇ.ಮತ್ತಿತರರು ಉಪಸ್ಥಿತರಿದ್ದರು.





