ಅಮೆರಿಕದಲ್ಲಿ ಜನಾಂಗೀಯ ಸಂಘರ್ಷ ನಿವಾರಣೆಗೆ ತೀವ್ರ ಯತ್ನ: ಒಬಾಮ
ವಾರ್ಸಾ,ಜು.10: ಜನಾಂಗೀಯ ಕಲಹವನ್ನು ಹಾಗೂ ಪೊಲೀಸರು ಹಾಗೂ ಅಲ್ಪಸಂಖ್ಯಾತ ಕರಿಯ ಜನಾಂಗೀಯರ ನಡುವೆ ಉಂಟಾಗಿರುವ ಒಡಕನ್ನು ನಿವಾರಿಸಲು ತನ್ನ ಅಧಿಕಾರಾವಧಿಯ ಕೊನೆಯ ತಿಂಗಳುಗಳಲ್ಲಿ ತೀವ್ರ ಪ್ರಯತ್ನಗಳನ್ನು ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಶನಿವಾರ ಪ್ರತಿಜ್ಞೆಗೈದಿದ್ದಾರೆ. ಡಲ್ಲಾಸ್ ನಗರದಲ್ಲಿ ಕರಿಯ ಜನಾಂಗೀಯನೊಬ್ಬನಿಂದ ಐವರು ಪೊಲೀಸರ ಹತ್ಯೆ ಹಾಗೂ ಮಿನೆಸೊಟಾ ಮತ್ತು ಲೂಸಿಯಾನಾ ನಗರಗಳಲ್ಲಿ ಇಬ್ಬರು ಕರಿಯ ಜನಾಂಗೀಯರ ಹತ್ಯೆ ಘಟನೆಗಳ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಯುರೋಪ್ ಪ್ರವಾಸದಲ್ಲಿ ಬರಾಕ್ ಒಬಾಮ ಪೊಲ್ಯಾಂಡ್ ರಾಜಧಾನಿ ವಾರ್ಸಾದಲ್ಲಿ ಶನಿವಾರ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡುತ್ತಾ ಈ ಭರವಸೆ ನೀಡಿದ್ದಾರೆ. ತಾನು ಯುರೋಪ್ ಪ್ರವಾಸ ಮುಗಿಸಿ ಶ್ವೇತಭವನಕ್ಕೆ ವಾಪಸಾದ ಬಳಿಕ ನಾಗರಿಕ ಹಕ್ಕುಗಳು ಹಾಗೂ ಕಾನೂನು ಅನುಷ್ಠಾನ ಅಧಿಕಾರಿಗಳ ಜೊತೆ ಈ ವಿಚಾರವಾಗಿ ಮಾತುಕತೆ ನಡೆಸುವುದಾಗಿ ಅವರು ತಿಳಿಸಿದ್ದಾರೆ.
ಅಮೆರಿಕದ ಪ್ರಪ್ರಥಮ ಕರಿಯ ಜನಾಂಗೀಯ ಅಧ್ಯಕ್ಷರಾದ ಒಬಾಮ, ತನ್ನ ಅಧಿಕಾರಾವಧಿಯುದ್ದಕ್ಕೂ ವಿವಿಧ ಜನಾಂಗೀಯ ಸಮಸ್ಯೆಗಳ ಬಗ್ಗೆ ಪ್ರಬಲವಾಗಿ ಧ್ವನಿಯೆತ್ತಿದ್ದಾರೆ.
ಡಲ್ಲಾಸ್ ಪೊಲೀಸರು ನಗರದಲ್ಲಿ ಹತ್ಯೆಗಳ ಪ್ರಮಾಣವನ್ನು ಕಡಿಮೆಗೊಳಿಸಿದ್ದಾರೆಂದು ಹೇಳಿದ ಅವರು, ಜನಾಂಗೀಯ ಬಿಕ್ಕಟ್ಟು ಹಾಗೂ ಪೊಲೀಸರ ವರ್ತನೆಗೆ ಸಂಬಂಧಿಸಿ ಸಾರ್ವಜನಿಕರ ದೂರುಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ಅವರು ಹೇಳಿದ್ದಾರೆ.





