ಕಾಶ್ಮೀರದಲ್ಲಿ ಅಲ್ಲಲ್ಲಿ ಕಲ್ಲು ತೂರಾಟ; ಭದ್ರತಾ ಪಡೆಗಳಿಗೆ ಹೊಸ ಸವಾಲು
ದಕ್ಷಿಣ ಕಾಶ್ಮೀರದಲ್ಲಿ ನಾಲ್ಕನೆ ದಿನವೂ ಮುಂದುವರಿದ ಕರ್ಪ್ಯೂ

ಶ್ರೀನಗರ, ಜು.12: ಭದ್ರತಾ ಪಡೆಗಳು ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೋಕೆರ್ ನಾಗ್ ಪ್ರದೇಶದಲ್ಲಿ ಕಳೆದ ಶುಕ್ರವಾರ ನಡೆಸಿದ ಎನ್‌ಕೌಂಟರ್‌ನಲ್ಲಿ ಹಿಜ್ಬುಲ್ ಮುಜಾಹಿದ್ದಿನ್ ಉಗ್ರ ಸಂಘಟನೆಯ ಕಮಾಂಡರ್ ಬುರ್ಹಾನ್ ವನಿಯನ್ನು ಹತ್ಯೆಗೈದ ಬಳಿಕ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕಂಡು ಬಂದಿರುವ ಅಶಾಂತಿಯ ವಾತಾವರಣ ಮುಂದುವರಿದಿದ್ದು, ಪರಿಸ್ಥಿತಿಯ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಭದ್ರತಾ ಪಡೆಯ ಮೇಲೆ ಪ್ರತಿಭಟನಕಾರರು ಕಲ್ಲು ತೂರಾಟ ನಡೆಸಿದಿರುವ ಘಟನೆ ವರದಿಯಾಗಿದೆ.
ಭದ್ರತಾ ಪಡೆ ಮತ್ತು ಪ್ರತಿಭಟನಕಾರರ ನಡುವೆ ವಿವಿಧಡೆ ಭಾರೀ ಘರ್ಷಣೆ ಕಂಡು ಬಂದಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವುದು ಭದ್ರತಾ ಪಡೆಗಳಿಗೆ ಸವಾಲಾಗಿ ಪರಿಣಮಿಸಿದೆ. ಕಲ್ಲು ತೂರಾಟದ ಪರಿಣಾಮವಾಗಿ ದಿನದ ಕಾರ್ಯಾಚರಣೆ ಭದ್ರತಾ ಪಡೆಗಳಿಗೆ ತಲೆನೋವಾಗಿ ಪರಿಣಮಿಸಿದೆ. ಗಲಭೆಯಲ್ಲಿ ಈ ವರೆಗೆ 30 ಮಂದಿ ಬಲಿಯಾಗಿದ್ದಾರೆ.
ಈ ನಡುವೆ ನವಾಟ್ಟಾ ಪ್ರದೇಶದಲ್ಲಿ ಭದ್ರತಾ ಪಡೆಗಳ ಮೇಲೆ ಉಗ್ರರು ನಡೆಸಿದ ದಾಳಿಯ ಪರಿಣಾಮವಾಗಿ 9 ಮಂದಿ ಯೋಧರು ಗಾಯಗೊಂಡಿದ್ದಾರೆ. ದಕ್ಷಿಣ ಕಾಶ್ಮೀರದಲ್ಲಿ ಕರ್ಪ್ಯೂ ನಾಲ್ಕನೆ ದಿನವೂ ಮುಂದುವರಿದಿದೆ.





