ಝಾಕಿರ್ ನಾಯ್ಕ್ ವಿರುದ್ಧ ಪ್ರಕರಣ ದಾಖಲಿಸುವುದು ಸುಲಭವಲ್ಲ: ಕಾನೂನು ತಜ್ಞರು
"ಅವರದ್ದು ದ್ವೇಷ ಭಾಷಣ ಎಂದು ಸಾಬೀತುಪಡಿಸುವುದು ಕಷ್ಟ "

ಹೊಸದಿಲ್ಲಿ, ಜು.12: ಖ್ಯಾತ ಪ್ರವಚನಕಾರ ಝಾಕಿರ್ ನಾಯ್ಕ್ ಅವರ ಭಾಷಣವನ್ನು ಕೋಮು ಪ್ರಚೋದಕ ಅಥವಾ ಜನಾಂಗಗಳ ನಡುವೆ ದ್ವೇಷ ಹರಡುವ ಉದ್ದೇಶದ್ದು ಎಂದು ಖಂಡಿಸುವುದು ಅಥವಾ ಆಕ್ರೋಶ ವ್ಯಕ್ತಪಡಿಸುವುದು ಸುಲಭ. ಆದರೆ ಕಾನೂನು ಜಾರಿ ಅಧಿಕಾರಿಗಳಿಗೆ ಈಗ ಅದನ್ನು ನ್ಯಾಯಾಲಯದಲ್ಲಿ ಸಾಬೀತುಮಾಡುವುದು ಕಷ್ಟ. ಕಳೆದ ಹಲವು ವರ್ಷಗಳಲ್ಲಿ ಸುಪ್ರೀಂಕೋರ್ಟ್, ಸಾರ್ವಜನಿಕ ಗ್ರಹಿಕೆ ಹಾಗೂ ವಾಸ್ತವವನ್ನು ಪ್ರತ್ಯೇಕವಾಗಿ ಪರಿಗಣಿಸುತ್ತಾ ಬಂದಿದೆ. ಸಾಮಾಜಿಕ ಸಾಮರಸ್ಯ ಕೆಡಿಸಲು ಒಬ್ಬ ವ್ಯಕ್ತಿ ಪ್ರಯತ್ನಿಸಿದ್ದಾನೆ ಎಂದು ಭಾರತೀಯ ದಂಡಸಂಹಿತೆಯ ಸೆಕ್ಷನ್ 153ಎ ಹಾಗೂ 295 ಎ ಅನ್ವಯ ಸಾಬೀತುಪಡಿಸಲು ವಾಸ್ತವಾಂಶಗಳು ಬೇಕಾಗುತ್ತವೆ.
ಢಾಕಾ ಹತ್ಯಾಕಾಂಡಕ್ಕೆ ಝಾಕೀರ್ ನಾಯ್ಕ್ ಅವರ ದ್ವೇಷಭಾಷಣಗಳು ಕುಮ್ಮಕ್ಕು ನೀಡಿದವು ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲು ಆಗ್ರಹ ಪ್ರಬಲವಾಗಿ ಕೇಳಿಬಂದಿತ್ತು. ಆದರೆ ಭಾರತದ ಮಾಜಿ ಅಟರ್ನಿ ಜನರಲ್ ಸೋಲಿ ಸೊರಾಬ್ಜಿಯವರ ಪ್ರಕಾರ, "ಅಗತ್ಯವಿರುವುದು ನ್ಯಾಯಯುತ ವಿಚಾರಣೆ ಹಾಗೂ ಕಾನೂನನ್ನು ಸಮರ್ಪಕವಾಗಿ ಅನ್ವಯಿಸುವುದು"
ಒಂದು ಧರ್ಮವನ್ನು ಆಚರಿಸುವುದು ಹಾಗೂ ಪ್ರಚಾರ ಮಾಡುವುದು ಪ್ರತಿಯೊಬ್ಬನ ಮೂಲಭೂತ ಹಕ್ಕು. ಆದರೆ ಇದಕ್ಕೆ ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಹಾಗೂ ಆರೋಗ್ಯದ ನಿರ್ಬಂಧಗಳಿವೆ, "ಒಂದು ಧರ್ಮವನ್ನು ಇನ್ನೊಂದಕ್ಕಿಂತ ಶ್ರೇಷ್ಠ ಎಂದು ಹೇಳುವ ಮೂಲಕ ಅದನ್ನು ಪ್ರಚುರಪಡಿಸುವುದು ಅಪರಾಧವಲ್ಲ. ಆದರೆ ಅದು ಮತ್ತೊಂದು ಗುಂಪಿನ ಧಾರ್ಮಿಕ ಭಾವನೆಗಳನ್ನು ಕೆರಳಿಸಿದರೆ, ಅದಕ್ಕೆ ಮೂಲಭೂತ ಹಕ್ಕು ಎಂಬ ರಕ್ಷಣೆ ಅನ್ವಯವಾಗುವುದಿಲ್ಲ" ಎನ್ನುವುದು ಮಹಾರಾಷ್ಟ್ರದ ಮಾಜಿ ಅಡ್ವಕೇಟ್ ಜನರಲ್ ಎಸ್.ಜಿ.ಅನಯ್ ಅವರ ಅಭಿಮತ. ಸರಕಾರ ಇದೀಗ ಝಾಕಿರ್ ನಾಯ್ಕ್ ಅವರ ಭಾಷಣಗಳ ಬಗೆಗೆ ತನಿಖೆ ನಡೆಸುವಂತೆ ಆದೇಶಿಸಿದೆ.







