ಆಗ ಸೂಪರ್ ಮಾಡೆಲ್, ಈಗ ಯುವಜನರ ಮಾಡೆಲ್
ತನ್ನೂರಿನಲ್ಲಿ ಮಾದಕ ದ್ರವ್ಯದ ವಿರುದ್ಧ ಹೋರಾಡಲು ಫ್ಯಾಶನ್ ಜಗತ್ತಿಗೇ ವಿದಾಯ

ನ್ಯಾಯಾಲಯವು ಸೆನ್ಸರ್ ಕತ್ತರಿಗಳನ್ನು ತೆಗೆದು ಉಡ್ತಾ ಪಂಜಾಬ್ ಸಿನೆಮಾ ವೀಕ್ಷಣೆಗೆ ಅವಕಾಶ ಕೊಟ್ಟಾಗ ನಾವು ಪಂಜಾಬ್ ಕಡೆಗೆ ನಡೆದಿದ್ದೆವು. ಮಾಧ್ಯಮಗಳು ಉಡ್ತಾ ಪಂಜಾಬ್ ಸುದ್ದಿಯಿಂದ ರಾರಾಜಿಸುತ್ತಿದ್ದರೆ ಪಟಿಯಾಲ, ಲುಧಿಯಾನ ಅಥವಾ ಜಲಂದರ್‌ಗಳಲ್ಲಿ ಆಗ ಬಗ್ಗೆ ಮಾತುಕತೆಯೇ ಇರಲಿಲ್ಲ. ನಮ್ಮ ಗುರಿ ಇದ್ದದ್ದು ಜಲಂದರ್ ಜಿಲ್ಲೆಯ ಗ್ರಾಮ ಬಜ್ವಾ ಕಲನ್. ಅಲ್ಲಿನ ಪ್ರಸಿದ್ಧ ನಿವಾಸಿ ಇಂದರ್ ಬಜ್ವಾನನ್ನು ಭೇಟಿಯಾಗಬೇಕಿತ್ತು.
ತಕ್ಷಣವೇ ನೆನಪಾಗದೆ ಇದ್ದರೂ, ಈ ಹೆಸರು ಒಂದು ಕಾಲದಲ್ಲಿ ದೇಶದ ಫ್ಯಾಶನ್ ಜಗತ್ತಿನಲ್ಲಿ ಚಿರಪರಿಚಿತ. 90ರ ದಶಕದಲ್ಲಿ ಮತ್ತು 2000 ಆದಿಯಲ್ಲಿ ಭಾರತದ ಫ್ಯಾಶನ್ ಜಗತ್ತು ಅಭಿವೃದ್ಧಿಯಾದಾಗ ಲಾಭ ಪಡೆದುಕೊಂಡವರಲ್ಲಿ ಅವರೂ ಒಬ್ಬರು. 2005ರಲ್ಲಿ 21ನೇ ವಯಸ್ಸಿನಲ್ಲಿ ದೆಹಲಿಗೆ ಬಂದು ಅಲ್ಲಿಂದ ಮುಂಬೈಗೆ ಹೋಗಿ ಫ್ಯಾಶನ್ ಜಗತ್ತಿನಲ್ಲಿ ದೊಡ್ಡ ಹೆಸರು ಮಾಡಿದವರು. ಅವರು ತಮ್ಮ ಕೊನೆಯ ಅಸೈನ್ ಮೆಂಟನ್ನು ರೇಮಂಡ್: ದ ಕಂಪ್ಲೀಟ್ ಮ್ಯಾನ್‌ಎನ್ನುವ ಪ್ರಚಾರಾಭಿಯಾನಕ್ಕೆ 2011ರಿಂದ 2013ರವರೆಗೆ ಮಾಡಿದ್ದರು. ಇದು ಪ್ಯಾಶನ್ ಜಗತ್ತಿನ ಅತೀ ಪ್ರತಿಷ್ಠಿತ ಕೆಲಸ. ಮುಂದುವರಿದು ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದರು. ಪಂಜಾಬಿ ಸಿನೆಮಾ ಸಾಡೀ ಸಿಎಂ ಸಾಬ್ ಬಿಡುಗಡೆಯೂ ಆಗಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿತ್ತು. ಆದರೆ 2014ರಲ್ಲಿ 31ನೇ ವಯಸ್ಸಿನಲ್ಲಿ ಇಂದರ್ ಮರಳಿ ಬಾಜ್ವಾ ಖಾನ್ ಕಡೆಗೆ ವಾಪಾಸಾದರು.

ಜೀವನದ ತಿರುವು ಬಂದಿದ್ದು 17 ವರ್ಷದ ಚಿಕ್ಕಮ್ಮನ ಮಗ ಮಾದಕ ವ್ಯಸನಕ್ಕೆ ತುತ್ತಾದಾಗ. ಇಂದು ಮಾದಕ ದ್ರವ್ಯಗಳ ಸಮಸ್ಯೆ ರಾಜಕೀಯ ಮತ್ತು ಸಾಮಾಜಿಕವಾಗಿ ಪ್ರಮುಖ ಸುದ್ದಿಯಾಗುತ್ತಿದೆ. ಅಂಕಿ ಅಂಶಗಳು ಇನ್ನಷ್ಟು ಹತಾಶಪೂರ್ಣವಾಗಿದೆ. ಪ್ರತೀ ಮನೆಯೂ ಒಬ್ಬ ಸದಸ್ಯನನ್ನಾದರೂ ಮಾದಕ ದ್ರವ್ಯ ವ್ಯಸನಕ್ಕೆ ಕಳೆದುಕೊಳ್ಳುತ್ತಿದೆ. ಆದರೆ ಸಾಮಾಜಿಕ ಜಾಗೃತಿಯ ಮೂಲಕ ಸಮಸ್ಯೆಯನ್ನು ನಿಭಾಯಿಸುವುದು ದೊಡ್ಡ ಸವಾಲಾಗಿದೆ. ರಾಜಕಾರಣಿಗಳು ಈ ಬಗ್ಗೆ ಮಾತನಾಡುತ್ತಾರೆ ಮತ್ತು ಮತ ಪಡೆಯುತ್ತಾರೆ. ಸಿನೆಮಾಗಳು ಮಾತನಾಡಿ ಹಣ ಗಳಿಸುತ್ತವೆ. ಆದರೆ ಯಾರೂ ಏನೂ ಮಾಡುತ್ತಿಲ್ಲ ಎನ್ನುತ್ತಾರೆ ಬಜ್ವಾ.

ಪಂಜಾಬಿನಲ್ಲಿ ಸಮುದಾಯ ಸೇವಾ ಮನೋಭಾವ ತುಂಬಾ ಇದೆ. ಮಾದಕ ದ್ರವ್ಯ ವ್ಯಸನ ದೊಡ್ಡ ಸುದ್ದಿಯಾಗುವ ಮೊದಲೇ ಬಜ್ವಾ ಅದನ್ನು ಅರ್ಥ ಮಾಡಿಕೊಂಡಿದ್ದರು. ಮುಂಬೈನಲ್ಲಿ ಕೆಲಸ ಮಾಡುತ್ತಾ ಗ್ರಾಮದ ಕಬಡ್ಡಿ ತಂಡದಲ್ಲೂ ಅವರು ಆಡುತ್ತಿದ್ದರು. ಆದರೆ ನಿಧಾನವಾಗಿ ತಮ್ಮ ಕಬಡ್ಡಿ ತಂಡ ಮಾದಕ ದ್ರವ್ಯಗಳ ವ್ಯಸನಕ್ಕೆ ಬಲಿಯಾಗಿ ಆಟಗಾರರನ್ನು ಕಳೆದುಕೊಳ್ಳುತ್ತಾ ಹೋದಾಗ ಅವರಿಗೆ ಸಮಸ್ಯೆಯ ಅರಿವಾಯಿತು. ಅಂತರ್ ಕಾಲೇಜು ಸ್ಪರ್ಧೆಗಳಲ್ಲಿ ಬಲಿಷ್ಠವಾಗಿದ್ದ ತಂಡದಲ್ಲಿ ಬಲವೇ ಇರಲಿಲ್ಲ. ಕಳೆದೊಂದು ದಶಕದಲ್ಲಿ ಕಬಡ್ಡಿ ತಂಡ ಹೀಗೆ ದುರ್ಬಲವಾಗುವುದನ್ನು ನೋಡಿದ್ದರು. ಅದೇ ಸಮಯದಲ್ಲಿ ಅವರ ಸೋದರ ಸಂಬಂಧಿಯೂ ಮಾದಕ ದ್ರವ್ಯಕ್ಕೇ ಬಲಿಯಾದ. ಇನ್ನು ಮುಂಬೈಯಲ್ಲಿರುವುದು ಅವರಿಂದ ಸಾಧ್ಯವಿರಲಿಲ್ಲ. ಮುಂಬೈಯ ಖುಷಿ ನನಗಿರಲಿಲ್ಲ. ಅಲ್ಲಿ ಕುಳಿತು ಏನೂ ಮಾಡದೆ ಸುಮ್ಮನೆ ನೋಡುವುದು ನನ್ನಿಂದ ಸಾಧ್ಯವಾಗಲಿಲ್ಲ ಎನ್ನುತ್ತಾರೆ ಬಜ್ವಾ. ಮಕ್ಕಳಿಗೆ ಆದರ್ಶ ವ್ಯಕ್ತಿಗಳಿರಲಿಲ್ಲ. ಕಲಿತವರು ವಿದೇಶಗಳಲ್ಲಿ ಹೋಗಿ ನೆಲೆಸುತ್ತಿದ್ದರು. ಗ್ರಾಮದ ಯುವಕರ ಕೈಗೆ ಮಾದಕ ದ್ರವ್ಯ ಸುಲಭವಾಗಿ ಸಿಗುತ್ತಿತ್ತು. ಬಜ್ವಾ ವಾಪಾಸಾದರು. ಹೊಸ ಕಬಡ್ಡಿ ತಂಡ ಕಟ್ಟುವುದು ಅವರ ಮೊದಲ ಗುರಿಯಾಗಿತ್ತು. ಸಂಜೆ ಕೆಲಸಗಳಿಲ್ಲದ ಸಮಯದಲ್ಲಿ ಜನರು ಮಾದಕ ದ್ರವ್ಯ ಸೇವಿಸುತ್ತಿದ್ದರು. ಹೀಗಾಗಿ ಗ್ರಾಮದ ಜನರಿಗೆ ಮನೋರಂಜನೆ ಚಟುವಟಿಕೆಯನ್ನು ಸಕಾರಾತ್ಮಕವಾಗಿ ಮತ್ತು ಆರೋಗ್ಯಕರವಾಗಿ ನೀಡುವುದು ಉದ್ದೇಶವಾಗಿತ್ತು ಎನ್ನುತ್ತಾರೆ ಬಜ್ವಾ.
ಪಂಜಾಬ್ ಕಬಡ್ಡಿ ಪರಂಪರೆಯಲ್ಲಿ 15 ಕ್ಲಬ್‌ಗಳಿವೆ. ಗ್ರಾಮಗಳ ತಂಡಗಳೇ ಇವುಗಳಲ್ಲಿ ಆಡುತ್ತವೆ. ಮೊದಲಿಗೆ ಬಜ್ವಾ ತಮ್ಮ ಗ್ರಾಮದ ಕಬಡ್ಡಿ ಮೈದಾನ ಸರಿಪಡಿಸಿದರು. ನಂತರ ಅವರು ತರಬೇತುದಾರರಾದರು. ಐದಾರು ಮಂದಿ ಅವರ ಜೊತೆ ಆಡಲು ಉತ್ಸುಕರಾಗಿ ಬಂದದ್ದು ಅವರಿಗೆ ಆತ್ಮವಿಶ್ವಾಸ ನೀಡಿತು. ಉತ್ತಮ ಜಿಮ್ ಒಂದನ್ನು ಗ್ರಾಮದಲ್ಲಿ ತರಲು ತಮ್ಮ ಮುಂಬೈ ಮತ್ತು ದೆಹಲಿ ಸ್ನೇಹಿತರ ಸಹಾಯ ಅವರು ಪಡೆದುಕೊಂಡರು. ಮುಂಬೈಗೆ ಮೊದಲು ಕಾಲಿಟ್ಟಾಗ ತನ್ನ ಹೆಸರನ್ನು ಇಂಗ್ಲಿಷಿನಲ್ಲಿ ಬರೆಯಲೂ ಬಾರದ ಬಜ್ವಾ ನಗರದ ಸಂಸ್ಕೃತಿಯಲ್ಲಿ ಮಿಳಿತಗೊಂಡರು. ದೂರದರ್ಶನದಲ್ಲಿ ಬಂದ ರೂಪದರ್ಶಿ ಸ್ಪರ್ಧೆಯೊಂದು ಅವರನ್ನು ಮುಂಬೈಗೆ ಕರೆದುಕೊಂಡು ಹೋಗಿತ್ತು. ನಾನು 25 ಕೇಜಿ ಇಳಿಸಿದರೆ ಈ ಎಲ್ಲಾ ರೂಪದರ್ಶಿಗಳಿಗಿಂತ ಉತ್ತಮವಾಗುತ್ತೇನೆ ಎಂದುಕೊಂಡೆ. ಹೀಗಾಗಿ ಸುಮ್ಮನಿರಲಾಗದೆ ಪ್ರಯತ್ನ ಪಟ್ಟೆ ಎನ್ನುತ್ತಾರೆ. ಕಬಡ್ಡಿ ಆಟಗಾರನಾಗಿ ಬೆಳೆಯುತ್ತಿದ್ದರೂ ರೂಪದರ್ಶಿಯಾಗುವ ಉತ್ಸಾಹದಿಂದ ತೂಕ ಇಳಿಸಿಕೊಂಡರು. ಸ್ಥಳೀಯ ಸಂಗೀತ ವಿಡಿಯೋಗಳಲ್ಲಿ ನಟಿಸಿದರೂ ಸಮಾಧಾನವಾಗದೆ ದೆಹಲಿ ಅಥವಾ ಮುಂಬೈಗೆ ಹೋಗಲು ನಿರ್ಧರಿಸಿದರು. ಮುಂಬೈಯಲ್ಲಿ ಅವರಿಗೆ ಇರಲು ಸಂಬಂಧಿಕರ ಮನೆ ಇದ್ದ ಕಾರಣ ಅಲ್ಲಿಗೇ ತೆರಳಿದರು. ಮಹಾನಗರದಲ್ಲಿ ಅವರಿಗೆ ಉತ್ತಮ ಸ್ನೇಹಿತರೂ ಸಿಕ್ಕರು. ರೋಹಿತ್ ಬಾಲ್ ಗುರುವಾದರೆ, ವಿನ್ಯಾಸಕಾರರಾದ ಸಬ್ಯಸಾಚಿ ಮುಖರ್ಜೀ ಮತ್ತು ವರುಣ್ ಬಾಹ್ಲ್, ರೂಪದರ್ಶಿ ಶೀತಲ್ ಮಲ್ಹಾರ್ ಮತ್ತು ಬರಹಗಾರ ನಿಖಿಲ್ಲ ಖನ್ನಾ ಜೊತೆಯಾದರು. ಆತನಲ್ಲಿ ಫ್ಯಾಶನ್ ಪ್ರಜ್ಞೆ ಮತ್ತು ಅದರ ಕುರಿತ ಗೌರವ ಇತ್ತು. ಜನಪ್ರಿಯತೆ ಸಿಕ್ಕರೂ ಗ್ರಾಮವನ್ನು ಮರೆಯಲಿಲ್ಲ. ಮನೆಯಲ್ಲೇ ಅಡುಗೆ ಮಾಡುತ್ತಿದ್ದರು. ಸ್ನೇಹಿತರನ್ನು ಮನೆಗೆ ಕರೆಯುತ್ತಿದ್ದರು. ಫ್ಯಾಷನ್ ಜಗತ್ತಿನಲ್ಲೂ ಮಾದಕ ದ್ರವ್ಯ ವ್ಯಸನದ ಬಗ್ಗೆ ಅವರಿಗೆ ಗೊತ್ತಿತ್ತು.
ರೂಪದರ್ಶಿಯ ಸ್ವಯಂ ಜೀವನ ಸೀಮಿತವಾಗಿರುತ್ತದೆ. ಮಿಲಿಂದ್ ಸೋಮನ್ ಅವರಂತಹ ಕೆಲವರು ಮಾತ್ರ ಮಧ್ಯ ವಯಸ್ಸಿನಲ್ಲೂ ಟಾಪ್ ಸ್ಥಾನದಲ್ಲಿರುತ್ತಾರೆ. ಉಳಿದವರು ಟಿವಿ ಮತ್ತು ಸಿನೆಮಾಗಳಿಗೆ ತೆರಳುತ್ತಾರೆ. ಉಳಿದಂತೆ ಫೋಟೋಗ್ರಫಿ ಅಥವಾ ಇವೆಂಟ್ ಮ್ಯಾನೇಜ್ಮೆಂಟ್ ಕಡೆ ತೆರಳುತ್ತಾರೆ. ಆದರೆ ಬಜ್ವಾ ಮಾತ್ರ ತನ್ನ ಊರಿಗೆ ಮರಳಿದರು. ಅವರಂತೆ ಮುಂಬೈಗೆ ಬಂದ ಹಲವು ಜಾತ್ ಸಮುದಾಯ, ಹರಿಯಾಣದವರು ಮತ್ತು ಪಂಜಾಬಿನವರು ಮುಂಬೈ ಮತ್ತು ದೆಹಲಿಯಲ್ಲೇ ನೆಲೆ ಕಂಡಿದ್ದಾರೆ. ಈಗ ಬಜ್ವಾ ತಮ್ಮ ತಾಯಿಗೆ ಅಡುಗೆಯಲ್ಲಿ ಸಹಾಯವೂ ಮಾಡುತ್ತಾರೆ ಮತ್ತು ತರಕಾರಿ ಉದ್ಯಾನವನ್ನೂ ನೋಡಿಕೊಳ್ಳುತ್ತಾರೆ. ಆದರೆ ಫ್ಯಾಷನ್ ಬಗ್ಗೆ ಗೊತ್ತಿದ್ದವರು ಅವರನ್ನು ಮಹಾತ್ವಾಕಾಂಕ್ಷಿಯಾಗಿ ಟಾಪ್ ಸ್ಥಾನಕ್ಕೇರಿದ ವ್ಯಕ್ತಿಯಾಗಿ ನೆನಪಿಸಿಕೊಳ್ಳುತ್ತಾರೆ. ತನ್ನ ಕಾರ್ಯತಂತ್ರ ಮತ್ತು ಗುರಿಯನ್ನು ಇಟ್ಟುಕೊಂಡು ವ್ಯವಸ್ಥೆಯನ್ನು ಬದಲಿಸಿದ ವ್ಯಕ್ತಿ ಎನ್ನುತ್ತಾರೆ. ಆರಂಭದಲ್ಲಿ ಅವರನ್ನು ರೋಹಿತ್ ಬಾಲ್ ವ್ಯಕ್ತಿ ಎಂದೇ ಕರೆಯಲಾಗುತ್ತಿತ್ತು. ರೋಹಿತ್ ಬಾಲ್ ಅವರಿಗೆ ಆಪ್ತರಾಗಿದ್ದ ಮತ್ತೊಬ್ಬ ರೂಪದರ್ಶಿ ಜೊತೆ ಜಗಳವಾಗಿತ್ತು ಎನ್ನುವ ಸುದ್ದಿಯೂ ಇದೆ. ಆದರೆ ಈ ಬಗ್ಗೆ ಅವರೇನೂ ಮಾತನಾಡುವುದಿಲ್ಲ. ಮುಂಬೈನ ಕೊನೆಯ ದಿನಗಳಲ್ಲಿ ಇದ್ದ ಒಬ್ಬ ಸ್ನೇಹಿತೆಯ ಬಗ್ಗೆ ಮಾತ್ರ ಹೇಳಿಕೊಳ್ಳುತ್ತಾರೆ. ಆದರೆ ಆ ಪ್ರೇಮ ಸಂಬಂಧ ಕೂಡಿಬರಲಿಲ್ಲ ಎಂದು ಸುಮ್ಮನಾದರು.
ಊರಿಗೆ ವಾಪಾಸಾದ ಮೇಲೆ ತಮಗಿಷ್ಟವಿಲ್ಲದ್ದನ್ನೆಲ್ಲ ಮರೆತರು. ಆರಂಭದ ದಿನಗಳಲ್ಲಿ ರಾತ್ರಿ 9 ಗಂಟೆಯಾದಾಗ ಮನೆಗೆ ಹೋಗಲು ಸಿದ್ಧವಾದ ಅವರನ್ನು ಎಲ್ಲಿಗೆ ಹೋಗುತ್ತೀ ಎಂದು ಸ್ನೇಹಿತರು ಪ್ರಶ್ನಿಸಿದರೆ ಮನೆಗೆ ಎಂದು ಉತ್ತರಿಸಿದ್ದರು. ಏಕೆ ಎಂಬ ಅವರ ಪ್ರಶ್ನೆಗೆ ಮಲಗಲು ಎನ್ನುವ ಉತ್ತರ ಕೊಟ್ಟಾಗ ಎಲ್ಲರೂ ನಕ್ಕಿದ್ದರು. ಮುಂಬೈನಲ್ಲಿ ಈಗ ಬೆಳಗಾಗಿದೆ ಎಂದು ಸ್ನೇಹಿತರು ಅವರಿಗೆ ಹೇಳಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಧೀರ್ಘ ರಾತ್ರಿ ಮತ್ತು ಧೀರ್ಘ ಹಗಲಿನ ದಶಕ ಅವರ ಬೆನ್ನಿಗಿದೆ. ಆರಂಭದ ದಿನಗಳಲ್ಲಿ ಅವರೂ ಆಲ್ಕೋಹಾಲ್ ಸೇವನೆ ಮಾಡುತ್ತಿದ್ದರು. ಬಜ್ವಾ ವಾಪಾಸು ಗ್ರಾಮಕ್ಕೆ ತೆರಳಲು ನಿರ್ಧರಿಸಿದ ಸಂದರ್ಭದಲ್ಲಿ ಫ್ಯಾಷನ್ ಜಗತ್ತಿನ ಆಕರ್ಷಣೆ ಹೆಚ್ಚಾಗಿ ಅವರಲ್ಲಿ ಉಳಿದಿರಲಿಲ್ಲ. ಈಗ ಅವರು ಕುಡಿತ ಬಿಟ್ಟಿದ್ದಾರೆ.ಬೆಳಗಿನ ಜಾವ ನಾಲ್ಕೂವರೆಗೆ ಎದ್ದು ತಮ್ಮದೇ ತಂಡದ ಜೊತೆಗೆ ಕಬಡ್ಡಿ ಆಡುತ್ತಾರೆ. ಮಧ್ಯಾಹ್ನ ತಾಯಿ ಜೊತೆ ಕಳೆಯುತ್ತಾರೆ. ಸಂಜೆ ಮೈದಾನದಲ್ಲಿ ಕಠಿಣ ದೈಹಿಕ ತರಬೇತಿ. ಬಜ್ವಾ ಪಂಜಾಬಿ ಸಾಹಿತ್ಯವನ್ನೂ ಓದುತ್ತಾರೆ. ಆದರೆ ನಗರದಲ್ಲಿ ಇದ್ದಾಗ ಮಾತನಾಡುವಷ್ಟು ಚೆನ್ನಾಗಿ ಈಗ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ. ಬಜ್ವಾ ಈಗ 30ರ ವಯಸ್ಸಿನಲ್ಲಿದ್ದಾರೆ. ಭವಿಷ್ಯದಲ್ಲಿ ತಮಗೇನಿದೆ ಎನ್ನುವುದು ಅವರಿಗೆ ಗೊತ್ತಿಲ್ಲ. "ಒಂದು ಕ್ಷಣದಲ್ಲಿ ಒಂದು ವಿಷಯದ ಕಡೆಗೆ ಮಾತ್ರ ಗಮನ ಕೊಡುತ್ತೇನೆ" ಎನ್ನುತ್ತಾರೆ. ಈಗ ಅವರ ಗುರಿ ಕಬಡ್ಡಿ ತಂಡ ಕಟ್ಟುವುದು. ಕಬಡ್ಡಿ ಮೈದಾನ ಸಿದ್ಧಪಡಿಸುವುದು. ಹೆತ್ತವರ ಜೊತೆಗೆ ತಮ್ಮ ಬಳಿ ತರಬೇತಿ ಪಡೆಯುವ ಮಕ್ಕಳ ಕಡೆಗೆ ಅವರ ಒಲವು. ಆದರೆ ಫ್ಯಾಷನ್ ಜಗತ್ತು ತಮಗಲ್ಲ, ತಮ್ಮ ಮಕ್ಕಳು ಬೇಕಾದರೆ ಹೋಗಬಹುದು ಎನ್ನುತ್ತಾರೆ ಬಜ್ವಾ ಖಾನ್.
ಕೃಪೆ: www.hindustantimes.com







