ವಿಮಾನ ಪ್ರಯಾಣಿಕರಿಗೆ ಸುಂಕಮುಕ್ತ ಸಾಮಗ್ರಿ ಖರೀದಿ ಮಿತಿ ಹೆಚ್ಚಳ
ಹೊಸದಿಲ್ಲಿ, ಜು.11: ದೇಶಾದ್ಯಂತದ ಅಂತಾರಾಷ್ಟ್ರೀಯ ವಿಮಾನನಿಲ್ದಾಣಗಳಲ್ಲಿರುವ ಸುಂಕಮುಕ್ತ ಅಂಗಡಿಮಳಿಗೆಗಳಲ್ಲಿ, ವಿಮಾನ ಪ್ರಯಾಣಿಕರಿಗೆ ಸಾಮಗ್ರಿಗಳನ್ನು ಖರೀದಿಸಲು ಇರುವ ಹಣದ ಮಿತಿಯಲ್ಲಿ ಐದು ಪಟ್ಟು ಹೆಚ್ಚಳವಾಗಿದ್ದು, 25 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ. ಈ ಮೊದಲು ಕೇವಲ 5 ಸಾವಿರ ರೂ. ವರೆಗಿನ ಸಾಮಗ್ರಿಗಳನ್ನು ಖರೀದಿಸಲು ಮಾತ್ರ ಅವಕಾಶವಿತ್ತು.
ಸುಂಕಮುಕ್ತ ಸಾಮಗ್ರಿಗಳ ಖರೀದಿಗೆ ಇರುವ ಮಿತಿಯು ತೀರಾ ಕಡಿಮೆಯಾಗಿದ್ದು, ಅದನ್ನು ಪರಿಷ್ಕರಿಸಬೇಕೆಂದು ವಿಮಾನ ಪ್ರಯಾಣಿಕರಿಂದ ವ್ಯಾಪಕವಾದ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆಯೆಂದು ಕೇಂದ್ರೀಯ ಅಬಕಾರಿ ಹಾಗೂ ಕಸ್ಟಮ್ಸ್ (ಸಿಬಿಇಸಿ) ಇಲಾಖೆಯು ಇತ್ತೀಚೆಗೆ ಜಾರಿಗೊಳಿಸಿದ ಆದೇಶವೊಂದರಲ್ಲಿ ತಿಳಿಸಿದೆ.
‘‘ವಿಮಾನ ಪ್ರಯಾಣಿಕರು ಇನ್ನು ಮುಂದೆ ಸುಂಕಮುಕ್ತ ಅಂಗಡಿಗಳಲ್ಲಿ ಭಾರತೀಯ ಕರೆನ್ಸಿಯಲ್ಲಿ, 25 ಸಾವಿರ ರೂ.ವರೆಗೆ ಸಾಮಗ್ರಿಗಳನ್ನು ಖರೀದಿಸಬಹುದಾಗಿದೆ’’ ಎಂದು ಕಸ್ಟಮ್ಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸುಂಕಮುಕ್ತ ಅಂಗಡಿಗಳ ನಿರ್ವಾಹಕರು ತಮ್ಮ ಮಳಿಗೆಗಳಲ್ಲಿ ವಾಣಿಜ್ಯ ಬ್ಯಾಂಕ್ಗಳು ಪ್ರಕಟಿಸುವ ವಿದೇಶಿ ವಿವಿಮಯ ದರಗಳನ್ನು ಪ್ರದರ್ಶಿಸಬೇಕೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆಯೆಂದರು.
ಎಲ್ಲಾ ಸುಂಕಮುಕ್ತ ಅಂಗಡಿಗಳಲ್ಲಿ ಭಾರತೀಯ ಕರೆನ್ಸಿಯ ಬಳಕೆಗೆ ಸಂಬಂಧಿಸಿದ ಮಾಹಿತಿಯನ್ನು ಪ್ರಕಟಿಸು ವಂತೆ ನೋಡಿಕೊಳ್ಳಬೇಕೆಂದು, ವಿಮಾನ ನಿಲ್ದಾಣಗಳ ಹಿರಿಯ ಕಸ್ಟಮ್ಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸುಂಕಮುಕ್ತ ಅಂಗಡಿಗಳ ನಿರ್ವಾಹಕರು, ತಾವು ಮಾರಾಟ ಮಾಡುವ ಸಾಮಗ್ರಿಗಳ ದರವನ್ನು ಭಾರತೀಯ ರೂಪಾಯಿ ವೌಲ್ಯದಲ್ಲಿ ಪ್ರದರ್ಶಿಸುವಂತೆಯೂ ಆದೇಶ ನೀಡಲಾಗಿದೆಯೆಂದವರು ಹೇಳಿದ್ದಾರೆ.