ಮಣಿಪುರ ಯುವತಿಗೆ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಜನಾಂಗೀಯ ನಿಂದನೆ:ಕ್ಷಮೆ ಕೋರಿದ ಸುಷ್ಮಾ ಸ್ವರಾಜ್

ನವದೆಹಲಿ, ಜು.12: ದೆಹಲಿ ವಿಮಾನ ನಿಲ್ದಾಣದಲ್ಲಿ ಜನಾಂಗೀಯ ನಿಂದನೆಯೆದುರಿಸಬೇಕಾಗಿ ಬಂದಿದ್ದ ಮಣಿಪುರ ಯುವತಿ ಮೋನಿಕಾಖಂಗೆಂಬಮ್ ಅವರಿಗೆ ಟ್ವೀಟ್ ಮುಖಾಂತರ ವಿದೇಶಾಂಗ ವ್ಯವಹಾರಗಳ ಸಚಿವೆ ಕ್ಷಮೆ ಕೋರಿದ್ದಾರಲ್ಲದೆ ಈ ವಿಚಾರವನ್ನು ಸಂಬಂಧಿತ ಪ್ರಾಧಿಕಾರಗಳ ಗಮನಕ್ಕೆ ತರುವುದಾಗಿಯೂ ತಿಳಿಸಿದ್ದಾರೆ.
``ಮೋನಿಕಾ ಖುಂಗೆಂಬಮ್ - ಇದನ್ನು ತಿಳಿದು ನನಗೆ ವಿಷಾದವಾಯಿತು. ಇಮಿಗ್ರೇಶನ್ ಇಲಾಖೆ ನನ್ನ ಬಳಿಯಿಲ್ಲ. ನನ್ನ ಹಿರಿಯ ಸಹೋದ್ಯೋಗಿ ರಾಜನಾಥ್ ಸಿಂಗ್ ಅವರಲ್ಲಿ ಈ ಬಗ್ಗೆ ತಿಳಿಸಿ ವಿಮಾನ ನಿಲ್ದಾಣದ ಇಮಿಗ್ರೇಶನ್ ಅಧಿಕಾರಿಗಳಿಗೆ ಈ ಬಗ್ಗೆ ಸಂವೇದನಾಶೀಲರಾಗಲು ತಿಳಿಸಲಾಗುವುದು,'' ಎಂದಿದ್ದಾರೆ.
ಪ್ರಸಕ್ತ ಸಿಯೋಲ್ ನಲ್ಲಿ ಉದ್ಯೋಗ ಅರಸುತ್ತಿರುವ ಮೋನಿಕಾ ತನ್ನ ಫೇಸ್ ಬುಕ್ ಪೋಸ್ಟ್ ನಲ್ಲಿ ಹೀಗೆಂದು ಬರೆದಿದ್ದಾರೆ.
``ಕಳೆದ ರಾತ್ರಿ ಐಜಿಐ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಯ ಬಗ್ಗೆ ನನ್ನ ಅಸಹನೆಯನ್ನು ಎಫ್ ಬಿಯಲ್ಲಿ ತೋಡಿಕೊಂಡಿದ್ದೆ. ಅದು ವೈರಲ್ ಆಗಿ ಮಾಧ್ಯಮಗಳಲ್ಲಿ ಸುದ್ದಿಯಾಗಬಹುದೆಂದು ನಾನು ಯೋಚಿಸಿರಲೇ ಇಲ್ಲ. ನಿಮ್ಮಲ್ಲಿ ಹಲವರು ನನಗೆ ಬೆಂಬಲಿಸಿದ್ದಕ್ಕೆ ಧನ್ಯವಾದಗಳು. ಆದರೆ ಕೆಲವರು `ಮೂರ್ಖ ಮಹಿಳೆ ಅದು ಜನಾಂಗೀಯ ನಿಂದನೆಯಲ್ಲ, ಇಮಿಗ್ರೇಶನ್ ಅಧಿಕಾರಿಗಳು ಎಲ್ಲಾ ವಿಧದ ಪ್ರಶ್ನೆಗಳನ್ನು ಕೇಳುತ್ತಾರೆ'' ಎಂದಿದ್ದರು. ನಾನು ನೇರವಾಗಿ ಹೇಳಬಯಸುತ್ತೇನೆ. ಆತ ನನ್ನಲ್ಲಿ ನನ್ನ ಪ್ರವಾಸ ಸಂಬಂಧಿತ ಪ್ರಶ್ನೆಗಳನ್ನು- ಅಂದರೆ ಯಾವ ಸಮ್ಮೇಳನ, ಅಲ್ಲಿ ಎಷ್ಟು ದಿನ ಇರುತ್ತೀರಿ, ಈಗ ಎಲ್ಲಿ ಕೆಲಸ ಮಾಡುತ್ತಿದ್ದೀರಿ, ವಿದೇಶ ಪ್ರವಾಸ ವೆಚ್ಚ ಯಾರು ಭರಿಸುತ್ತಿದ್ದಾರೆ, ಇತ್ಯಾದಿ ಕೇಳಿದ್ದಿದ್ದರೆ ನಾನೇನೂ ಅಂದುಕೊಳ್ಳುತ್ತಿರಲಿಲ್ಲ. ಆತ ನನ್ನ ಊರು ಯಾವುದು ಎಂದು ಕೇಳಿದ್ದರೂ ಪರವಾಗಿರಲಿಲ್ಲ. ಆದರೆ ಒಂದು ರೀತಿಯ ವ್ಯಂಗ್ಯ ನಗೆಯೊಂದಿಗೆ ``ಭಾರತದಲ್ಲಿ ಎಷ್ಟು ರಾಜ್ಯಗಳಿವೆ ? ಮಣಿಪುರದ ಗಡಿ ಭಾಗಕ್ಕೆ ತಾಗಿಕೊಂಡಿರುವ ಇತರ ರಾಜ್ಯಗಳು ಯಾವುವು? ಇತ್ಯಾದಿ ಕೇಳಿರುವುದು ಸರಿಯಲ್ಲ. ಇದು ನನ್ನ ಪ್ರವಾಸಕ್ಕೆ ಸಂಬಂಧಿಸಿದ್ದಲ್ಲ ಹಾಗೂ ನಾನು ಮಗು ಕೂಡ ಅಲ್ಲ. ಆಗ ನನ್ನ ವಿಮಾನ ಹೊರಡಲು ಸ್ವಲ್ಪವೇ ಹೊತ್ತಿದ್ದರಿಂದ ಈ ವಿಷಯಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗಲಿಲ್ಲ ಹಾಗೂ ಅದಕ್ಕೆ ಖೇದವಿದೆ. ನಿಜ ಹೇಳಬೇಕೆಂದರೆ ಆತ ನನ್ನ ವೀಸಾಗೆ ಸ್ಟ್ಯಾಂಪ್ ಹಾಕದೇ ಇರಬಹುದೆಂಬ ಭಯವೂ ನನಗಿತ್ತು,'' ಎಂದು ಆಕೆ ಬರೆದಿದ್ದಾರೆ.
ಈಶಾನ್ಯ ರಾಜ್ಯಗಳ ಜನರು ಆಗಾಗ ಜನಾಂಗೀಯ ನಿಂದನೆಗೆ ಗುರಿಯಾಗುತ್ತಿರುವುದು ಸಾಮಾನ್ಯವಾಗಿದೆ. ಈ ಇತ್ತೀಚಿಗಿನ ಘಟನೆಯನ್ನು ಗಮನಿಸಿದಾಗ ಈ ರಾಜ್ಯಗಳ ಜನರ ಹಕ್ಕುಗಳನ್ನು ರಕ್ಷಿಸಲು ಕಠಿಣ ನಿಯಮಗಳ ಅಗತ್ಯವಿದೆಯೆಂಬ ಭಾವನೆ ಮೂಡುತ್ತದೆ.







