ಶನಿಯ ಅತ್ಯಂತ ದೊಡ್ಡ ಉಪಗ್ರಹ ಟೈಟಾನ್‌ನಲ್ಲಿ ಜೀವಿಗಳಿರಬಹುದು
ಸಂಶೋಧನೆ

ಲಾಸ್ ಏಂಜಲಿಸ್, ಜು. 11: ಭೂಮಿಯಲ್ಲಿ ಜೀವಿಗಳ ಅಸ್ತಿತ್ವಕ್ಕೆ ಜಲರೂಪದ ನೀರು ಅಗತ್ಯ. ಆದರೆ, ಈ ನೀರು ಆಧಾರಿತ ತರ್ಕದ ಎಲ್ಲೆಯನ್ನು ಮೀರಿ ಶನಿ ಗ್ರಹದ ಅತ್ಯಂತ ದೊಡ್ಡ ಉಪಗ್ರಹ ಟೈಟಾನ್‌ನಲ್ಲಿ ಜೀವ ಅಸ್ತಿತ್ವದಲ್ಲಿರಬಹುದು ಎಂದು ಕಾರ್ನೆಲ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ನೂತನ ಅಧ್ಯಯನವೊಂದು ತಿಳಿಸಿದೆ.
ಈ ಕುರಿತ ಅವರ ಸಂಶೋಧನೆ ‘ಪ್ರೊಸೀಡಿಂಗ್ಸ್ ಆಫ್ ದ ನ್ಯಾಶನಲ್ ಅಕಾಡೆಮಿ ಆಫ್ ಸಯನ್ಸಸ್’ನ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟಗೊಂಡಿದೆ. ಉಪಗ್ರಹದ ವಾತಾವರಣದಲ್ಲಿರುವ ಹೈಡ್ರೋಜನ್ ಸಯನೈಡ್ (ಎಚ್‌ಸಿಎನ್) ಜೀವ ಉಗಮಕ್ಕೆ ಕಾರಣವಾಗುವ ಮಹತ್ವದ ಅಂಶಗಳ ಪೈಕಿ ಒಂದಾಗಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ ಎಂದು ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ.
ಟೈಟಾನ್ ಮೇಲ್ಮೈಯಲ್ಲಿರುವ ಎಚ್‌ಸಿಎನ್ ಸಂಯೋಜನೆಗೊಂಡು ಸರಣಿ ಕ್ರಿಯೆಗಳನ್ನು ಅಥವಾ ಪಾಲಿಮರ್ಸ್‌ಗಳನ್ನು ಸೃಷ್ಟಿಸಬಹುದು ಹಾಗೂ ಪಾಲಿಮೈನ್ ಎನ್ನುವುದು ಇಂಥ ಒಂದು ಪಾಲಿಮರ್ ಎಂಬುದಾಗಿ ಅಧ್ಯಯನಗಳು ತಿಳಿಸಿವೆ.
ಸಂಶೋಧಕರು ಕಂಪ್ಯೂಟರ್ ಮಾದರಿಗಳು ಮತ್ತು ನಾಸಾದ ಕ್ಯಾಸಿನಿ ಮತ್ತು ಹಯ್‌ಜನ್ಸ್ ಶೋಧಕ ನೌಕೆಗಳಿಂದ ಪಡೆದ ಮಾಹಿತಿಗಳನ್ನು ಬಳಸಿಕೊಂಡು ನಿರ್ಧಾರವೊಂದಕ್ಕೆ ಬಂದಿದ್ದಾರೆ- ಅಂದರೆ, ಟೈಟಾನ್‌ನಂಥ ತಣ್ಣಗಿನ ಪರಿಸರ ಸ್ಥಿತಿಗತಿಗಳಲ್ಲಿ ಪಾಲಿಮೈನ್ ಹೊಂದಾಣಿಕೆ ಮಾಡಿಕೊಂಡು ಸೂರ್ಯನ ಶಕ್ತಿಯನ್ನು ಹೀರಿ ಜೀವ ಉಗಮಕ್ಕೆ ಸಂಭಾವ್ಯ ಪ್ರೇರಕ ಶಕ್ತಿಯಾಗಬಹುದು.
‘‘ಈ ಕುರಿತ ಸಂಶೋಧನೆಯನ್ನು ಮುಂದುವರಿಸಬೇಕಾದ ಅಗತ್ಯವಿದೆ. ಮುಂದಿನ ಸಂಶೋಧನೆಗೆ ಇದು ಪೀಠಿಕೆ ಎಂಬುದಾಗಿ ನಾವು ಪರಿಗಣಿಸಿದ್ದೇವೆ’’ ಎಂದು ಕಾರ್ನೆಲ್ ವಿವಿಯಲ್ಲಿ ರಸಾಯನ ಶಾಸ್ತ್ರ ಸಂಶೋಧಕ ಹಾಗೂ ಸಂಶೋಧನೆಯ ಪ್ರಧಾನ ಲೇಖಕ ಮಾರ್ಟಿನ್ ರಹಂ ಹೇಳುತ್ತಾರೆ.







