ಅಶೋಕನ ಅಹಿಂಸಾವಾದ ಭಾರತವನ್ನು ದುರ್ಬಲಗೊಳಿಸಿತ್ತೇ?

ಕೋಮುವಾದಿ ರಾಜಕಾರಣಿಗಳು ಭೂತಕಾಲವನ್ನು ತಮ್ಮ ವರ್ತಮಾನಕಾಲದ ರಾಜಕೀಯ ಕಾರ್ಯಸೂಚಿಗಾಗಿ ಬಳಸಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಒಂದೆಡೆ ಮಧ್ಯಯುಗದ ಇತಿಹಾಸವನ್ನು ಬಳಸಿಕೊಂಡು, ಮುಸ್ಲಿಮ್ ರಾಜರನ್ನು ಆಕ್ರಮಣಕಾರಿಗಳೆಂದೂ, ಅವರಿಂದಾಗಿ ಹಿಂದೂ ಸಮಾಜ ಅಪಾರ ಯಾತನೆ ಅನುಭವಿಸಿತೆಂಬಂತೆ ಬಿಂಬಿಸಲಾಗುತ್ತಿದೆ. ಇನ್ನೊಂದೆಡೆ ಬ್ರಾಹ್ಮಣ್ಯವಾದದ ಎದುರು ಬೌದ್ಧಧರ್ಮವನ್ನು ಮೂಲೆಗುಂಪು ಮಾಡಲು ಪುರಾತನ ಇತಿಹಾಸವನ್ನು ತಿರುಚುವ ಪ್ರಯತ್ನಗಳು ನಡೆಯುತ್ತಿವೆ.
ಚಕ್ರವರ್ತಿ ಅಶೋಕನನ್ನು ಕೋಮುವಾದಿಶಕ್ತಿಗಳು ಬಳಸಿಕೊಳ್ಳುತ್ತಿರುವ ರೀತಿಯು ಇದನ್ನು ಪುಷ್ಟೀಕರಿಸುತ್ತದೆ.ಅಶೋಕ ಹಾಗೂ ಅಕ್ಬರ್ ಭಾರತದ ಇಬ್ಬರು ಮಹಾನ್ ಚಕ್ರವರ್ತಿಗಳೆಂದು ನೊಬೆಲ್‌ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮಾರ್ತ್ಯಸೇನ್ ಪರಿಗಣಿಸಿದ್ದಾರೆ. ಆರೆಸ್ಸೆಸ್ ಬಳಗಕ್ಕೆ ಸೇರಿದ ‘ರಾಜಸ್ಥಾನ ವನವಾಸ್ ಕಲ್ಯಾಣ್ ಪರಿಷತ್’ ಪ್ರಕಟಿಸಿದ ಪುಸ್ತಕವೊಂದು, ಬೌದ್ಧ ಧರ್ಮಕ್ಕೆ ಅಶೋಕನ ಮತಾಂತರ ಹಾಗೂ ಅಹಿಂಸಾವಾದಕ್ಕೆ ಆತ ನೀಡಿದ ಪ್ರೋತ್ಸಾಹದಿಂದಾಗಿ ಭಾರತದ ಗಡಿಗಳು ವಿದೇಶಿ ಅಕ್ರಮಣಕಾರರಿಗೆ ತೆರೆದುಕೊಂಡಿತೆಂದು ಹೇಳಿಕೊಂಡಿದೆ. ಅಶೋಕನ ನಾಯಕತ್ವದಡಿಯಲ್ಲಿ ಬೌದ್ಧಧರ್ಮದ ಅನುಯಾಯಿಗಳು ದೇಶದ್ರೋಹಿಗಳಾಗಿ ವರ್ತಿಸಿದರು. ವೈದಿಕ ಧರ್ಮವನ್ನು ನಾಶಪಡಿಸಿ, ಬೌದ್ಧಧರ್ಮವನ್ನು ಪುನರ್‌ಸ್ಥಾಪಿಸುವ ಉದ್ದೇಶದಿಂದ ಅವರು ಗ್ರೀಕ್‌ಆಕ್ರಮಣಕಾರರಿಗೆ ನೆರವಾದರೆಂದೂ ಅದು ಹೇಳಿಕೊಂಡಿದೆ. ಇಲ್ಲಿ ಬ್ರಾಹ್ಮಣ್ಯವಾದವನ್ನು ವೈದಿಕ ಧರ್ಮವೆಂಬುದಾಗಿ ಉಲ್ಲೇಖಿಸಲಾಗಿದೆ.
ಕುತೂಹಲಕರವೆಂದರೆ, ಈ ಲೇಖನವು ಅಶೋಕನು ಬೌದ್ಧಧರ್ಮವನ್ನು ಆಲಂಗಿಸುವ ವರೆಗೂ ಆತನೊಬ್ಬ ಶ್ರೇಷ್ಠ ಆಡಳಿತಗಾರನೆಂದು ಬಣ್ಣಿಸಿದೆ. ಆದರೆ ಬಹುತೇಕ ಚಿಂತಕರು ಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿದ ಬಳಿಕ ಆತನ ನೀತಿಗಳು ಮಾನವೀಯ ವೌಲ್ಯಗಳಿಂದ ಕೂಡಿದ್ದವೆಂದು ಅಭಿಪ್ರಾಯಿಸಿದ್ದಾರೆ. ಆದರೆ ಬ್ರಾಹ್ಮಣ್ಯವಾದಿ ಹಿಂದೂಧರ್ಮದ ರಾಜಕೀಯ ಆವಶ್ಯಕತೆಗನುಗುಣವಾಗಿ ಇಂತಹ ವಾಸ್ತವಗಳನ್ನು ತಿರುಚಲಾಗಿದೆ. ಭಾರತವು ಶತಶತಮಾನಗಳಿಂದ ಒಂದು ರಾಷ್ಟ್ರವಾಗಿತ್ತೆಂಬ ಅಭಿಪ್ರಾಯವು ಕೂಡಾ ಕಪೋಲಕಲ್ಪಿತವಾದುದು. ಭಾರತವು ಒಂದು ರಾಷ್ಟ್ರವೆಂಬ ಭಾವನೆ ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿಯೇ ಉದ್ಭವಿಸಿತೆಂಬುದು ಎಲ್ಲರಿಗೂ ಗೊತ್ತು. ಅದಕ್ಕೂ ಮೊದಲು ರಾಜ್ಯಗಳು, ಸಾಮ್ರಾಜ್ಯಗಳು ಮಾತ್ರವೇ ಅಸ್ತಿತ್ವದಲ್ಲಿದ್ದವು. ಈ ರಾಜ್ಯಗಳ ಗಡಿಗಳು ಸ್ಥಿರವಾಗಿರುವುದಿಲ್ಲ. ರಾಜರ ಶೌರ್ಯ ಮತ್ತಿತರ ಅಂಶಗಳನ್ನು ಅವಲಂಬಿಸಿ, ಅವರ ಆಳ್ವಿಕೆಯ ಪ್ರದೇಶಗಳು ವಿಸ್ತರಿಸಲ್ಪಡುತ್ತವೆ ಇಲ್ಲವೇ ಕುಗ್ಗಲ್ಪಡುತ್ತವೆ ಅಥವಾ ಕೆಲವು ಕಾಲಗಳಲ್ಲಿ ಮರೆಯಾಗಿ ಹೋಗುತ್ತವೆ. ಅಶೋಕನ ಆಳ್ವಿಕೆಗೆ ಮೊದಲೇ ಅಲೆಕ್ಸಾಂಡರ್ ಭಾರತದ ಮೇಲೆ ದಾಳಿ ನಡೆಸಿದ್ದ. ಇತರ ಪ್ರಾಂತಗಳ ರಾಜರ, ಬೇರೆ ರಾಜ್ಯಗಳ ಮೇಲೆ ಆಕ್ರಮಣ ನಡೆಸುವುದು ಆವರೆಗೆ ಗೊತ್ತಿರದ ವಿಷಯವೇನಲ್ಲ. ವೌರ್ಯ ಸಾಮ್ರಾಜ್ಯವು, ಭಾರತ ಉಪಖಂಡವು ಕಂಡಿರುವ ಅತೀ ದೊಡ್ಡ ಚಕ್ರಾಧಿಪತ್ಯವಾಗಿದೆ.
ಭಾರತ ಉಪಖಂಡದ ವಿಸ್ತಾರವಾದ ಭೂಭಾಗಗಳನ್ನು ಹಲವು ರಾಜವಂಶಗಳು ಆಳಿವೆ. ಆದರೆ ಈಗಿನ ಭಾರತದಷ್ಟು ವಿಸ್ತಾರವಾದ ಭೂಭಾಗವನ್ನು ಈ ಹಿಂದೆ ಯಾವುದೇ ಒಬ್ಬ ರಾಜನಿಗೆ ಆಳಲು ಸಾಧ್ಯವಾಗಿಲ್ಲ. ಹಾಗಾದರೆ ಅಶೋಕನನ್ನೇ ಯಾಕೆ ಇಂದು ನಿರ್ದಿಷ್ಟವಾಗಿ ಗುರಿಯಿಡಲಾಗುತ್ತಿದೆ? ವೌರ್ಯ ವಂಶದಲ್ಲಿ ಅಶೋಕನು ಬಿಂದುಸಾರನ ಉತ್ತರಾಧಿಕಾರಿಯಾಗಿದ್ದ. ಚಂದ್ರಗುಪ್ತ ವೌರ್ಯ ಈ ಸಾಮ್ರಾಜ್ಯದ ಸ್ಥಾಪಕನಾಗಿದ್ದ. ಅಶೋಕ ನೆರೆಯ ಕಳಿಂಗ ಸಾಮ್ರಾಜ್ಯವನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ ದಂಡೆತ್ತಿ ಹೋಗುತ್ತಾನೆ. ಎರಡೂ ಸಾಮ್ರಾಜ್ಯಗಳ ಸೇನೆಯ ನಡುವೆ ಘನಘೋರವಾದ ಯುದ್ಧ ನಡೆಯುತ್ತದೆ. ಆಗ ನಡೆದ ರಕ್ತಪಾತವನ್ನು ಕಂಡು ಅಶೋಕ ವಿಚಲಿತನಾಗುತ್ತಾನೆ. ಪಶ್ಚಾತ್ತಾಪದಿಂದ ಬೇಯುತ್ತಾನೆ. ಆತ ಬೌದ್ಧಧರ್ಮವನ್ನು ಸ್ವೀಕರಿಸಲು ನಿರ್ಧರಿಸುತ್ತಾನೆ. ಹೀಗೆ ಆಕ್ರಮಣಕಾರಿ ಹಾಗೂ ಸಂವೇದನಾರಹಿತ ರಾಜನೊಬ್ಬ, ಬೌದ್ಧಧರ್ಮವನ್ನು ಆಲಿಂಗಿಸುವ ಮೂಲಕ ಮಾನವೀಯ ವ್ಯಕ್ತಿಯಾಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಜನರ ಕಲ್ಯಾಣಕ್ಕಾಗಿ ಅಶೋಕ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಾನೆ. ಬ್ರಾಹ್ಮಣರ ದುಬಾರಿ ವೆಚ್ಚದ ಧಾರ್ಮಿಕ ವಿಧಿವಿಧಾನಗಳನ್ನು ವಿರೋಧಿಸುತ್ತಾನೆ. ತನ್ನ ಸಾಮ್ರಾಜ್ಯದ ಜನತೆಯ ಅಹವಾಲುಗಳನ್ನು ಆಲಿಸಲು ಅರಮನೆಯ ದ್ವಾರಗಳನ್ನು ತೆರೆದಿಡುತ್ತಾನೆ. ಬೌದ್ಧಧರ್ಮದ ಬೋಧನೆಗಳಿಂದ ಪ್ರಭಾವಿತನಾಗಿ ಆತ ದಯಾಳು ಹಾಗೂ ಪ್ರಜಾಪಾಲಕ ಸಾಮ್ರಾಜ್ಯದ ನಿರ್ಮಾಣದೆಡೆಗೆ ಹೆಜ್ಜೆಯಿಡುತ್ತಾನೆ.
ತನ್ನ ಸಾಮ್ರಾಜ್ಯದೆಲ್ಲೆಡೆ ಅಶೋಕ ಸ್ಥಾಪಿಸಿದ್ದ ಶಿಲಾಸ್ತಂಭಗಳು ಹಾಗೂ ಶಾಸನಗಳಲ್ಲಿ ಕೆತ್ತಲಾದ ಸಂದೇಶಗಳು,ಸಂಹಿತೆಗಳಿಂದ ಆತನ ಚಿಂತನೆಗಳು ಹಾಗೂ ನೀತಿಗಳ ಸ್ಥೂಲ ಚಿತ್ರಣವನ್ನು ನಮ್ಮ ಮುಂದಿಡುತ್ತವೆ. ಕ್ರಿ.ಪೂ.3ನೆ ಶತಮಾನದ ಅವಧಿಯಲ್ಲಿ ಅತ್ಯಂತ ದಯಾಪರ ಹಾಗೂ ಪ್ರಗತಿಪರ ವಿಚಾರಧಾರೆಗಳನ್ನು ಪ್ರಚಾರ ಮಾಡಿರುವುದು ಈ ಶಿಲಾಶಾಸನಗಳಿಂದ ತಿಳಿದುಬರುತ್ತವೆ. ಆತ ಬೌದ್ಧಧರ್ಮವನ್ನು ಅಪ್ಪಿಕೊಂಡರೂ, ವೈವಿಧ್ಯತೆಯ ಸಮಾಜ ವ್ಯವಸ್ಥೆಯನ್ನು ಆತ ಪ್ರತಿಪಾದಿಸುತ್ತಾನೆ. ಬೌದ್ಧ ಧರ್ಮವನ್ನು ಆತ ವಿಶ್ವಧರ್ಮವನ್ನಾಗಿ ಪ್ರಚಾರಪಡಿಸಿದ.ಆದರೆ ಎಂದೂ ಆತ ತನ್ನ ಚಿಂತನೆಗಳನ್ನು ಬಲಪ್ರಯೋಗದ ಮೂಲಕ ಇತರರ ಮೇಲೆ ಹೇರಲಿಲ್ಲ. ಅದರ ಬದಲಾಗಿ ನೀತಿಬೋಧೆ ಹಾಗೂ ಮನವೊಲಿಕೆಯ ಮೂಲಕ ಅವುಗಳನ್ನು ಜನ ಅನುಸರಿಸುವಂತೆ ಮಾಡಿದ. ಆತನ ಸಂದೇಶವು, ಯಾತನೆಯನ್ನು ಕಡಿಮೆಗೊಳಿಸುವ ಹಾಗೂ ಶಾಂತಿಯನ್ನು ಉತ್ತೇಜಿಸುವ ಉದ್ದೇಶದಿಂದ ಕೂಡಿತ್ತು. ಬೌದ್ಧಧರ್ಮವನ್ನು ಸ್ವೀಕರಿಸುವ ತನಕ ಆತ ಮಹಾನ್ ರಾಜನೆನಿಸಿಕೊಂಡಿದ್ದನೆಂಬ ಲೇಖನದ ವಾದವು ಎಷ್ಟೊಂದು ಪೊಳ್ಳುತನದಿಂದ ಕೂಡಿದೆ ಎನ್ನುವುದನ್ನು ಇದು ಸಾಬೀತುಪಡಿಸುತ್ತದೆ.
ಭಾರತೀಯ ಉಪಖಂಡದ ಇತಿಹಾಸದಲ್ಲಿಯೇ ಅಶೋಕನ ಚಕ್ರಾಧಿಪತ್ಯವು ಅತ್ಯಂತ ವಿಶಾಲವಾದುದಾಗಿತ್ತು. ಆತ ಪ್ರತಿಪಾದಿಸಿದ ದಮ್ಮವು ರಾಜರಿಗೆ ಹಾಗೂ ಪ್ರಜೆಗಳಿಗೆ ನೀತಿಸಂಹಿತೆಯಾಗಿತ್ತು. ಜನತೆ ನೈತಿಕ ದಾರಿಯಲ್ಲಿ ಸಾಗುವಂತೆ ಅದು ಜನರನ್ನು ಪ್ರೇರೇಪಿಸುತ್ತಿತ್ತು. ಆತನ 12ನೆ ಶಿಲಾಶಾಸನವು, ಈಗಿನ ಕಾಲಕ್ಕೂ ಪ್ರಸ್ತುತವಾಗಿದೆ. ಈ ಶಿಲಾಶಾಸನದಲ್ಲಿ ಆತ ಸಾರ್ವಜನಿಕ ಬದುಕಿನಲ್ಲಿ ಧಾರ್ಮಿಕ ಸಹಿಷ್ಣುತೆ ಹಾಗೂ ಸೌಜನ್ಯತೆ ಯನ್ನು ಸಾರಿದ್ದಾನೆ.‘‘ಮಾತಿನಲ್ಲಿ ಮಿತಿಯಿರಲಿ’’, ‘‘ ಸದುದ್ದೇಶರಹಿತವಾಗಿ ತನ್ನ ಧರ್ಮವನ್ನು ಪ್ರಶಂಸಿಸುವುದು ಅಥವಾ ಇತರರ ಧರ್ಮವನ್ನು ನಿಂದಿಸುವುದು ಸರಿಯಲ್ಲ. ಧರ್ಮಗಳ ನಡುವೆ ಸಂವಹನವಿರಲಿ ’’. ಎಂಬಿತ್ಯಾದಿ ಸಂದೇಶಗಳನ್ನು ಈ ಶಿಲಾಶಾಸನದಲ್ಲಿ ಬರೆಯಲಾಗಿತ್ತು. ‘‘ಅಶೋಕ ಚಕ್ರವರ್ತಿ ತಾನು ಅನುಸರಿಸುವ ಬೌದ್ಧ ಧರ್ಮವನ್ನು ತನ್ನ ಪ್ರಜೆಗಳ ಮೇಲೆ ಬಲವಂತವಾಗಿ ಹೇರಲಿಲ್ಲ. ಶಾಂತಿ, ಆಕ್ರಮಣರಾಹಿತ್ಯತೆ ಹಾಗೂ ಸಾಂಸ್ಕೃತಿಕ ವಿಜಯದ ಕುರಿತ ನೀತಿಯಿಂದಾಗಿ ಆತ ಭಾರತದ ಇತಿಹಾಸದ ಅತ್ಯಂತ ಪ್ರಮುಖ ವ್ಯಕ್ತಿಯಾಗಿದ್ದಾನೆ’’ (ಆರ್.ಪಿ.ಶರ್ಮಾ, ಚ್ಞ್ಚಜಿಛ್ಞಿಠಿ ಜ್ಞಿಜಿ, ಘೆಇಉ್ಕ 1995,104), ನ್ಯಾಯ ಹಾಗೂ ಅಹಿಂಸೆಯ ಕುರಿತ ತನ್ನ ಸಿದ್ಧಾಂತಗಳಿಂದ ಅಶೋಕನು ಭಾರತದ ಸ್ವಾತಂತ್ರ ಹೋರಾಟಗಾರರಿಗೂ ಸ್ಫೂರ್ತಿ ನೀಡಿದ್ದ. ವಿಶೇಷವಾಗಿ ಗಾಂಧಿ ಹಾಗೂ ನೆಹರೂ ಅವರ ವಿಚಾರಧಾರೆಗಳ ಕೇಂದ್ರಬಿಂದುವಾಗಿದ್ದ ಸಾಂಸ್ಕೃತಿಕ ಹಾಗೂ ಸಾಂಸ್ಕೃತಿಕ ಬಹುತ್ವವಾದವು ಮೂಲತಃ ಅಶೋಕನ ಸಿದ್ಧಾಂತಗಳಾಗಿದ್ದವು. ಆತನ ಆಡಳಿತದ ಸಂಕೇತವಾದ ನಾಲ್ಕು ಸಿಂಹಗಳು, ಭಾರತದ ಕರೆನ್ಸಿ ನೋಟುಗಳಲ್ಲಿ ಸ್ಥಾನ ಪಡೆದಿವೆ ಹಾಗೂ ಅಶೋಕ ಚಕ್ರವು ಭಾರತದ ಧ್ವಜದ ಒಂದು ಭಾಗವಾಗಿದೆ.
ಅಶೋಕನ ಕಾಲ ನಂತರ ವೌರ್ಯ ಸಾಮ್ರಾಜ್ಯಕ್ಕ್ಕೆ ಸಮಸ್ಯೆ ಎದುರಾದುದು ಅದು ಸೇನಾ ಕೇಂದ್ರಿತವಾಗಿರಲಿಲ್ಲವೆಂಬ ಕಾರಣಕ್ಕಾಗಿ ಅಲ್ಲ. ವೌರ್ಯ ಸಾಮ್ರಾಜ್ಯವು 50 ವರ್ಷಗಳವರೆಗೂ ಮುಂದುವರಿದಿತ್ತು. ಕ್ರಿ.ಪೂ.205ರಲ್ಲಿ ಗ್ರೀಕ್ ಚಕ್ರವರ್ತಿ ಅಂಟಿಯೊಕಸ್, ವಾಯವ್ಯ ಭಾಗ (ಪಂಜಾಬ್, ಅಫ್ಘಾನಿಸ್ತಾನ)ದ ಮೇಲೆ ಆಕ್ರಮಣ ನಡೆಸಿದ ಹಾಗೂ ಅಲ್ಲಿನ ಕೆಲವು ಭಾಗಗಳಲ್ಲಿ ತನ್ನ ಪ್ರಭುತ್ವವನ್ನು ಸ್ಥಾಪಿಸಿದ್ದ. ಆದರೆ ಅತಿ ದೊಡ್ಡ ಸಮಸ್ಯೆ ವೌರ್ಯ ಸಾಮ್ರಾಜ್ಯದೊಳಗಿನಿಂದಲೇ ತಲೆದೋರಿತ್ತು. ಬೌದ್ಧ ಧರ್ಮದ ಪ್ರಚಾರದ ವಿರುದ್ಧ ಬ್ರಾಹ್ಮಣ್ಯದ ಪ್ರತಿರೋಧವೇ ಈ ಸಮಸ್ಯೆಗಳಿಗೆ ಮೂಲವಾಗಿತ್ತು. ಧಾರ್ಮಿಕ ವಿಧಿವಿಧಾನಗಳಲ್ಲಿ ಪ್ರಾಣಿ ಬಲಿಯನ್ನು ಅಶೋಕ ನಿಷೇಧಿಸಿದ್ದನು. ಇದರಿಂದ ಬ್ರಾಹ್ಮಣರ ಆದಾಯವು ವಿಪರೀತವಾಗಿ ಕುಗ್ಗತೊಡಗಿತು. ಬೌದ್ಧಧರ್ಮದ ಹರಡುವಿಕೆಯು, ಜಾತಿ ಪದ್ಧತಿಯನ್ನು ಅವನತಿಯೆಡೆಗೆ ಕೊಂಡೊಯ್ಯತೊಡಗಿತು. ಇಂದು ವೈದಿಕ ಧರ್ಮವೆಂದು ಕೋಮುವಾದಿಗಳುಹೇಳುತ್ತಿರುವ ಧರ್ಮವು, ಆ ಕಾಲದಲ್ಲಿ ಬ್ರಾಹ್ಮಣ್ಯವಾದವೆಂಬ ಹೆಸರಿನಲ್ಲಿ ಪ್ರಚಲಿತದಲ್ಲಿತ್ತು.
ಈ ಎಲ್ಲಾ ಅಂಶಗಳು ಪ್ರತಿಕ್ರಾಂತಿಗೆ ಕಾರಣವಾಯಿತು. ಅಶೋಕನ ಮೊಮ್ಮಗನಾದ ಬೃಹದ್ರಥನ ಸೇನಾ ದಂಡನಾಯಕನಾಗಿದ್ದ ಪುಷ್ಯಮಿತ್ರ ಶುಂಗ ಎಂಬ ಬ್ರಾಹ್ಮಣ ಈ ಪ್ರತಿಕ್ರಾಂತಿಯ ನೇತೃತ್ವ ವಹಿಸಿದ್ದ. ಬೃಹದ್ರಥನನ್ನು ಹತ್ಯೆಗೈದ ಆತ ಅಶೋಕ ಸಾಮ್ರಾಜ್ಯದ ಸಿಂಧ್ ಪ್ರದೇಶದಲ್ಲಿ ಶುಂಗವಂಶದ ಸಾಮ್ರಾಜ್ಯವನ್ನು ಸ್ಥಾಪಿಸಿದ.
ಹೀಗೆ ಸಮಾಜದಲ್ಲಿ ಆರಂಭಗೊಂಡ ಪ್ರತಿಕ್ರಾಂತಿಯು, ಬೌದ್ಧಧರ್ಮವು ಭಾರತದಲ್ಲಿ ಕಣ್ಮರೆಯಾಗುವಂತೆ ಮಾಡಿತು.ಆ ಬಗ್ಗೆ ಅಂಬೇಡ್ಕರ್ ಹೀಗೆ ಬರೆದಿದ್ದಾರೆ. ‘‘ ಅಶೋಕ ಚಕ್ರವರ್ತಿಯು ಪ್ರಾಣಿಗಳ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದ. ಹೀಗಾಗಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲು ಯಾರೂ ಬ್ರಾಹ್ಮಣರ ಬಳಿಗೆ ಹೋಗುತ್ತಿರಲಿಲ್ಲ. ಬ್ರಾಹ್ಮಣ ಪುರೋಹಿತರು ನಿರುದ್ಯೋಗಿಗಳಾದರು. ಸಮಾಜದಲ್ಲಿ ತಮಗೆ ಈ ಮೊದಲು ಇದ್ದ ಪ್ರಾಮುಖ್ಯತೆ ಹಾಗೂ ವೈಭವವನ್ನು ಅವರು ಕಳೆದುಕೊಂಡರು. ಹೀಗಾಗಿ ಅವರು ವೌರ್ಯಸಾಮ್ರಾಜ್ಯದ ಚಕ್ರವರ್ತಿ ಬೃಹದ್ರಥನ ವಿರುದ್ಧ ಸಾಮವೇದಿ ಬ್ರಾಹ್ಮಣ ಹಾಗೂ ಬೃಹದ್ರಥನ ಸೇನಾ ಮುಖ್ಯಸ್ಥ ಪುಷ್ಯಮಿತ್ರ ಶುಂಗನ ನೇತೃತ್ವದಲ್ಲಿ ದಂಗೆಯೆದ್ದರು. (writings and speeches. vol 3 167 ). ಇಹಲೋಕದ ಬದುಕಿನ ಬಗ್ಗೆ ಶ್ರದ್ಧೆವಹಿಸಬೇಕೆಂದು ಜನರನ್ನು ಆಗ್ರಹಿಸುವ ಬೌದ್ಧಧರ್ಮದ ಸಿದ್ಧಾಂತದ ವಿರುದ್ಧ ನಡೆದ ವೈಚಾರಿಕ ಸಂಘರ್ಷದ ನೇತೃತ್ವವನ್ನು ಶ್ರೀ ಶಂಕರಾಚಾರ್ಯರು ವಹಿಸಿದ್ದರು. ಜಗತ್ತು ಒಂದು ಮಾಯೆಯೆಂದು ಶಂಕರಾಚಾರ್ಯರ ಸಿದ್ಧಾಂತವಾಗಿತ್ತು ಹಾಗೂ ಬ್ರಾಹ್ಮಣ್ಯವಾದವನ್ನು ಅದರ ಹಿಂದಿನ ವೈಭವದೊಂದಿಗೆ ಮರುಸ್ಥಾಪಿಸುವಲ್ಲಿ ಯಶಸ್ವಿಯಾದರು. 12ನೆ ಶತಮಾನದ ವೇಳೆಗೆ ಬೌದ್ಧಧರ್ಮವು ಇಲ್ಲಿನ ನೆಲದಿಂದ ಕಣ್ಮರೆಯಾಯಿತು.
ಹಾಗಾದರೆ ಅಶೋಕನ ಆಡಳಿತವನ್ನು ಈಗ ಟೀಕಿಸುವ ಅಗತ್ಯವಾದರೂ ಏನು?. ಅಶೋಕನು ಬೌದ್ಧ ಧರ್ಮವನ್ನು ಸ್ವೀಕರಿಸಿದುದು, ಬ್ರಾಹ್ಮಣ್ಯದ ವ್ಯವಸ್ಥೆಗಾದ ದೊಡ್ಡ ಹಿನ್ನಡೆಯಾಗಿತ್ತು. ಬ್ರಾಹ್ಮಣ್ಯವಾದವು ಹಿಂದೂಧರ್ಮದ ಅತ್ಯಂತ ಪ್ರಬಲವಾದ ಭಾಗವಾಗಿದೆ. ಅಶೋಕ ಚಕ್ರವರ್ತಿಯು ಅಹಿಂಸಾವಾದವನ್ನು ಪ್ರತಿಪಾದಿಸಿದ್ದನು ಹಾಗೂ ಬಹುತ್ವವಾದವನ್ನು ಉತ್ತೇಜಿಸಿದ್ದನು. ಇವೆಲ್ಲವೂ ಹಿಂಸೆ, ವರ್ಗೀಯತೆಯು ರಾಜಕೀಯದ ಭಾಗವಾಗಿರುವ ಹಿಂದೂ ರಾಷ್ಟ್ರೀಯ ಕಾರ್ಯಸೂಚಿಗೆ ಸಂಪೂರ್ಣ ವಿರುದ್ಧವಾದುದಾಗಿವೆ. ಹಿಂದೂ ರಾಷ್ಟ್ರೀಯ ವಾದವು ನವ ಬ್ರಾಹ್ಮಣ್ಯ ವೌಲ್ಯಗಳನ್ನು ಪ್ರೋತ್ಸಾಹಿಸಲು ಬಯಸುತ್ತಿದೆ. ಒಂದೆಡೆ ದಲಿತರನ್ನೂ ಇದರಲ್ಲಿ ಒಳಪಡಿಸುವ ಪ್ರಯತ್ನಗಳ ಜೊತೆಗೆ ಸಾಮಾಜಿಕ ಶ್ರೇಣೀಕೃತ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶವನ್ನೂ ಹೊಂದಿದೆ. ಹಿಂದೂ ರಾಷ್ಟ್ರೀಯತೆಯ ಹೆಸರಿನಲ್ಲಿ ಬೌದ್ಧ ಧರ್ಮದ ಜಾತಿಭೇದರಹಿತ ವಿಚಾರಧಾರೆ, ಬಹುತ್ವವಾದ ಹಾಗೂ ಶಾಂತಿತತ್ವಗಳ ಮೇಲೆ ದಾಳಿ ನಡೆಸಲಾಗುತ್ತದೆ.ಇದಕ್ಕಾಗಿ ಅಹಿಂಸೆಯು ಭಾರತವನ್ನು ದುರ್ಬಲಗೊಳಿಸುತ್ತದೆಯೆಂಬ ವಿತಂಡವಾದವನ್ನು ಮಂಡಿಸಲಾಗುತ್ತಿದೆ. ಅಹಿಂಸೆಯನ್ನು ಅನುಸರಿಸಿದ ಹೊರತಾಗಿಯೂ ವೌರ್ಯ ಸಾಮ್ರಾಜ್ಯವು 50 ವರ್ಷಗಳಿಗೂ ಅಧಿಕ ಸಮಯ ಅತ್ಯುತ್ತಮವಾದ ಸ್ಥಿತಿಯಲ್ಲಿತ್ತು. ಬ್ರಾಹ್ಮಣ್ಯವಾದಿಗಳ ಪ್ರತಿಕ್ರಾಂತಿಯೊಂದಿಗೆ ಸಾಮ್ರಾಜ್ಯವು ದುರ್ಬಲಗೊಳ್ಳತೊಡಗಿತು. ಪುರಾತನ ಭಾರತೀಯ ಇತಿಹಾಸವನ್ನು ತಿರುಚಲು ಹೊರಟಿರುವ ಕೋಮುವಾದಿಗಳು, ಅಶೋಕನನ್ನು ಟೀಕಿಸುವ ಸೋಗಿನಲ್ಲಿ ಬೌದ್ಧಧರ್ಮದ ವೌಲ್ಯಗಳನ್ನು ಮೂಲೆಗುಂಪು ಮಾಡಲು ಯತ್ನಿಸುತ್ತಿದ್ದಾರೆ.







