ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ ಮೈಸೂರು ಡಿಸಿ ಸಿ.ಶಿಖಾ

ಮಡಿಕೇರಿ,ಜು.10: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಮಾಪ್ತ ಕೆ. ಮರೀಗೌಡ ಅವರ ವಿರುದ್ಧ ದೂರು ನೀಡಿ ಕಾನೂನು ಸಮರಕ್ಕೆ ಸಜ್ಜಾಗಿರುವ ಮೈಸೂರು ಜಿಲ್ಲಾಧಿಕಾರಿ ಸಿ. ಶಿಖಾ ಅವರು, ತಮ್ಮೆಲ್ಲ ಒತ್ತಡಗಳ ನಿವಾರಣೆಗೆಂಬಂತೆ ರವಿವಾರ ತಮ್ಮ ಪತಿಯೊಂದಿಗೆ ಕಾವೇರಿ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ತೆರಳಿದ್ದಾರೆ.
ಮರೀಗೌಡ ಅವರ ವಿರುದ್ಧ ಶಿಖಾ ಅವರು ದೂರು ನೀಡಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಿಖಾ ಮತ್ತು ಅವರ ಪತಿ ಮಂಡ್ಯ ಜಿಲ್ಲಾಧಿಕಾರಿ ಅಜಯ್‌ನಾಗಭೂಷಣ್ ಅವರೊಂದಿಗೆ ಸಂಧಾನ ನಡೆಸಿದ್ದರು. ಆದರೆ, ಅದು ಫಲಪ್ರದವಾಗಲಿಲ್ಲ ಎನ್ನಲಾಗಿದೆ.
ತಮ್ಮ ಮೇಲಿನ ಈ ಎಲ್ಲ ಒತ್ತಡಗಳ ನಡುವೆ ಶಿಖಾ ಅವರು ಪತಿ ನಾಗಭೂಷಣ್ ಅವರೊಂದಿಗೆ ಬೆಳಗ್ಗೆ ಭಾಗಮಂಡಲಕ್ಕೆ ಆಗಮಿಸಿ ಕಾವೇರಿ ತ್ರಿವೇಣಿ ಸಂಗಮಕ್ಕೆ ಬಾಗಿನ ಅರ್ಪಿಸಿದ್ದಲ್ಲದೆ, ತಲಕಾವೇರಿಗೆ ತೆರಳಿ ಕುಂಕುಮಾರ್ಚನೆಯೊಂದಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಈ ಸಂದರ್ಭ ಅವರೊಂದಿಗೆ ಖ್ಯಾತ ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ, ಮಡಿಕೇರಿಯ ವಿಜಯ ವಿನಾಯಕ ದೇವಾಲಯದ ಮುಖ್ಯ ಅರ್ಚಕ ಕೃಷ್ಣಭಟ್, ಮಡಿಕೆೇರಿ ಶ್ರೀ ಓಂಕಾರೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ ಉಪಸ್ಥಿತರಿದ್ದರು.







