ಮಹೇಶ್ವರಿ, ಧರ್ಮವೀರ್, ಜಾನ್ಸನ್‌ಗೆ ರಿಯೋ ಟಿಕೆಟ್
ಇಂಡಿಯನ್ ಗ್ರಾನ್‌ಪ್ರಿ ಅಥ್ಲೆಟಿಕ್ಸ್ ಕೂಟ

ಬೆಂಗಳೂರು, ಜು.11: ಇಲ್ಲಿ ನಡೆಯುತ್ತಿರುವ 4ನೆ ಆವೃತ್ತಿಯ ಇಂಡಿಯನ್ ಗ್ರಾನ್‌ಪ್ರಿ ಅಥ್ಲೆಟಿಕ್ಸ್ ಕೂಟದಲ್ಲಿ ಟ್ರಿಪಲ್ ಜಂಪರ್ ರೆಂಜಿತ್ ಮಹೇಶ್ವರಿ, ಓಟಗಾರ ಧರ್ಮವೀರ್ ಸಿಂಗ್ ಹಾಗೂ ಮಧ್ಯಮ ಅಂತರದ ಓಟಗಾರ ಜಿನ್ಸನ್ ಜಾನ್ಸನ್ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ಇಲ್ಲಿನ ಕಂಠೀರವ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಟ್ರಿಪಲ್ ಜಂಪ್ ಸ್ಪರ್ಧೆಯ ಮೂರನೆ ಯತ್ನದಲ್ಲಿ 16.93 ಮೀ. ದೂರ ಜಿಗಿದ ಮಹೇಶ್ವರಿ ಸತತ ಮೂರನೆ ಬಾರಿ ಒಲಿಂಪಿಕ್ ಗೇಮ್ಸ್‌ನಲ್ಲಿ ಸ್ಥಾನ ಪಡೆದಿದ್ದಾರೆ.
17.30 ಮೀ. ದೂರ ಜಿಗಿದ ಮಹೇಶ್ವರಿ ಅರ್ಪಿಂದರ್ ಸಿಂಗ್ 2014ರಲ್ಲಿ ನಿರ್ಮಿಸಿದ್ದ ನ್ಯಾಶನಲ್ ರೆಕಾರ್ಡ್‌ನ್ನು ಬ್ರೇಕ್ ಮಾಡಿದರು. ಈ ಸಾಧನೆ ಮೂಲಕ ಮಹೇಶ್ವರಿ ವಿರ್ಶವ ರ್ಯಾಂಕಿಂಗ್‌ನಲ್ಲಿ 3ನೆ ಸ್ಥಾನ ತಲುಪಿದರು.
2012ರ ಲಂಡನ್ ಗೇಮ್ಸ್ ಬಳಿಕ ಕಳಪೆ ಫಾರ್ಮ್‌ನಲ್ಲಿದ್ದ ಮಹೇಶ್ವರಿ ಇದೀಗ ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ.
ಹರ್ಯಾಣದ ಧರ್ಮವೀರ್ ಪುರುಷರ 200 ಮೀ. ಓಟದಲ್ಲಿ 20.45 ನಿಮಿಷದಲ್ಲಿ ಗುರಿ ತಲುಪಿ ರಿಯೋ ಟಿಕೆಟ್ ಪಡೆದರು. ಧರ್ಮವೀರ್ ಕಳೆದ ವರ್ಷ ಏಷ್ಯನ್ ಟೂರ್ನಿಯಲ್ಲಿ ಸ್ಥಾಪಿಸಿದ್ದ ತನ್ನದೇ ನ್ಯಾಶನಲ್ ರೆಕಾರ್ಡ್‌ನ್ನು(20.66 ನಿ.) ಉತ್ತಮಪಡಿಸಿಕೊಂಡರು. ಪುರುಷರ 800 ಮೀ. ಓಟದಲ್ಲಿ 1:46. ನಿಮಿಷದಲ್ಲಿ ಗುರಿ ತಲುಪಿದ ಜಾನ್ಸನ್ ರಿಯೋ ಗೇಮ್ಸ್‌ಗೆ ಅರ್ಹತೆ ಪಡೆದರು.







